ಮಂಗಳೂರು: ‘ಅಮ್ಮನ ಮೇಲಿನ ಶ್ರದ್ಧಾ-ಭಕ್ತಿಯನ್ನು ರೂಪಾಯಿ ಲೆಕ್ಕದಲ್ಲಿ ಅಳೆಯಬೇಡಿ’!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ನ ಹಿನ್ನೆಲೆ ಏನು!??
ಮಂಗಳೂರು: ಕರಾವಳಿ ಜಿಲ್ಲೆಯ ಸಹಿತ ಹೊರಜಿಲ್ಲೆಗಳಲ್ಲಿ ಒಂದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಒಂದು ಹರಿದಾಡಿ ಭಾರೀ ಸುದ್ದಿಯಾಗುತ್ತಿದೆ. ‘ಅಮ್ಮನ ಮೇಲಿನ ಭಕ್ತಿಯನ್ನು ರೂಪಾಯಿ ಲೆಕ್ಕದಲ್ಲಿ ಅಳೆಯಬೇಡಿ’ ಎನ್ನುವ ಬರಹದ ಪೋಸ್ಟರ್ ಹರಿದಾಡಿದ್ದು, ಜೊತೆಗೆ ಕಟೀಲು ಕ್ಷೇತ್ರದ ಫೋಟೋ ಸಹಿತ ಬರಹಗಳು ಕಂಡುಬಂದಿದೆ.
ಹೌದು. ಕರಾವಳಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ,ಭಕ್ತರ ಇಷ್ಟಾರ್ಥವನ್ನು ಸಾಕಾಲದಲ್ಲಿ ಪೂರೈಸಿ, ತಪ್ಪನ್ನು ಮನ್ನಿಸುವ ತಾಯಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ತಂದ ಅದೊಂದು ನಿಯಮ ಸದ್ಯ ಕರಾವಳಿಯಲ್ಲಿ ಆಕ್ರೋಶದ ಜೊತೆಗೆ ಗ್ರಾಮೀಣ ಭಾಗದಲ್ಲೂ ಚರ್ಚೆಗೆ ಕಾರಣವಾಗಿದ್ದು,ನಿರ್ಧಾರ ಬದಲಿಸಲು ಪಟ್ಟು ಹಿಡಿಯಲಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಶೀಘ್ರ ದರ್ಶನಕ್ಕಾಗಿ ಹಣ ಪಾವತಿಸಬೇಕು, ರಶೀದಿ ಮಾಡಿಸಬೇಕು ಎಂದು ಬೋರ್ಡ್ ಹಾಕಿರುವುದು ಚರ್ಚೆಗೆ ಕಾರಣವಾಗಿರುವ ಅಂಶವಾಗಿದೆ.ಈ ಹಿಂದೆ ವಾಹನ ಪಾರ್ಕಿಂಗ್ ಗೂ ದರ ನಿಗದಿ ಮಾಡಲಾಗಿದ್ದು, ನಿತ್ಯ ಭಕ್ತರ ಆಕ್ರೋಶದ ಬೆನ್ನಲ್ಲೇ ಆ ನಿರ್ಧಾರವನ್ನು ಕೈಬಿಡಲಾಗಿತ್ತು. ಆದರೆ ಶೀಘ್ರ ದರ್ಶನಕ್ಕೂ ಹಣ ನಿಗದಿ ಮಾಡಿದ್ದಾರೆ, ಬೋರ್ಡ್ ಹಾಕಿದ್ದಾರೆ ಎನ್ನುವ ವಿಚಾರ ಸುದ್ದಿಯಾಗುತ್ತಿದ್ದಂತೆ ಭಕ್ತರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಸಮರ್ಥಿಸಿಕೊಂಡ ಆಡಳಿತ ಮಂಡಳಿ,ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಸಾಧ್ಯವಾಗದ ಭಕ್ತರು ಶೀಘ್ರ ದರ್ಶನಕ್ಕೆ ಪಾವತಿಸಿ, ದರ್ಶನ ಪಡೆಯಲು ವ್ಯವಸ್ಥೆ ಮಾಡಿದ್ದೇವೆಯೇ ಹೊರತು ಬೆರೆ ಯಾವುದೇ ಉದ್ದೇಶ ಇಲ್ಲವೆಂದು ಹೇಳಿದೆ. ಸದ್ಯ ಈ ವಿಚಾರ ಭಾರೀ ಚರ್ಚೆಯಾಗುತ್ತಿದ್ದೂ, ಪಾರ್ಕಿಂಗ್ ದರದ ನಿರ್ಧಾರ ಕೈಬಿಟ್ಟಂತೆ, ಈ ನಿರ್ಧಾರವನ್ನೂ ಕೈಬಿಡಲಾಗುತ್ತದೆಯೇ ಅಥವಾ ಮುಂದುವರಿಯುತ್ತದೆಯೇ ಎನ್ನುವುದನ್ನು ಕಾದುನೋಡಬೇಕಾಗಿದೆ.