ಅಂಗಡಿ ಹೊರಗೆ ಉರಿಯುತ್ತಿದ್ದ ಬಲ್ಬ್ ಅನ್ನೇ ಕಳವುಗೈದ ಪೊಲೀಸ್!
ಕಾಲ ಬದಲಾಗಿದೆ. ಇನ್ನು ಮುಂದಕ್ಕೆ ಪೊಲೀಸನ್ನೇ ಕಳ್ಳರು ಹಿಡಿ ಬೇಕಾದಿತೋ ಏನೋ.. ಯಾಕಂದ್ರೆ, ಪೊಲೀಸ್ ಅಂದರೇನೇ ಶಿಸ್ತುಗೆ ಬದ್ಧವಾಗಿರುವವರು. ಇನ್ನೊಬ್ಬರು ತಪ್ಪು ಕೆಲಸ ಮಾಡಿದಾಗ ಅದನ್ನ ತಿದ್ದಿ ಶಿಕ್ಷಿಸುವವರು ಅವರಾಗಿರುತ್ತಾರೆ. ಆದ್ರೆ, ಇಲ್ಲೊಂದು ಕಡೆ ಪೊಲೀಸ್ ಅಧಿಕಾರಿಯೇ ತಪ್ಪು ಹಾದಿ ಹಿಡಿದಿದ್ದಾರೆ.
ಹೌದು. ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಕಳ್ಳ ಎಂಬ ಪಟ್ಟದೊಂದಿಗೆ ವೃತ್ತಿಯಿಂದ ಅಮಾನತುಗೊಂಡಿದ್ದಾರೆ. ಅಷ್ಟಕ್ಕೂ ಆ ಪೊಲೀಸ್ ಅಧಿಕಾರಿ ಕದ್ದಿದ್ದು ಕೇವಲ ಒಂದು ಬಲ್ಬ್!. ಅಂಗಡಿಯ ಹೊರಭಾಗದಲ್ಲಿ ಉರಿಯುತ್ತಿದ್ದ ಬಲ್ಬ್ ಅನ್ನು ಕಳವುಗೈದಿದ್ದು, ಕಳವು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿದ್ದು, ಬಳಿಕ ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಕಾನ್ಸ್ ಟೇಬಲ್ ವರ್ಮಾ ಅವರನ್ನು ಅಮಾನತು ಮಾಡಲಾಗಿದೆ.
ಎಂದಿನಂತೆ ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದ ಸಂದರ್ಭದಲ್ಲಿ ಬಲ್ಬ್ ಕಾಣೆಯಾಗಿರುವುದು ಮಾಲೀಕನ ಗಮನಕ್ಕೆ ಬಂದಿತ್ತು. ಬಳಿಕ ಅವರು ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ, ಪೊಲೀಸ್ ಅಧಿಕಾರಿಯ ಕಳ್ಳ ಬುದ್ಧಿ ತಿಳಿದು ಬಂದಿದೆ. ಯಾಕೆಂದರೆ ರಾತ್ರಿ ಡ್ಯೂಟಿಯಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಬಲ್ಬ್ ತೆಗೆದು ಕಿಸೆಯೊಳಗೆ ಹಾಕಿಕೊಂಡಿರುವ ದೃಶ್ಯ ಸೆರೆಯಾಗಿತ್ತು. ವೀಡಿಯೋದಲ್ಲಿ ಇರುವಂತೆ, “ಕಾನ್ಸ್ ಟೇಬಲ್ ರಾಜೇಶ್ ವರ್ಮಾ ಮುಚ್ಚಿದ್ದ ಅಂಗಡಿ ಬಳಿ ಬಂದು ಸುತ್ತಮುತ್ತ ಗಮನಿಸಿದ ನಂತರ, ಉರಿಯುತ್ತಿದ್ದ ಬಲ್ಬ್ ಅನ್ನು ತೆಗೆದು, ಕಿಸೆಯೊಳಗೆ ಹಾಕಿ ನಡೆದು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ದಸರಾ ಹಬ್ಬದಂದು ವರ್ಮಾ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ವರದಿ ತಿಳಿಸಿದೆ. ಕತ್ತಲಾಗಿದ್ದರಿಂದ ಆ ಬಲ್ಬ್ ಅನ್ನು ತೆಗೆದು ತಾನು ನಿಂತಿದ್ದ ಜಾಗದಲ್ಲಿ ಬಲ್ಬ್ ಹಾಕಿಕೊಂಡಿರುವುದಾಗಿ ಅಮಾನತುಗೊಂಡಿರುವ ಪೊಲೀಸ್ ಕಾನ್ಸ್ ಟೇಬಲ್ ವರ್ಮಾ ಸಮಜಾಯಿಷಿ ನೀಡಿರುವುದಾಗಿ ವರದಿ ತಿಳಿಸಿದೆ. ವರ್ಮಾಗೆ ಇತ್ತೀಚೆಗಷ್ಟೇ ಪ್ರಮೋಷನ್ ನೀಡಿ ಫುಲ್ಪುರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಆದರೆ, ಕೇವಲ ಬಲ್ಬ್ ನಿಂದಾಗಿ ಕೆಲಸವೇ ಕಳೆದುಕೊಳ್ಳುವಂತೆ ಆಗಿದೆ.