ದೇಶದಲ್ಲಿ ಮತ್ತೊಂದು ನರಬಲಿ ಕೇಸ್ | ತನ್ನ ಮಗಳನ್ನೇ ಬಲಿಕೊಟ್ಟಿತಾ ಈ ಕುಟುಂಬ!?

ಜನರು ಕೆಲವೊಂದು ಧಾರ್ಮಿಕ ವಿಚಾರಗಳನ್ನು ನಂಬುವುದಕ್ಕಿಂತ ಹೆಚ್ಚಾಗಿ ಮೂಢ ನಂಬಿಕೆಗಳ ಆಚರಣೆಗಳನ್ನು ನಂಬಿ ನರಬಲಿ ಮಾಡುವ ಪ್ರಕರಣಗಳು ಈಗಲೂ ನಡೆಯುತ್ತಿರುವುದು ವಿಪರ್ಯಾಸ.


ಮನೆಯವರ ಹಿತಕ್ಕಾಗಿ ಪೂಜೆ ಪುನಸ್ಕಾರ ಮಾಡುವುದು ಸಾಮಾನ್ಯ.ಇದರ ಜೊತೆಗೆ ಅವರವರ ಆಚರಣೆಗೆ ಅನುಗುಣವಾಗಿ ಆರ್ಥಿಕವಾಗಿ ಸದೃಢರಾಗಲೂ ವಿಶೇಷ ರತ್ನಗಳನ್ನು, ವಿವಿಧ ಸಾಮಗ್ರಿಗಳನ್ನು ಮನೆಯಲ್ಲಿ ಕರ್ತವ್ಯ ನಿರ್ವಹಿಸುವಲ್ಲಿ ಇಡುವುದು ಸಾಮಾನ್ಯ. ಆದರೆ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಸಲುವಾಗಿ ಮನೆಯ ಲಕ್ಷ್ಮಿ ರೂಪಿಯನ್ನು ಬಲಿ ಕೊಡುವುದು ಎಷ್ಟರ ಮಟ್ಟಿಗೆ ಸರಿ??

ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಕುಟುಂಬವೊಂದು ತಮ್ಮ 14 ವರ್ಷದ ಮಗಳನ್ನು ನರಬಲಿ ಕೊಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಗುಜರಾತ್​ನಲ್ಲಿ ನರಬಲಿ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ಜಿಲ್ಲೆಯ ಧಾರಾ ಗಿರ್ ಗ್ರಾಮದ ಕುಟುಂಬವೊಂದು ತಮ್ಮ 14 ವರ್ಷದ ಮಗಳನ್ನು ಬಲಿಕೊಟ್ಟಿದ್ದಾರೆ.

ನವರಾತ್ರಿಯ ಮೊದಲ ದಿನ ಆರ್ಥಿಕವಾಗಿ ಸದೃಢವಾಗಬೇಕು ಎಂಬ ಹಂಬಲದಿಂದ ಕುಟುಂಬದವರು ತಮ್ಮ ಮಗಳನ್ನು ಬಲಿಕೊಟ್ಟ ಬಳಿಕ ಶವವನ್ನು ಮಧ್ಯರಾತ್ರಿ ಹೊಲದಲ್ಲಿ ಸುಟ್ಟು ಹಾಕಿದ್ದಾರೆ.

ಆರು ತಿಂಗಳ ಹಿಂದೆ ಬಾಲಕಿ ಸೂರತ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದವಳನ್ನು ಪೋಷಕರು ಆಕೆಯನ್ನು ಶಾಲೆ ಬಿಡಿಸಿ, ಸ್ವಗ್ರಾಮಕ್ಕೆ ಕರೆತಂದು ಹೊಲದಲ್ಲಿ ಕೆಲಸಕ್ಕೆ ಸೇರಿಸಿದ್ದಾರೆ.

ಕುಟುಂಬಕ್ಕೆ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಅಕ್ಟೋಬರ್ 3ರ ರಾತ್ರಿ ಮಗಳನ್ನು ಬಲಿ ಕೊಟ್ಟಿದ್ದು , ಬಳಿಕ ಮಗುವಿಗೆ ಮರುಜನ್ಮ ಸಿಗುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ಕುಟುಂಬ ಜೀವಿಸುತ್ತಿತ್ತು. ಅಷ್ಟೇ ಅಲ್ಲದೇ ಮನೆಯಲ್ಲಿ ನಾಲ್ಕು ದಿನ ಶವ ಇಟ್ಟುಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ನಂತರ ಕೆಲವೇ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಮೃತ ಮಗಳನ್ನು ಜಮೀನಿನಲ್ಲಿಯೇ ಅಂತ್ಯಸಂಸ್ಕಾರ ಮಾಡಿದ್ದಾರೆ.

ಗಿರ್ ಸೋಮನಾಥ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರಸಿನ್ಹ ಜಡೇಜಾ ಅವರು ಬಾಲಕಿಯ ನಿಗೂಢ ಸಾವಿನಲ್ಲಿ ಪೋಷಕರ ಕೈವಾಡ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳಕ್ಕೆ ದೌಡಾಯಿಸಿ ಪ್ರಕರಣದ ಸಾಕ್ಷ್ಯಾಧಾರಗಳನ್ನು ಜೊತೆಗೆ ಬಾಲಕಿಯ ಚಿತಾಭಸ್ಮವನ್ನು ಭವೇಶ್ ಅಕ್ಬರಿ ಅವರ ಹೊಲದಿಂದ ಸಂಗ್ರಹಿಸಿದ್ದಾರೆ .

ಈ ಘಟನೆ ಕುರಿತು ಪೊಲೀಸರು ಬಾಲಕಿಯ ತಂದೆ ಸೇರಿದಂತೆ ನಾಲ್ವರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದು, ತನಿಖೆ ನಂತರವೇ ಸತ್ಯಾಸತ್ಯತೆ ಹೊರಬೀಳಲಿದೆ.


ವಿಚಾರಣೆಯ ಸಮಯದಲ್ಲಿ ಮೃತ ಬಾಲಕಿಯ ತಂದೆ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದು, ಎಫ್‌ಎಸ್‌ಎಲ್ ವರದಿ ಬಳಿಕ ಮುಂದಿನ ತನಿಖೆ ಪೊಲೀಸರಿಗೆ ಸಹಾಯವಾಗಲಿದೆ.

Leave A Reply

Your email address will not be published.