ಮೀನುಗಾರರ ಬಲೆಗೆ ಬಿದ್ದ 1 ಕೋಟಿ ಮೌಲ್ಯದ 22 ತೇಲಿಯಾ ಭೋಲಾ ಮೀನುಗಳು!
ನೀರೊಳಗಿನ ಪ್ರಪಂಚವು ಅತ್ಯಂತ ವೈವಿಧ್ಯಮಯವಾಗಿದ್ದು, ಹಲವು ರಹಸ್ಯಗಳನ್ನು ಹೊಂದಿದೆ. ಹೆಚ್ಚು ಹೆಚ್ಚು ಹೊಸ ಜಾತಿಯ ಸಮುದ್ರ ಮೀನುಗಳು ಮತ್ತು ಪ್ರಾಣಿಗಳನ್ನು ನಿರಂತರವಾಗಿ ಕಂಡುಹಿಡಿಯಲಾಗುತ್ತಿದೆ. ಭೂಮಿಯ ಮೇಲೆ 30,000 ಕ್ಕೂ ಹೆಚ್ಚು ಮೀನುಗಳಿದ್ದು, ಮೀನುಗಾರರ ಬಲೆಗೆ ದಿನಕ್ಕೊಂದು ಎಂಬಂತೆ ವಿಚಿತ್ರ ಮೀನುಗಳು ಬೀಳುತ್ತಿದೆ. ವಿಶೇಷ ಮೀನಿನ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಹೀಗಾಗಿ ಅದನ್ನು ಕಂಡಾಗ ಜನ ಆಶ್ಚರ್ಯಗೊಳ್ಳುವುದು ಸಾಮಾನ್ಯ.
ಅದರಂತೆ ಇದೀಗ ಪಶ್ಚಿಮ ಬಂಗಾಳದ ಪ್ರಸಿದ್ಧ ದಿಘಾ ಮೀನು ಮಾರುಕಟ್ಟೆಯಲ್ಲಿ ಸುಮಾರು 1 ಕೋಟಿ ಮೌಲ್ಯದ 22 ತೇಲಿಯಾ ಭೋಲಾ ಮೀನುಗಳು ಸಿಕ್ಕಿವೆ. ಪೂರ್ವ ಭಾರತದ ಅತಿದೊಡ್ಡ ಮೀನು ಹರಾಜು ಕೇಂದ್ರವಾದ ದಿಘಾ ನದೀಮುಖದಲ್ಲಿ ಮೀನುಗಾರರು ಈ ಮೀನುಗಳನ್ನು ಬಲೆಗೆ ಬೀಳಿಸಿದ್ದಾರೆ.
ಭುವನ್ ಬೇರಾದಿಂದ ಟ್ರಾಲರ್ ಶನಿವಾರ 22 ಟೆಲಿಯಾ ಭೋಲಾ ಮೀನುಗಳನ್ನು ತಂದಿದ್ದು, ಈ ಪ್ರತಿಯೊಂದು ಮೀನಿನ ತೂಕವು 20-22 ಕೆ.ಜಿ. ತೂಗುತ್ತಿತ್ತು. ಈ ಮೀನನ್ನು ಕೋಲ್ಕತ್ತಾದ ಕಂಪನಿಯೊಂದರಲ್ಲಿ ಪ್ರತಿ ಕೆಜಿಗೆ 14,800 ರೂ. ದರದಲ್ಲಿ ಮೀನನ್ನು ಹರಾಜು ಮಾಡಲಾಗಿದೆ.
ಈ ತೇಲಿಯಾ ಭೋಲಾ ಮೀನು ತುಂಬಾ ದುಬಾರಿಯಾಗಿದ್ದು, ಅದರಿಂದ ಜೀವರಕ್ಷಕ ಔಷಧಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ, ಈ ದೊಡ್ಡ ಮೀನುಗಳನ್ನು ನೋಡಲು ಪ್ರವಾಸಿಗರು ಮತ್ತು ಮೀನು ವ್ಯಾಪಾರಿಗಳು ಮುಗಿಬಿದ್ದಿದ್ದು, ಈ ಮೀನುಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.