BIGG NEWS : ಪುತ್ತೂರು KSRTC ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು – ರಾಜ್ಯ ಸರ್ಕಾರ ಆದೇಶ

ದಕ್ಷಿಣಕನ್ನಡ : ಜಿಲ್ಲೆಯ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಪುತ್ತೂರು ತಾಲೂಕಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಇಡಲು ರಾಜ್ಯ ಸರಕಾರ ಅಸ್ತು ಎಂದಿದೆ. ಹಾಗಾಗಿ ಈ ಕುರಿತು ಶೀಘ್ರದಲ್ಲೇ ಈ ಹೆಸರಿನ ನಾಮಕರಣದ ಬಗ್ಗೆ ಸಮಾರಂಭ ನಡೆಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಸಾರಿಗೆ ಸಚಿವರಾದ ಶ್ರೀರಾಮುಲು, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ ಅವರನ್ನು ಆಮಂತ್ರಿಸಿ ಕೆಎಸ್‌ಆರ್‌ಟಿಸಿ ವತಿಯಿಂದ ಕಾರ್ಯಕ್ರಮ ಮಾಡಲಾಗುವುದು. ಈ ಸಂದರ್ಭದಲ್ಲಿ ನಾಮಫಲಕ ಅಳವಡಿಕೆ, ಅವಳಿ ವೀರರ ಪ್ರತಿಮೆ ಅನಾವರಣ ಮತ್ತು ಕೋಟಿ ಚೆನ್ನಯರ ಸಂಕ್ಷಿಪ್ತ ಇತಿಹಾಸವಿರುವ ಫಲಕ ಅನಾವರಣ ನಡೆಯಲಿದೆ ಎಂದು ಶುಕ್ರವಾರ ಸಂಜೆ ಪುತ್ತೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಪುತ್ತೂರು ಬಿಲ್ಲವ ಸಮಾಜದ ಮುಖಂಡರು ಮತ್ತು ಯುವವಾಹಿನಿ ಮುಖಂಡರು, ಹಾಗೆನೇ ಪಡುಮಲೆ ಸಮಿತಿಯವರು ಕೂಡ ಪುತ್ತೂರು ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡುವಂತೆ ಮನವಿ ಮಾಡಿದ್ದರು. ಈಗ ಈ ಕೆಲಸಕ್ಕೆ ಜಯ ದೊರಕಿದೆ ಎಂದೇ ಹೇಳಬಹುದು. ದ.ಕ. ಜನತೆಗೆ ಇದೊಂದು ಖುಷಿಯ ವಿಷಯ ಎಂದೇ ಹೇಳಬಹುದು.

ಈ ವಿಷಯವನ್ನು ನಾನು ನಗರಸಭೆ ಆಡಳಿತದ ಗಮನಕ್ಕೆ ತಂದಿದೆ. ನಗರಸಭಾಧ್ಯಕ್ಷ ಜೀವಂಧರ ಜೈನ್ ಅವರ ಮುತುವರ್ಜಿಯಿಂದಾಗಿ ನಗರಸಭೆ ಈ ಸಂಬಂಧ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿತು. ಅದನ್ನು ನಾನು ಕೆಎಸ್‌ಆರ್‌ಟಿಸಿ ಅಧ್ಯಕ್ಷರು ಮತ್ತು ಎಂ.ಡಿ. ಅವರ ಗಮನಕ್ಕೆ ತಂದೆ. ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ನಿರ್ಣಯ ಕೈಗೊಂಡು ಸಾರಿಗೆ ಇಲಾಖೆಗೆ ಕಳುಹಿಸಲಾಯಿತು. ಸಚಿವರಾದ ಶ್ರೀರಾಮುಲು ಅವರು ನನ್ನ ಮನವಿಗೆ ಸ್ಪಂದಿಸಿ ಇಲಾಖೆಯಿಂದ ಅನುಮತಿ ಕೊಡಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರ ಪ್ರಯತ್ನವೂ ಇದರಲ್ಲಿದೆ. ಇವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

ಮೈಸೂರು, ಬೆಂಗಳೂರು ಭಾಗದಿಂದ ನಿತ್ಯ ನೂರಾರು ಪ್ರಯಾಣಿಕರು ಪುತ್ತೂರಿಗೆ ಬರುತ್ತಾರೆ, ಅವರೆಲ್ಲರಿಗೂ ಕೋಟಿ ಚಿನ್ನೆಯರ ಮಹಿಮ, ಇತಿಹಾಸದ ಬಗ್ಗೆ ತಿಳಿಯಲು ಅನುಕೂಲವಾಗಲಿದೆ. 33 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪುತ್ತೂರು ಬಸ್ ನಿಲ್ದಾಣ ಜಿಲ್ಲೆಯಲ್ಲಿ ಸುಸಜ್ಜಿತ ನಿಲ್ದಾಣವಾಗಿದೆ. ಇದರ ಪ್ರತಿಷ್ಠೆಗೆ ಕೋಟಿ ಚೆನ್ನಯರ ಹೆಸರು ಕೀರ್ತಿ ಶಿಖರವಾಗಲಿದೆ ಎಂದು ಹೇಳಿದ ಮಠಂದೂರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡಬೇಕು ಎಂಬ ಬೇಡಿಕೆಯಿದೆ, ಅದು ಕೂಡ ಅದಷ್ಟು ಬೇಗ ಈಡೇರಲಿ ಎಂದು ಆಗ್ರಹಿಸುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಈ ಸುದ್ದಿಗೋಷ್ಠಿಯಲ್ಲಿ ಅನೇಕ ಪ್ರಮುಖರು ಭಾಗವಹಿಸಿದ್ದರು.

Leave A Reply

Your email address will not be published.