Transgenders : ತೃತೀಯ ಲಿಂಗಿಗಳ ಮೇಲೊಂದು ಅಮಾನವೀಯ ಕೃತ್ಯ | ಲೈಂಗಿಕ ತೃಪ್ತಿ ನೀಡಲು ಒಪ್ಪದ ಕಾರಣ ಹಲ್ಲೆ, ಕೂದಲು ಕತ್ತರಿಸಿ ದೌರ್ಜನ್ಯ!!!

ಇಬ್ಬರು ತೃತೀಯ ಲಿಂಗಿಗಳ ಕೂದಲು ಕತ್ತರಿಸಿದ ಹೀನಾಯ, ಅಮಾನವೀಯ ಘಟನೆಯೊಂದು, ತಮಿಳುನಾಡಿನ ತೂತುಕುಡಿ ಪ್ರದೇಶದಲ್ಲಿ ನಡೆದಿದೆ. ಇಂತಹ ನೀಚ ಕೃತ್ಯ ಎಸಗಿದ ಆರೋಪದಲ್ಲಿ ಯೊವ ಬುಬಾನ್ ಮತ್ತು ವಿಜಯ್ ಎಂಬ ಇಬ್ಬರನ್ನು ಕಲುಗುಮಲೈ ಪೊಲೀಸರು ಗುರುವಾರ ಬಂಧನ ಮಾಡಿದ್ದಾರೆ. ತೃತೀಯ ಲಿಂಗಿಗಳ ಕೂದಲು ಬಲವಂತವಾಗಿ ಕತ್ತರಿಸುವ ವೀಡಿಯೋ ಆನ್‌ಲೈನ್‌ನಲ್ಲಿ ಹರಿದಾಡಿತ್ತು. ಈ ಆಧಾರದಲ್ಲಿ ಈ ಬಂಧನ ನಡೆದಿದೆ. ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಅಡಿ ಕಿರುಕುಳ, ನಿಂದನೆ, ಹಲ್ಲೆ ಮತ್ತು ಕೊಲೆ ಪ್ರಯತ್ನ ಪ್ರಕರಣಗಳನ್ನು ದಾಖಲಿಸಲಾಗಿದೆ.

 

ತೃತೀಯ ಲಿಂಗಿಗಳ ಕಾರ್ಯಕರ್ತರಾದ ಗ್ರೇಸ್ ಬಾನು ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣವನ್ನು ಪೊಲೀಸರ ಗಮನಕ್ಕೆ ತರಲಾಗಿದ್ದು, ಕಲುಗುಮಲೈ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಈ ಘಟನೆ ಅಕ್ಟೋಬರ್ 7ರಂದು ನಡೆದಿದೆ. ಹಲ್ಲೆಗೊಳಗಾದ ಸಂತ್ರಸ್ತರು ತೂತುಕುಡಿಯ ಕೋವಿಲ್‌ಪಟ್ಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಅವರನ್ನು ಅಪಹರಿಸಿ ಹಲ್ಲೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಯೊವ ಬುಬಾನ್ ಮತ್ತು ವಿಜಯ್. ನಂತರ ಪಟ್ಟಣ ಬಿಟ್ಟು ಹೋಗುವಂತೆ ದುಷ್ಕರ್ಮಿಗಳಿಬ್ಬರೂ ಅವರಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಸಂತ್ರಸ್ತರು, ಯಾರಿಗೂ ಹೇಳದೆ ಕೇಳದೆ ಊರು ಬಿಟ್ಟು ಹೋಗಿದ್ದಾರೆ.

ಆರೋಪಿಗಳು ಸಂತ್ರಸ್ತರಿಗೆ, ವೇಶ್ಯಾವಾಟಿಕೆ ನಡೆಸುವಂತೆ ಬಲವಂತ ಹೇರಿದ್ದು, ಜೊತೆಗೆ ತಮಗೆ ಲೈಂಗಿಕ ತೃಪ್ತಿ ನೀಡುವಂತೆ ಹೇಳಿದ್ದಾರೆ. ಆದರೆ ಅದಕ್ಕೆ ಈ ಸಂತ್ರಸ್ತರು ಅವರು ಒಪ್ಪಿರಲಿಲ್ಲ. ಹೀಗಾಗಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದ ಆರೋಪಿಗಳು, ತಮಗೆ ಲೈಂಗಿಕ ತೃಪ್ತಿ ನೀಡದೆ ಹೋದರೆ ಉಳಿದ ತೃತೀಯ ಲಿಂಗಿಗಳಿಗೂ ಇದೇ ಗತಿಯಾಗುತ್ತದೆ ಎಂದು ಬೆದರಿಕೆ ಹಾಕಿರುವುದು ದಾಖಲಾಗಿದೆ.

Leave A Reply

Your email address will not be published.