ನೆಲ್ಯಾಡಿ | ಕೊಲೆಯತ್ನ, ದರೋಡೆ ಕೇಸ್: ಪ್ರಕರಣ ತಿರುಚಿದ್ದಾರೆ ಎಂದ ಸಂತ್ರಸ್ತ ಕುಟುಂಬ | ಮರು ಹೇಳಿಕೆ ಪಡೆದ ಉಪ್ಪಿನಂಗಡಿ ಠಾಣಾಧಿಕಾರಿ
ಕಡಬ : ಕೊಲೆಯತ್ನ ಮಾಡಿ ದರೋಡೆ ಮಾಡಿರುವ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ತಿರುಚಿದ್ದಾರೆಂಬ ಆರೋಪ ಕೇಳಿಬಂದಿದೆ. ಉಪ್ಪಿನಂಗಡಿ ಪೊಲೀಸರು ಸಂತ್ರಸ್ತನ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡದೇ, ಮಹಜರು ಹೇಳಿಕೆಯನ್ನು ಓದಿ ಹೇಳದೇ ಸಹಿ ಪಡೆದು ಹೋಗಿ ಆರೋಪಿಗಳ ವಿರುದ್ಧ ಸಡಿಲ ಸೆಕ್ಷನ್ ಗಳನ್ನು ಹಾಕಿದ್ದಾರೆ ಎಂದು ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಅಲಂಗ ನಿವಾಸಿ ಜಾಯ್ ವಿ.ಡಿ ಎಂಬವರ ಕುಟುಂಬಸ್ಥರು ಆರೋಪಿಸಿದ್ದಾರೆ.
ತನ್ನನ್ನು ಕೊಲ್ಲಲು ಯತ್ನಿಸಿ, ಜೀವ ಬೆದರಿಕೆ ಒಡ್ಡಿ, ದರೋಡೆ ಮಾಡಿರುವುದಾಗಿ ಅಲಂಗ ನಿವಾಸಿ ಜಾಯ್ ವಿ.ಡಿ ಅವರು ತನ್ನ ಪರಿಯಸ್ಥರೇ ಆಗಿರುವ ನವನೀತ್, ರಾಹುಲ್ ಹಾಗೂ ಸುಜಿತ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆರೋಪಿಗಳ ವಿರುದ್ಧ ಕೊಲೆಯತ್ನ, ದರೋಡೆ ಸೆಕ್ಷನ್ ಗಳನ್ನು ದಾಖಲಾಗಿಲ್ಲ. ಹೀಗಾಗಿ ಪೊಲೀಸರು ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾರೆಂದು ಆರೋಪಿಸಿರುವ ಜಾಯ್ ವಿ.ಡಿ ಅವರ ಕುಟುಂಬಸ್ಥರು ಸಾಕ್ಷಿಗಳ ಸಮಕ್ಷ ಸಂತ್ರಸ್ತ ವ್ಯಕ್ತಿಯ ಮರುಹೇಳಿಕೆ ಪಡೆಯುವಂತೆ ಒತ್ತಾಯ ಮಾಡಿದ್ದಾರೆ.
ಏನಿದು ಘಟನೆ? ಸಂತ್ರಸ್ತ ಜಾಯ್ ದೂರಿನಲ್ಲೇನಿದೆ?
ಅಕ್ಟೋಬರ್ 4ರಂದು ರಾತ್ರಿ 11 ಗಂಟೆ ವೇಳೆಗೆ ಅಂತ್ಯಸಂಸ್ಕಾರ ಕಾರ್ಯವೊಂದರ ನಿಮಿತ್ತ ನಾನು ಚರ್ಚ್‌ನಲ್ಲಿದ್ದ ವೇಳೆ ಅಲ್ಲಿಗೆ ಬಂದ ಪರಿಚಯದ ನವನೀತ್ ಎಂಬಾತ ಶಿರಾಡಿ ತನಕ ಸ್ಕೂಟರ್ ನಲ್ಲಿ ಡ್ರಾಪ್ ಕೊಡುವಂತೆ ಕೇಳಿಕೊಂಡರು. ಅದರಂತೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ಶಿರಾಡಿ ಗ್ರಾಮದ ಪುಲ್ಲೋಟು ಎಂಬಲ್ಲಿಗೆ ತಲುಪಿದಾಗ ಸ್ಕೂಟರ್ ನಿಲ್ಲಿಸುವಂತೆ ನವನೀತ್ ಹೇಳಿದ್ದು, ಸ್ಕೂಟರ್ ನಿಲ್ಲಿಸಿದಾಗ ಅಲ್ಲೆ ಪಕ್ಕದಲ್ಲಿ ಅಟೋ ರಿಕ್ಷಾವೊಂದು ನಿಂತಿದ್ದು, ರಿಕ್ಷಾದಲ್ಲಿದ್ದ ರಾಹುಲ್ ಹಾಗೂ ಸುಜಿತ್ ಎಂಬವರು ಇಳಿದು ಬಂದು ಮೂವರು ಸೇರಿಕೊಂಡು ತನ್ನ ಮೇಲೆ ಕಬ್ಬಿಣದ ರಾಡ್ ನಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಯತ್ನ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಮೊಬೈಲ್ ಹಾಗೂ ಹಣವನ್ನು ದರೋಡೆ ಮಾಡಿದ್ದಾರೆ ಎನ್ನಲಾಗಿದೆ. ರಾಹುಲ್ ಎಂಬಾತ ತನ್ನ ಕೈಯಿಂದ ಕುತ್ತಿಗೆಯ ಹಿಂಬದಿಗೆ ಹಾಗೂ ಮುಖಕ್ಕೆ ಗುದ್ದಿ ಕಾಲಿನಿಂದ ಹೊಟ್ಟೆಗೆ ತುಳಿದು ಚಾಕು ಕುತ್ತಿಗೆಗೆ ಇಟ್ಟು ಕೊಲ್ಲುವುದಾಗಿ ಹೇಳಿದ್ದಾನೆ. ನವನೀತ್ ದೊಣ್ಣೆಯಿಂದ ತಲೆಗೆ ಹಾಗೂ ಬಲಬದಿ ಭುಜಕ್ಕೆ ಹೊಡೆದಿದ್ದು, ಸುಜಿತ್ ಕಲ್ಲಿನಿಂದ ಬಲ ಕಾಲಿನ ಮೊಣಗಂಟಿಗೆ ಹೊಡೆದಿದ್ದಾನೆ. ರಿಕ್ಷಾದಿಂದ ಹಗ್ಗ ತಂದು ಕುತ್ತಿಗೆ ಬಿಗಿದು ಕೊಲ್ಲುವ ಪ್ರಯತ್ನ ಮಾಡಲಾಗಿತ್ತು. ಹಣಕ್ಕಾಗಿ ಬೇಡಿಕೆ ಇಟ್ಟ ತಂಡ ನಂತರದಲ್ಲಿ ಮೊಬೈಲ್ ಹಾಗೂ ಹಣವನ್ನು ದೋಚಿದ್ದರು. ಈ ವೇಳೆ ಪ್ರವಾಸಿಗರ ಕಾರೊಂದು ಬರುತ್ತಿದ್ದಂತೆ ಸ್ಥಳದಿಂದ ಪರಾರಿಯಾದರು. ಹಲ್ಲೆಯಿಂದ ನನ್ನ ಬಲಕಾಲ ಮೊಣಗಂಟಿಗೆ, ಕಾಲು, ಮೂಗು, ಹಣೆಗೆ ತೀವ್ರ ಸ್ವರೂಪದ ಗಾಯವಾಗಿದೆ. ಬಲಭುಜಕ್ಕೆ, ಕುತ್ತಿಗೆಯ ಹಿಂಭಾಗ, ಹೊಟ್ಟೆ, ಎದೆಗೆ ಗುದ್ದಿದ ಗಾಯವಾಗಿರುತ್ತದೆ. ಹಲ್ಲೆಯಿಂದ ವಿಪರೀತ ನೋವು ಕಾಣಿಸಿಕೊಂಡಿರುವುದರಿಂದ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯುಲೆನ್ಸ್ ನಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದಾರೆ ಎಂದು ಜಾಯ್ ದೂರಿನಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಆಗಮಿಸಿ ಮರು ಹೇಳಿಕೆ ಪಡೆದ ಉಪ್ಪಿನಂಗಡಿ ಠಾಣಾಧಿಕಾರಿ
ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿಗಳು ಪಡೆದ ಹೇಳಿಕೆ ಸರಿಯಿಲ್ಲ ಕುಟುಂಬಸ್ಥರ ಸಮಕ್ಷ ವಿಡಿಯೋ ರೆಕಾರ್ಡ್ ಮೂಲಕ ಮರು ಹೇಳಿಕೆ ಪಡೆಯಬೇಕು ಎಂಬ ಕುಟುಂಬಸ್ಥರ ಒತ್ತಾಯದ ಹಿನ್ನಲೆಯಲ್ಲಿ ಮತ್ತು ಮೇಲಾಧಿಕಾರಿಗಳ ಆದೇಶದಂತೆ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ರಾಜೇಶ್ ಅವರು ಆಸ್ಪತ್ರೆಗೆ ಆಗಮಿಸಿ ಸಂತ್ರಸ್ತರ ಮರುಹೇಳಿಕೆ ಪಡೆದಿದ್ದಾರೆ.