Cyclone : ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ | ಕರ್ನಾಟಕ – ಕೇರಳ ಭಾರೀ ಮಳೆ ಸಂಭವ!!!
ಕಳೆದೆರಡು ದಿನಗಳಿಂದ ಎಲ್ಲೆಡೆ ಮಳೆರಾಯ ದರ್ಶನ ಕೊಟ್ಟು ಇಳೆಗೆ ತಂಪು ನೀಡಿದರೆ ಮತ್ತೆ ಕೆಲವೆಡೆ ರಸ್ತೆಗಳಲ್ಲಿ ಯತ್ತೇಚವಾಗಿ ನೀರು ಹರಿದು ರಸ್ತೆಗಳು ಬ್ಲಾಕ್ ಆದ ಘಟನೆಯೂ ಕೂಡ ನಡೆದಿದೆ.
ಇನ್ನೇನು ಮುಂಗಾರು (Monsoon) ಅಬ್ಬರ ಕಡಿಮೆಯಾಗುತ್ತಿದ್ದು, ಮುಂಗಾರು ಮಳೆ ಶುರುವಾದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಚಂಡಮಾರುತವೊಂದು (Cyclone) ಅಪ್ಪಳಿಸಲು ಸಿದ್ಧವಾಗಿದೆ. ಈ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಮಾನ್ಸೂನ್ ನಂತರದ ಮೊದಲ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.
ಆಂಧ್ರಪ್ರದೇಶ- ಒಡಿಶಾ ಕರಾವಳಿಗೆ ಈ ಚಂಡಮಾರುತ ಮೊದಲು ಅಪ್ಪಳಿಸುವ ಸಾಧ್ಯತೆಯಿದ್ದು ಈ ಸೈಕ್ಲೋನ್ ಬಗ್ಗೆ ಹವಾಮಾನ ಇಲಾಖೆಯ ತಜ್ಞರು ಇನ್ನೂ ಯಾವ ಮಾಹಿತಿ ನೀಡಿಲ್ಲ. ಅಕ್ಟೋಬರ್ 18ರ ಸುಮಾರಿಗೆ ಉತ್ತರ ಅಂಡಮಾನ್ ಸಮುದ್ರದ ಮೇಲೆ ಈ ಚಂಡಮಾರುತ ರೂಪುಗೊಳ್ಳಲಿದ್ದು,ಇದು ನೈಋತ್ಯ ಬಂಗಾಳ ಕೊಲ್ಲಿಯ ಕಡೆಗೆ ಚಲಿಸುತ್ತದೆ. ಅಕ್ಟೋಬರ್ 20ರ ವೇಳೆಗೆ ಈ ಚಂಡಮಾರುತವು ಕಡಿಮೆ ಒತ್ತಡದ ಪ್ರದೇಶದಲ್ಲಿ ತೀವ್ರಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ಅಕ್ಟೋಬರ್ 18ರ ಸುಮಾರಿಗೆ ಪೂರ್ವ ಕರಾವಳಿಗೆ ಸೂಪರ್-ಸೈಕ್ಲೋನ್ ಅಪ್ಪಳಿಸುವ ವದಂತಿಗಳು ಕಳೆದ ವಾರ ಸಂಚಲನ ಮೂಡಿಸಿತ್ತು. ಆದರೆ, IMD ಈ ವರದಿಗಳನ್ನು ತಳ್ಳಿಹಾಕಿದ ಬಳಿಕ ಹವಾಮಾನ ಇಲಾಖೆ ಈ ಬಗ್ಗೆ ಇದುವರೆಗೂ ಯಾವುದೇ ಸಲಹೆಯನ್ನು ನೀಡಿಲ್ಲ.
ಹವಾಮಾನ ಇಲಾಖೆ ಇನ್ನೂ ಯಾವುದೇ ಎಚ್ಚರಿಕೆ ನೀಡದಿದ್ದರೂ ಕೂಡ ಒಡಿಶಾ ಸರ್ಕಾರ ಕಳೆದ ವಾರ ತನ್ನ ಅಧಿಕಾರಿಗಳಿಗೆ ಮುಂದಿನ 2 ತಿಂಗಳಲ್ಲಿ ಸಂಭವನೀಯ ಚಂಡಮಾರುತಗಳಿಗೆ ತಯಾರಿ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ.
ಒಡಿಶಾದಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ತೀವ್ರ ಚಂಡಮಾರುತ ಎದುರಾಗಲಿದ್ದು, ಕೆಲವೊಮ್ಮೆ ಡಿಸೆಂಬರ್ 15ರವರೆಗೂ ಈ ಚಂಡಮಾರುತ ಉಂಟಾಗಲಿದೆ. ಈ ಎರಡೂವರೆ ತಿಂಗಳನ್ನು ಒಡಿಶಾದಲ್ಲಿ “ಸೈಕ್ಲೋನ್ ಸೀಸನ್” ಎಂದು ಪರಿಗಣಿಸಲಾಗುತ್ತದೆ.
ಪಿಟಿಐ ಮಾಹಿತಿ ಪ್ರಕಾರ, ಕಳೆದ ಸೋಮವಾರ ನಡೆದ ರಾಜ್ಯ ಮಟ್ಟದ ಚಂಡಮಾರುತ ಸಿದ್ಧತಾ ಸಭೆಯಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಸ್‌ಸಿ ಮೊಹಾಪಾತ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದಲ್ಲದೆ, ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಕೇರಳದ ಕರಾವಳಿ ತೀರದಲ್ಲಿ ಚಂಡಮಾರುತದ ಪರಿಚಲನೆಯು ಕಡಿಮೆ ಉಷ್ಣವಲಯದ ಮಟ್ಟದಲ್ಲಿದ್ದು, ಅಕ್ಟೋಬರ್ 18ರ ಸುಮಾರಿಗೆ ಉತ್ತರ ಅಂಡಮಾನ್ ಸಮುದ್ರ ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ, ಪುದುಚೇರಿ, ಕಾರೈಕಲ್ ಮತ್ತು ಕೇರಳದಲ್ಲಿ ಅಕ್ಟೋಬರ್ 21ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು IMD ಮಾಹಿತಿ ನೀಡಿದೆ.
ಇಂದು ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾದಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮುಂದಿನ 2 ದಿನಗಳಲ್ಲಿ ವಿದರ್ಭ, ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಮಳೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಅಕ್ಟೋಬರ್ 20ರಂದು ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.