ಫೇಸ್ಬುಕ್ ಲೈವ್ ಸಾಹಸ ಮಾಡೋಕೆ ಹೋಗಿ ತೀವ್ರ ಅಪಘಾತ | BMW ಕಾರಿನಲ್ಲಿದ್ದ ನಾಲ್ವರು ಮೃತ್ಯು!!!

ನಿಧಾನವೇ ಪ್ರಧಾನ ಎಂಬ ಮಾತನ್ನು ಯಾರು ಎಷ್ಟೇ ಬಾರಿ ಹೇಳಿದರೂ ಕೂಡ ಕಿವಿಗೆ ಹಾಕಿಕೊಳ್ಳದೆ, ಸಂಚಾರಿ ನಿಯಮಗಳು ಇದ್ದರೂ ಪಾಲನೆ ಮಾಡದೆ ಅಪಾಯಕ್ಕೆ ಆಹ್ವಾನ ಮಾಡಿಕೊಳ್ಳುವ ಆನೇಕ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.

 

ಹುಚ್ಚು ಹರಸಾಹಸ ಮಾಡಿ ಎಲ್ಲರ ಮುಂದೆ ತಮ್ಮ ಪ್ರತಿಭೆ ಅನಾವರಣಗೊಳಿಸುವ ಸಾಹಸಕ್ಕೆ ಮುಂದಾಗಿ ಜೀವವನ್ನೇ ಬಲಿ ಪಡೆದುಕೊಂಡಿರುವ ಘೋರ ಹಾಗೂ ವಿಷಾದನೀಯ ಘಟನೆಯೊಂದು ವರದಿಯಾಗಿದೆ.

ಪೂರ್ವಾಂಚಲ ಎಕ್ಸ್‌ಪ್ರೆಸ್ ಹೈವೇಯ ಸುಲ್ತಾನ್‍ಪುರದಲ್ಲಿ ಅತಿ ವೇಗವಾಗಿ ಹಾಗೂ ಅಪಾಯಕಾರಿ ರೀತಿಯಲ್ಲಿ ಕಾರು ಚಾಲನೆ ಮಾಡುತ್ತಾ ಫೇಸ್‍ಬುಕ್ ಲೈವ್ ಮಾಡುವ ಉತ್ಸಾಹದಲ್ಲಿ ನಾಲ್ವರು ಸ್ನೇಹಿತರು ಬಿಎಂಡಬ್ಲ್ಯೂ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಬಿಹಾರದ ರೋಹ್ಟಾಸ್ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಡಾ.ಆನಂದ್ ಪ್ರಕಾಶ್ (35) ಹಾಗೂ ಇತರ ಮೂವರು ಸಹ ಪ್ರಯಾಣಿಕರು ಅತ್ಯುತ್ಸಾಹದಿಂದ 230 ಕಿಲೋಮೀಟರ್ ವೇಗದಲ್ಲಿ ಚಲಾಯಿಸುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರು ಅಪಘಾತಕ್ಕೀಡಾಗಿ ಬೀಕರ ದುರಂತ ನಡೆದಿದೆ.

ಬಿಹಾರದ ನಾಲ್ಕು ಮಂದಿ ದೆಹಲಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಹೊರಟಿದ್ದು, ವೇಗವಾಗಿ ಚಲಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಟ್ರಕ್‍ಗೆ ಢಿಕ್ಕಿ ಹೊಡೆದಿದೆ.

ಈ ಸಂದರ್ಭ ಭೀಕರವಾಗಿ ನಡೆದ ಘಟನೆಯಲ್ಲಿ ನಜ್ಜುಗುಜ್ಜಾಗಿ ಎಂಜಿನಿಯರ್ ದೀಪಕ್ ಕುಮಾರ್, ರಿಯಲ್ ಎಸ್ಟೇಟ್ ಉದ್ಯಮಿ ಅಖಿಲೇಶ್ ಸಿಂಗ್ ಮತ್ತು ಉದ್ಯಮಿ ಮುಖೇಶ್ ಅವರ ರಕ್ತಸಿಕ್ತ ದೇಹಗಳು ರಸ್ತೆಯಲ್ಲಿ ಚೂರು ಚೂರಾಗಿ ಬಿದ್ದ ದೃಶ್ಯ ಕಂಡುಬಂದಿದೆ.

ಫೇಸ್‍ಬುಕ್ ಲೈವ್‍ನಲ್ಲಿ ಈ ಸಾಹಸ ನಡೆಸುತ್ತಿದ್ದ ನಾಲ್ವರ ಪೈಕಿ ಒಬ್ಬ ಸ್ಪೀಡ್‍ಮೀಟರ್ ಇನ್ನೇನು ಕೆಲವೇ ಕ್ಷಣದಲ್ಲಿ 300 ಕಿಲೋಮೀಟರ್ ತಲುಪಲಿದೆ ಎಂದು ಹೇಳುತ್ತಿರುವುದು ರೆಕಾರ್ಡ್ ಆಗಿದ್ದು, ಈ ಪೈಕಿ ಫೇಸ್‍ಬುಕ್ ಲೈವ್‍ನಲ್ಲೇ ಮತ್ತೊಬ್ಬ ಸಾಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾನೆ. ಆದರೆ, ದುರದೃಷ್ಟವಶಾತ್ ಕೆಲ ಕ್ಷಣಗಳಲ್ಲಿಯೇ ಆತ ಬಯಸಿದ್ದ ದುರಂತ ಸಂಭವಿಸಿದೆ.

ಈ ದುರ್ಘಟನೆಯ ಕುರಿತಾದ ಸಮಗ್ರ ತನಿಖೆಗೆ ಸುಲ್ತಾನ್‍ಪುರ ಎಸ್ಪಿ ಸೋಮನ್ ಬರ್ಮಾ ಮುಂದಾಗಿದ್ದು, ತಲೆ ಮರೆಸಿಕೊಂಡಿರುವ ಟ್ರಕ್ ಚಾಲಕನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದ್ದು, ಅಪಘಾತದ ತಾಂತ್ರಿಕ ತನಿಖೆ ನಡೆಸಲಾಗುತ್ತಿದೆ.

ಕಾರಿನ ವೇಗದ ಚಾಲನೆಯ ಜೊತೆಗೆ ಟ್ರಕ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಆರೋಪ ಹೊರಿಸಲಾಗಿದೆ.

Leave A Reply

Your email address will not be published.