ಭಾರೀ ಮಳೆಗೆ ನಮ್ಮ ಮೆಟ್ರೋ ತಡೆಗೋಡೆ ಕುಸಿತ | ಸ್ಥಳೀಯರು ತಿಳಿಸಿದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು
ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಭಾರೀ ಅವಾಂತರ ಸೃಷ್ಟಿ ಮಾಡಿದೆ. ಹೌದು, ನಮ್ಮ ಮೆಟ್ರೋ ತಡೆಗೋಡೆ ಕುಸಿತಗೊಂಡಿದೆ. ಇಷ್ಟು ದೊಡ್ಡ ಅವಾಂತರ ನಡೆದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ನೋಡಿಲ್ಲ. ಹಾಗಾಗಿ ಸ್ವಾಭಾವಿಕವಾಗಿ ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಶೇಷಾದ್ರಿಪುರಂ ಸಮೀಪ ಜೆಡಿಎಸ್ ಪಕ್ಷದ ಮುಂಭಾಗದಲ್ಲಿರುವ ನಮ್ಮ ಮೆಟ್ರೋ ತಡೆ ಗೋಡೆ ಭಾರೀ ಮಳೆಗೆ ಕುಸಿದಿದ್ದು, ಇದರಿಂದಾಗಿ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು, ಬೈಕುಗಳು ಜಖಂಗೊಂಡಿವೆ.
ಮೆಟ್ರೋ ತಡೆಗೋಡೆ ಕುಸಿತದಿಂದ ಪಕ್ಕದಲ್ಲಿದ್ದ 6 ಕಾರುಗಳು, 2 ಬೈಕ್‌ಗಳಿಗೆ ಹಾನಿಯಾಗಿದೆ. ಆದರೆ ಗೋಡೆ ಕುಸಿತದ ಕುರಿತು ಬಿಎಂಆರ್‌ಸಿಎಲ್ ( BMRCL) ಅಧಿಕಾರಿಗಳಿಗೆ ರಾತ್ರಿಯೇ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು 10 ಗಂಟೆ ಕಳೆದರೂ ಸ್ಥಳಕ್ಕೆ ಆಗಮಿಸಿಲ್ಲ.
ನಾಗಸಂದ್ರ-ರೇಷ್ಮೆ ಸಂಸ್ಥೆ ನಡುವಿನ ಹಸಿರು ಮಾರ್ಗದ ನಮ್ಮ ಮೆಟ್ರೋ ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಈ ಮಾರ್ಗದಿಂದ ಮುಂದೆ ಮೆಜೆಸ್ಟಿಕ್ ಜಂಕ್ಷನ್ ನಿಲ್ದಾಣವಿದೆ.
ಬುಧವಾರ ರಾತ್ರಿ ಬೆಂಗಳೂರು ನಗರದಲ್ಲಿ ಭಾರೀ ಮಳೆ ಸುರಿದಿದೆ. ಹಂಪಿ ನಗರದಲ್ಲಿ ಅತಿ ಹೆಚ್ಚು ಎಂದರೆ 85 ಮಿ. ಮೀ. ಮಳೆಯಾಗಿದೆ. ಸುಮಾರು 3 ಗಂಟೆಗಳ ಕಾಲ ಸುರಿದ ಮಳೆಗೆ ಶೇಷಾದ್ರಿಪುರಂ ಬಳಿ ನಮ್ಮ ಮೆಟ್ರೋ ತಡೆಗೋಡೆ ಕುಸಿತಗೊಂಡಿದೆ.