ರಾಜ್ಯದಲ್ಲಿ ಮತ್ತೆ ಹರಿದ ರಕ್ತದೋಕುಳಿ |
ಡಬಲ್ ಮರ್ಡ‌ರ್ ಗೆ ಬೆಚ್ಚಿಬಿದ್ದ ಕುಂದಾನಗರಿ | ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್!

ರಾಜ್ಯದಲ್ಲಿ ಮತ್ತೆ ರಕ್ತದೋಕುಳಿ ನಡೆದಿದೆ. ಇಬ್ಬರು ರೌಡಿ ಗನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆಯೊಂದು
ಬೆಳಗಾವಿ ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ ನಡೆದಿದೆ.

 

28 ವರ್ಷದ ಮಹೇಶ್ ಮುರಾರಿ ಹಾಗೂ 24 ವರ್ಷದ ಪ್ರಕಾಶ್ ಹುಂಕರಿ ಪಾಟೀಲ್ ಎಂಬುವವರೇ ಹತ್ಯೆಯಾದವರು. ನಿನ್ನೆ ರಾತ್ರಿ ಕೆಲ ಹುಡುಗರು ಸುಳೇಭಾವಿ ಗ್ರಾಮದ ಲಕ್ಷ್ಮಿ ಗಲ್ಲಿಯ ಶಿವಾಜಿ ಪ್ರತಿಮೆಯ ಬಳಿ ನಿಂತು ಮಾತಾಡುತ್ತಿದ್ದರು. ಸುಮಾರು ಎಂಟೂವರೆ ಗಂಟೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಾಗೂ ಖಾರದ ಪುಡಿ ಹಿಡಿದುಕೊಂಡು ಬಂದ 10ಕ್ಕೂ ಅಧಿಕ ಯುವಕರ ತಂಡವೊಂದು ಅಲ್ಲೇ ನಿಂತಿದ್ದವರ ಮೇಲೆ ದಿಢೀರನೆ ದಾಳಿ ಮಾಡಿದೆ.

ದಿಢೀರನೆ ಈ ದಾಳಿ ನಡೆದಿದ್ದರಿಂದ ಅಲ್ಲಿದ್ದ ಕೆಲ ಯುವಕರು ಆ ಸ್ಥಳದಲ್ಲಿ ಕಾಲ್ಕಿತ್ತಿದ್ದಾರೆ. ಆದರೆ ಬಂದ ಗುಂಪು ಈ ಇಬ್ಬರನ್ನು ಮಾತ್ರ ಎಲ್ಲಿಯೂ ಹೋಗದಂತೆ ತಡೆದಿದ್ದಾರೆ. ಓರ್ವನನ್ನು ಶಿವಾಜಿ ವೃತ್ತದಲ್ಲೇ ಹತ್ಯೆ ಮಾಡಿದರೆ, ಇನ್ನೋರ್ವ ಅಲ್ಲಿಂದ ಎಸ್ಕೇಪ್ ಆಗಿ ಅಲ್ಲೇ ಇದ್ದ ಗಣಪತಿ ದೇವಸ್ಥಾನಕ್ಕೆ ಹೋಗಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಅಲ್ಲಿಯೂ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ದೇವಸ್ಥಾನದ ಕಟ್ಟೆಯ ಮೇಲೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳದಲ್ಲಿ ಎಲ್ಲೆಂದರಲ್ಲಿ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದನ್ನು ನೋಡಿದರೆ ಕಣ್ಣಿಗೆ ಖಾರದ ಪುಡಿ ಎರಚಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಅನುಮಾನ ವ್ಯಕ್ತವಾಗುತ್ತಿದೆ. ಘಟನಾ ಸ್ಥಳದಲ್ಲಿ ಸಿಕ್ಕ ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಎಫ್‌ಎಸ್ಎಲ್ ತಂಡದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸುಳೇಬಾವಿ ಗ್ರಾಮದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ.

Leave A Reply

Your email address will not be published.