ಬೈಕ್’ಗೆ ಕ್ಯಾಂಟೀನ್ ಕಟ್ಟಿಕೊಂಡ ‘ ಬಿಕಾಂ ಇಡ್ಲಿವಾಲೆ ‘ | ಬಿಕಾಂ ಪದವೀಧರನ ಸ್ಪೂರ್ತಿದಾಯಕ ಕಥೆ
ಇತ್ತೀಚಿನ ದಿನಗಳಲ್ಲಿ ಬಿಕಾಂ ಅಥವಾ ಇನ್ನಿತರ ಪದವಿಗಳನ್ನು ಗಳಿಸಿದವರು ತನ್ನ ಘನತೆಯನ್ನು ಕಾಪಾಡುವುದರಲ್ಲೇ ಕಾಲ ಕಳೆಯುತ್ತಿರುತ್ತಾರೆ. ತಮ್ಮ ಜೀವನವನ್ನು ಮುಂದೆ ಸಾಗಿಸಲು ಸ್ವಾಭಿ,ಮಾನದ ಅವಕಾಶಗಳು ಇದ್ದರೂ ಕೂಡ ತಮ್ಮ ಅಸ್ಮಿತೆ, ಘನತೆ, ಗೌರವ ಎಂದು ಕೊಂಡು ಒಳ್ಳೆಯ ದಿನಗಳು ಸನ್ನಿಹಿತವಾಗಲು ಕಾಯುತ್ತಲೇ ಇರುತ್ತಾರೆ. ತನ್ನ ಅರ್ಧಚ ಜೀವನವು ಕಾಯುವುದರಲ್ಲೇ ಕಳೆದು ಹೋಗುತ್ತದೆ. ಅಂತದ್ದರಲ್ಲಿ ಇಲ್ಲೊಬ್ಬರು ಮನಸ್ಸಿದ್ದರೆ ಮಾರ್ಗ ಎಂದು ದೃಢವಾಗಿ ನಂಬಿ ತಾನಿಚ್ಛಿದ ರೂಪದಲ್ಲಿ ಜೀವನವನ್ನು ಸಾಗಿಸುವ ಮೂಲಕ ಮಾದರಿಯಾಗಿದ್ದಾರೆ.
ಫರೀದಾಬಾದ್ನ ಅವಿನಾಶ್ ಎಂಬ ಯುವಕನು 2019ರಲ್ಲಿ ಬಿ.ಕಾಂ ಪದವಿ ಪಡೆದು, ಆ ಬಳಿಕ ಕೆಲವು ಕಂಪನಿಗಳಲ್ಲಿ ಕೆಲಸ ಹುಡುಕಿ, ಸೇರಿದರು. ಮೆಕ್ಡೊನಾಲ್ಡ್ನಲ್ಲಿಯೂ ಕೆಲಸ ಮಾಡಿದರು. ಆದರೆ ಅಲ್ಲಿ ಕೊಡುವ ಸಂಬಳ ಕುಟುಂಬ ನಿರ್ವಹಣೆಗೆ ಕೈಗೆಟಕದೇ ಇದ್ದಾಗ, ಸ್ವಂತ ಉದ್ಯೋಗದ ಕನಸು ಕಂಡಿದ್ದ ಅವಿನಾಶ್ ಬಳಿ ಉತ್ತಮ ವ್ಯವಹಾರ ಮಾಡಲು ಸುಕ್ತ ಬಂಡವಾಳವಿರಲಿಲ್ಲ. ಕೆಲವು ತಿಂಗಳುಗಳ ಕಾಲ ನಿರುದ್ಯೋಗಿಯಾಗಿ ಕಾಲ ಕಳೆದರು.
ಈ ಸಂದರ್ಭದಲ್ಲಿ ತನ್ನ ಜೊತೆಗಿದ್ದಿದ್ದು ತನ್ನನ್ನು ಬಿಟ್ಟು ಇಹಲೋಕ ತ್ಯಜಿಸಿದ್ದ ತಂದೆ ಕೊಟ್ಟ ಉಡುಗೊರೆ ಬೈಕ್ ಮತ್ತು ಚೆನ್ನೈ ಮೂಲದ ತನ್ನ ಹೆಂಡತಿಯ ಕೈರುಚಿ.ಇದನ್ನೆಲ್ಲಾ ತನ್ನ ಮನಸ್ಸಿಗೆ ಇಂಗಿಸಿದ ಅವಿನಾಶ್, ಯಾಕೆ ನಾನು ದ್ವಿಚಕ್ರವಾಹನದ ಮೇಲೆಯೇ ಒಂದು ಸಣ್ಣ ಕ್ಯಾಂಟೀನ್ ಪ್ರಾರಂಭಿಸಬಾರದು ? ಎಂದನಿಸಿತು. ಅದೇ ಆಲೋಚನೆಯಲ್ಲಿ ಕಾರ್ಯಪ್ರವೃತ್ತರಾಗಿ ‘ಬಿಕಾಂ ಇಡ್ಲಿವಾಲೆ’ ಎಂಬ ಹೆಸರಿನೊಂದಿಗೆ ಇಡ್ಲಿ-ಸಾಂಬಾರ್ ಮಾರುವ ಸಣ್ಣ ಕ್ಯಾಂಟೀನ್ ಶುರುಮಾಡಿದರು. ಫರೀದಾಬಾದ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 6ರತನಕ ರೂ. 20 ಒಂದು ಪ್ಲೇಟ್ನಂತೆ ಇಡ್ಲಿ ಮಾರುತ್ತಾರೆ. ‘ನನ್ನ ಅಪ್ಪ ಕಳೆದ ವರ್ಷ ಹೃದಯಾಘಾತದಿಂದ ತೀರಿಕೊಂಡರು. ಅವರು ಕೊಟ್ಟ ಗಿಫ್ಟ್ ಈ ಗಾಡಿ. ನನ್ನ ಹೆಂಡತಿ ದಕ್ಷಿಣಭಾರತದವರು. ಅವರು ತಯಾರಿಸುವ ಇಡ್ಲಿ ಮಾರುತ್ತೇನೆ. ಒಂದೂವರೆವರ್ಷದ ಮಗ, ಅಮ್ಮ ಮತ್ತು ತಮ್ಮತಂಗಿಯರನ್ನೆಲ್ಲ ಪೋಷಿಸುವ ಜವಾಬ್ದಾರಿ ನನಗಿದೆ’ ಎಂದಿದ್ದಾರೆ.
ಇವರು ಮಾರುವ ವಿಡಿಯೋವನ್ನು ಇನ್ಸ್ಟಾಗ್ರಾಂ ಪೇಜೊಂದು ಹಂಚಿಕೊಂಡಿದ್ದು, 6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಮಾತ್ರವಲ್ಲ ನೆಟ್ಟಿಗರಿಗೆ ಈ ವಿಡಿಯೋ ಬಹಳ ಆಕರ್ಷಿಸಿದೆ. ‘ಕಷ್ಟಪಟ್ಟು ದುಡಿಯುತ್ತಿರುವ ನಿಮಗೆ ಒಳ್ಳೆಯದಾಗುತ್ತದೆ’ ಎಂದು ಹಲವು ಕಮೆಂಟ್ ಗಳ ಮೂಲಕ ಇವರನ್ನು ಪ್ರೋತ್ಸಾಹಿಸಿದ್ದಾರೆ.
ಅವಿನಾಶ್, ತನಗೆ ಇಚ್ಛೆ ಬಂದ ಹಾದಿಯನ್ನು ಹಿಡಿದು, ತೃಪ್ತಿಯಿಂದ ಕೆಲಸ ನಿರ್ವಹಿಸಿ ಬಿಕಾಂ ಗಳಿಸಿದರೂ ಯಾವುದೇ ಬಗೆಯ ಅಹಂ ತೋರಿಸದೆ ಮುಂದೆ ಸಾಗುತ್ತಿರುವುದಂತೂ ನಿಜಕ್ಕೂ ಶ್ಲಾಘನೀಯ.