ಶೀಘ್ರವೇ ವಿಸ್ತರಿಸಲಿದೆ ಸಚಿವ ಸಂಪುಟ!? ಹಲವು ಕುರ್ಚಿ ಕಾಣಲಿದೆ ಹೊಸ ಮುಖ-ಕರಾವಳಿ ಜಿಲ್ಲೆಯ ಸಚಿವರುಗಳ ಅಧಿಕಾರ!?
ಬೆಂಗಳೂರು: ಕಳೆದ ಹಲವು ದಿನಗಳಿಂದ ಮೂಲೆ ಸರಿದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿಬಂದಿದ್ದು, ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರೇ ಸ್ಪಷ್ಟ ಮಾಹಿತಿಯೊಂದನ್ನು ಮಾಧ್ಯಮಗಳಿಗೆ ತಿಳಿಸಿದ್ದು, ಈ ಮೂಲಕ ರಾಜ್ಯದ ಹಲವು ನಾಯಕರಿಗೆ ಸಚಿವರಾಗುವ ಅವಕಾಶಗಳು ಸಿಗಲಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿಯವರು,ಆದಷ್ಟು ಬೇಗ ಸಚಿವ ಸಂಪುಟವನ್ನು ವಿಸ್ತರಿಸಿ ಸಚಿವ ಆಕಾಂಕ್ಷಿಗಳಿಗೆ ಸರ್ಕಾರ ಹಾಗೂ ಬಿಜೆಪಿ ಸಿಹಿ ಸುದ್ದಿ ನೀಡಲಿದೆ. ಶೀಘ್ರದಲ್ಲಿಯೇ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಈ ಬಗ್ಗೆ ಮಾತುಕತೆ ನಡೆಯಲಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ ಜನಸಂಕಲ್ಪ ಯಾತ್ರೆಯೂ ಪ್ರಾರಂಭಗೊಂಡಿದ್ದು, ಇದರ ಮಧ್ಯೆಯೇ ದೆಹಲಿಗೆ ತೆರಳುತ್ತೇನೆ. ಪಕ್ಷದ ಹಿರಿಯರೊಂದಿಗೆ ಮಾತನಾಡಿ, ಯಾರಿಗೆ ಸಿಹಿಯಾಗುತ್ತದೆ -ಕಹಿಯಾಗುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ ಎಂದರು. ಸದ್ಯ ಬಿಜೆಪಿ ನಾಯಕರಲ್ಲಿ ತಳಮಳ ಪ್ರಾರಂಭಗೊಂಡಿದ್ದು, ಈಗ ಇರುವ ಸಚಿವರುಗಳ ಕುರ್ಚಿಗೆ ಪೆಟ್ಟು ಬೀಳುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಶಾಸಕ ಎಸ್ ಅಂಗಾರ, ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಈ ಬಾರಿಯ ವಿಸ್ತರಣೆಯ ವೇಳೆ ಆ ಜಾಗಕ್ಕೆ ಬೇರೆ ಹೆಸರುಗಳು ಕೇಳಿಬರುತ್ತಿವೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.ಅಲ್ಲದೇ ರಾಜೀನಾಮೆ ನೀಡಿದ್ದ ಕೆ.ಎಸ್. ಈಶ್ವರಪ್ಪ ಅವರನ್ನು ಈ ಬಾರಿಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಮಾತುಗಳು ವ್ಯಕ್ತವಾಗಿದ್ದು, ಬೊಮ್ಮಾಯಿ ದೆಹಲಿ ಭೇಟಿಯ ಬಳಿಕ ಎಲ್ಲಾ ಊಹಾಪೋಹಾಗಳಿಗೂ ತೆರೆ ಬಿದ್ದು, ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವವರು ಯಾರು ಎನ್ನುವುದು ತಿಳಿದುಬರಬೇಕಿದೆ.