ರೈತರಿಗೆ ಸಿಹಿ ಸುದ್ದಿ: ನ. 1 ರಿಂದ ‘ಯಶಸ್ವಿನಿ ಯೋಜನೆ’ ಯ ಈ ಸೌಲಭ್ಯ ಪುನಾರಂಭ
‘ಯಶಸ್ವಿನಿ ಯೋಜನೆ’ ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ಪುನರಾರಂಭವಾಗಲಿದೆ. ರೈತರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಈ ಯೋಜನೆ ಅತಿ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ ಎಂದು ಸಿಎಂ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಹಕಾರಿ ಸಂಸ್ಥೆಗಳ ಸದಸ್ಯ ರೈತರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಕಲ್ಪಿಸಲು ಯಶಸ್ವಿನಿ ಯೋಜನೆಯಿಂದ ಅನುಕೂಲವಾಗಿತ್ತು. ರೈತರ ಹಿತ ದೃಷ್ಟಿಯಿಂದ ನವೆಂಬರ್ ಒಂದರಂದು ಯೋಜನೆಗೆ ಮರು ಚಾಲನೆ ನೀಡಲಾಗುವುದು ಎಂದು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆ ಉಪ ಕೇಂದ್ರ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಕ್ಕಳ ಐಸಿಯು ಉಪ ಕೇಂದ್ರ ಉದ್ಘಾಟಿಸಿ ನಂತರ ಈ ಮಾತನ್ನು ತಿಳಿಸಿದ್ದಾರೆ.
ಬಡವರಿಗೆ ಉಚಿತ ಕನ್ನಡಕ ನೀಡುವ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಶ್ರವಣದೋಷ ಹೊಂದಿದ ಬಡ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ವ್ಯವಸ್ಥೆಯನ್ನು ಉಚಿತವಾಗಿ ಪೂರೈಸುತ್ತಿದ್ದು, ಇದಕ್ಕಾಗಿ 500 ಕೋಟಿ ರೂ. ಮೀಸಲಿಡಲಾಗಿದೆ. ಗ್ರಾಮೀಣ, ತಾಲ್ಲೂಕು, ವಲಯ ಮಟ್ಟದಲ್ಲಿ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುವುದು ಎಂದು ಹೇಳಿದ್ದಾರೆ.