Kantara : ನಟ ಚೇತನ್ ಗೆ ತಿರುಗೇಟು ನೀಡಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಸಿನಿಮಾ ಕಾಂತಾರ ದೇಶ ವಿದೇಶಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಅಲ್ಲೋ ಇಲ್ಲೋ ಕೆಲವೊಂದು ಅಪಸ್ವರಗಳು ಎದ್ದು ಕಾಣುತ್ತಿದೆ. ಅದರಲ್ಲಿ ಮುಖ್ಯವಾಗಿ ನಟ ಚೇತನ್ ಅವರ ಟ್ವೀಟ್. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂಬ ಮಾತು. ಈ ಬಗ್ಗೆ ಭಾರೀ ಚರ್ಚೆ ನಡೆದಿದ್ದು ನಂತರ ತಾವು ಹೇಳಿದ್ದೇ ಸರಿ ಎಂದು ಚೇತನ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. ಆದರೆ ರಿಷಬ್ ಶೆಟ್ಟಿ ಅವರು ಈ ಮಾತಿಗೆ ಪರೋಕ್ಷವಾಗಿ ಚೇತನ್‌ಗೆ ತಿರುಗೇಟು ನೀಡಿದ್ದಾರೆ. ‘ಈ ವಿಚಾರದಲ್ಲಿ ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ’ ಎಂಬ ಮಾತನ್ನು ಹೇಳಿದ್ದಾರೆ ರಿಷಬ್.

 

‘ಮೂಲ ನಿವಾಸಿಗಳು ನಾನು ಈ ಸಿನಿಮಾ ಮಾಡಬೇಕಾದರೆ ನನ್ನ ಜೊತೆಯಲ್ಲಿದ್ದರು. ಚಿಕ್ಕಂದಿನಿಂದಲೇ ನಾವು ದೈವ ನಂಬಿದ್ದೇವೆ. ಇಂಥದ್ದೊಂದು ಕತೆ ಹೇಳೋಕೆ ಹೋಗ್ತಿದ್ದೀನಿ ಎಂದಾಗ ಇಲ್ಲಿನ ಮೂಲ ಜನರಿಗೆ ನೋವಾಗಬಾರದು ಎಂದು ನಾನು ಬಯಸಿದ್ದೆ. ಎಲ್ಲೂ ದೈವ ದೇವಾದಿಗಳಿಗೆ, ಇದನ್ನು ಆರಾಧಿಸುವ ಜನರಿಗೆ ನೋವಾಗಬಾರದು, ಎಲ್ಲೂ ಕೂಡ ತಪ್ಪಾಗಬಾರದು ಎಂಬುದು ನನ್ನ ಉದ್ದೇಶ ಆಗಿತ್ತು’ ಎಂದಿದ್ದಾರೆ ರಿಷಬ್.

‘ಇದಕ್ಕೆ ಬೇಕಾದ ಎಲ್ಲಾ ಮುಂಜಾಗ್ರತೆಗಳನ್ನು ನಾನು ತೆಗೆದುಕೊಂಡಿದ್ದೆ. ನನ್ನ ಜೊತೆಯಲ್ಲೇ ಅವರನ್ನು ಇರಿಸಿಕೊಂಡು ಪ್ರತಿಯೊಂದು ಶಾಟ್ ತೆಗೆದಿದ್ದೇವೆ. ದೈವಾರಾಧನೆಗೆ ಸಂಬಂಧಿಸಿದ ಪ್ರತಿ ದೃಶ್ಯಗಳನ್ನು ಅಲ್ಲಿನ ಜನರಿಗೆ ತೋರಿಸುತ್ತಿದ್ದೆವು. ಈ ವಿಚಾರದಲ್ಲಿ ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ಆ ಬಗ್ಗೆ ನೋ ಕಾಮೆಂಟ್ಸ್. ಅದಕ್ಕೆ ಸಂಬಂಧ ಪಟ್ಟವರು ಮಾತನಾಡುತ್ತಾರೆ. ಅದಕ್ಕೆಲ್ಲಾ ನಾವೇಕೆ ತಲೆ ಕೆಡಿಸಿಕೊಳ್ಳಬೇಕು’ ಎಂದಿದ್ದಾರೆ ರಿಷಬ್.

‘ಸಿನಿಮಾ ಮಾಡುವುದು ನನ್ನ ಕೆಲಸ. ತಪ್ಪು-ಸರಿ ಅಂತ ಹೇಳುವ ಅಧಿಕಾರ ಜನರಿಗೆ ಇದೆ. ಸದ್ಯ ‘ಕಾಂತಾರ’ ಸಿನಿಮಾ ನನ್ನದಲ್ಲ. ಅದಕ್ಕೆ ನಾನು ಏನು ಮಾಡುವಂತಿಲ್ಲ. ‘ಕಾಂತಾರ’ ಸಿನಿಮಾಗಾಗಿ ನಾನೇನು ಕೆಲಸ ಮಾಡಿದ್ದೇನೆ ಅದಕ್ಕೆ ಫಲ ಸಿಕ್ಕಿದೆ. ಈ ಚಿತ್ರಕ್ಕಾಗಿ ರಕ್ತ ಸುರಿಸಿದ್ದೇನೆ. ಎಲ್ಲವನ್ನೂ ವೀಕ್ಷಕರಿಗೆ ಬಿಟ್ಟಿದ್ದೇನೆ. ಸಂಸ್ಕೃತಿ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗೂ ಇಲ್ಲ. ಹಾಗೇ ಕೇಳುವವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆ ದೈವಾರಾಧನೆ ಮಾಡುವವರಿಗೆ ಅಷ್ಟೇ ಇದರ ಬಗ್ಗೆ ಮಾತಾಡುವ ಅರ್ಹತೆ ಇದೆ’ ಎಂದು ರಿಷಬ್ ಹೇಳಿದ್ದಾರೆ.

Leave A Reply

Your email address will not be published.