ಈಜಿ಼ಯಾಗಿ ಮನೆಯಲ್ಲೇ ಮಾಡಿ ಮಸಾಲೆ ನೆಲಗಡಲೆ
ಮನೆಯಲ್ಲಿಯೇ ಏನಾದ್ರೂ ತಿಂಡಿ ತಿನಿಸುಗಳನ್ನು ಮಾಡಿ ತಿನ್ಬೇಕು ಅಂತ ತುಂಬಾ ಜನಕ್ಕೆ ಆಸೆ ಇರುತ್ತೆ. ಆದ್ರೆ ಎಲ್ಲಾ ಕಾಸ್ಟ್ಲಿ, ಅಥವಾ ತಿಂಡಿ ಮಾಡೋಕೆ ಬರೋಲ್ಲ ಅನ್ನೋ ಕಂಪ್ಲೈಂಟ್ ಇರ್ಬೋದು. ಹಾಗಾಗಿ ಈಜಿ಼ಯಾಗಿ ನಿಮ್ಗೆ ಮನೆಯಲ್ಲಿ ಮಾಡೋ ರೆಸಿಪಿಯನ್ನು ಹೇಳ್ತೀನಿ.
ಗರಿ ಗರಿಯಾದ ನೆಲಗಡಲೆ ಅಂತ ಹೇಳಿದ ಕೂಡಲೇ ಬಾಯಲ್ಲಿ ನೀರೂರುತ್ತದೆ. ಇವು ಅಂಗಡಿಗಳಲ್ಲಿ ಕೂಡ ದೊರೆಯುತ್ತದೆ. ಅದಕ್ಕಿಂತ ಮನೆಯಲ್ಲೇ ಬಿಸಿ ಬಿಸಿಯಾಗಿ ನೆಲಕಡಲೆ ಮಸಾಲೆ ಮಾಡಿ ಮಿಕ್ಸರ್ ಜೊತೆ ಮಿಕ್ಸ್ ಮಾಡಿ ಸೇವಿಸಿ. ಆಹಾ!ಅದ್ರ ಟೇಸ್ಟ್ ಬೇರೆ ಬಿಡಿ. ಈಸಿಯಾಗಿ ಮಸಾಲೆ ಮಾಡೋದು ಹೇಗೆ ಅಂತ ಹೇಳ್ತೀನಿ ಓದಿ.
ಬೇಕಾಗುವ ಸಾಮಗ್ರಿಗಳು
ಕಡಲೆ ಹಿಟ್ಟು – ಅರ್ಧ ಕಪ್
ಅಕ್ಕಿ ಹಿಟ್ಟು – 2 ಟೀಸ್ಪೂನ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
ಅಡುಗೆ ಸೋಡಾ – ಚಿಟಿಕೆ
ಉಪ್ಪು – ಅರ್ಧ ಟೀಸ್ಪೂನ್
ನೆಲಗಡಲೆ – 2 ಕಪ್
ಎಣ್ಣೆ – 2 ಟೀಸ್ಪೂನ್
ನೀರು – 3 ಟೀಸ್ಪೂನ್
ಎಣ್ಣೆ – ಡೀಪ್ ಫ್ರೈಗೆ
ಚಾಟ್ ಮಸಾಲ – ಅರ್ಧ ಟೀಸ್ಪೂನ್
ಮಾಡುವ ವಿಧಾನ
ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಕಾರ್ನ್ ಫ್ಲೋರ್ ತೆಗೆದುಕೊಳ್ಳಿ. ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಟಿಕೆ ಅಡುಗೆ ಸೋಡಾ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ನೆಲಗಡಲೆ ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ 2 ಟೀಸ್ಪೂನ್ ನೀರು ಸೇರಿಸಿ ಮಿಕ್ಸ್ ಮಾಡಿ. ಕಡಲೆಕಾಯಿಗೆ ಹಿಟ್ಟು ಚೆನ್ನಾಗಿ ಲೇಪಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬೇಕೆಂದರೆ 1-2 ಟೀಸ್ಪೂನ್ ಹೆಚ್ಚಿನ ನೀರನ್ನು ಹಾಕಿ ಮಿಕ್ಸ್ ಮಾಡಿ. ಮಿಶ್ರಣವನ್ನು 5 ನಿಮಿಷಗಳ ಕಾಲ ಹಾಗೆಯೇ ಮುಚ್ಚಿ ಇಟ್ಟು, ಬಳಿಕ 1 ಚಮಚ ಅಕ್ಕಿ ಹಿಟ್ಟನ್ನು ಸೇರಿಸಿ ಮಿಕ್ಸ್ ಮಾಡಿ.
ಈಗ ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪ ಕಡಲೆ ಕಾಯಿಗಳನ್ನು ಡೀಪ್ ಫ್ರೈ ಮಾಡಿ. ಮಧ್ಯಮ ಉರಿಯಲ್ಲಿ ಫ್ರೈ ಮಾಡುವಾಗ ಎಣ್ಣೆಯಲ್ಲಿ ನೊರೆ ಕಡಿಮೆಯಾಗಿ, ಕಡಲೆಗಳು ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ. ಈಗ ಅದನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹರಡಿ.
ಈಗ ನೆಲಗಡಲೆ ಮೇಲೆ ಚ್ಯಾಟ್ ಮಸಾಲಾವನ್ನು ಹಾಕಿ. ಗರಿ ಗರಿಯಾದ ನೆಲಗಡಲೆ ಮಸಾಲಾ ಇದೀಗ ತಯಾರಾಗಿದ್ದು, ಇದನ್ನು 1 ತಿಂಗಳ ಕಾಲ ಇಡಬಹುದು. ಆದರೆ ಗಾಳಿ ಆಡುವ ಹಾಗೆ ಇಟ್ಟರೆ ಮೆತ್ತಗೆ ಆಗುತ್ತದೆ. ಫ್ರಿಜ್ ನಲ್ಲಿಯು ಇಡಬೇಡಿ.
ನಿಮಗೆ ಬೇಕಾದ ಆಹಾರಗಳೊಂದಿಗೆ ಮಿಕ್ಸ್ ಮಾಡಿ ಸೇವಿಸಬಹುದು. ಆರೋಗ್ಯಕರವಾಗಿ ಮನೆಯಲ್ಲೇ ತಯಾರಿಸಿ ಸೇವಿಸಿ.