ಇನ್ಮುಂದೆ ವಾಹನ ಕ್ರಮಿಸುವ ಸಮಯ ದೂರ, ಗಾತ್ರ, ತೂಕ ಆಧರಿಸಿ ನಿರ್ಧಾರವಾಗುತ್ತೆ ಟೋಲ್ ದರ !!

ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದ್ದು, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಹೌದು. ಶೀಘ್ರದಲ್ಲೇ ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಬದಲಾವಣೆಗಳನ್ನು ತರುವ ಬಗ್ಗೆ ಪ್ರಸ್ತಾವನೆ ಇದ್ದು, ವಾಹನ ಚಾಲಕರಿಂದ ಟೋಲ್ ತೆರಿಗೆ ಸಂಗ್ರಹಣೆ ಪ್ರಕ್ರಿಯೆಯಲ್ಲಿ ಹೊಸ ವಿಧಾನ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದ.

ಪ್ರಸ್ತುತವಿರುವ ಟೋಲಿಂಗ್ ನೀತಿಯು, ವಾಹನವು ಹೊಂದಿರುವ ಚಕ್ರಗಳನ್ನು ಆಧರಿಸಿದೆ. ಆದರೆ ಹೊಸ ನೀತಿ ಅಡಿಯಲ್ಲಿ ಹೆದ್ದಾರಿಗಳಲ್ಲಿ ವಾಹನವು ಕ್ರಮಿಸುವ ನಿಜವಾದ ಸಮಯ ಮತ್ತು ದೂರ ಗಾತ್ರ ಮತ್ತು ತೂಕವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಾಹನವು ಹೆದ್ದಾರಿಯಲ್ಲಿ ಎಷ್ಟು ಜಾಗವನ್ನು ಆಕ್ರಮಿಸುತ್ತದೆ ಮತ್ತು ರಸ್ತೆಯ ಮೂಲಸೌಕರ್ಯಗಳ ಮೇಲೆ ಎಷ್ಟು ಭಾರ ಇರಿಸುತ್ತದೆ ಎಂಬುದನ್ನು ಸಹ ಲೆಕ್ಕಾಚಾರ ಹಾಕಿ ಟೋಲ್ ವಿಧಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಟೋಲ್ ಸಂಗ್ರಹಣೆ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. ವಿಭಿನ್ನ ಗಾತ್ರದ ವಾಹನಗಳು ರಸ್ತೆ ಮೂಲಸೌಕರ್ಯಗಳ ಮೇಲೆ ವಿಭಿನ್ನ ಒತ್ತಡವನ್ನು ಬೀರುತ್ತವೆ. ಇದರ ಅನುಸಾರವೇ ಜನರು ಟೋಲ್ ಪಾವತಿಸಬೇಕು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಹೆಚ್ಚು ಭಾರದ ವಾಹನಗಳಿಂದ ರಸ್ತೆಗಳು ವೇಗವಾಗಿ ಸವೆದುಹೋಗುತ್ತಿರುವುದು ಕೂಡ ಸರ್ಕಾರ ಈ ಕ್ರಮ ಕೈಗೊಳ್ಳಲು ಒಂದು ಕಾರಣ ಎನ್ನಲಾಗಿದೆ.

ಕೇಂದ್ರ ಸಾರಿಗೆ ಸಚಿವಾಲಯವು ಈ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸುತ್ತಿದ್ದು, ದೆಹಲಿ-ಮುಂಬೈ ಕಾರಿಡಾರ್ ಸೇರಿದಂತೆ ಮುಂಬರುವ ಗ್ರೀನ್​ಫೀಲ್ಡ್ ಎಕ್ಸ್​ಪ್ರೆಸ್​ವೇ ಯೋಜನೆಗಳಲ್ಲಿ ಈ ಹೊಸ ಟೋಲ್ ನೀತಿಯನ್ನು ಅಳವಡಿಸುವ ಸಾಧ್ಯತೆ ಇದೆ. ಟೋಲ್ ದರ ನಿಗದಿಪಡಿಸುವ ಸಂಬಂಧ ಸಾರಿಗೆ ಸಚಿವಾಲಯವು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಎಚ್​ಯುು)-ವಾರಾಣಸಿಯ ನೆರವು ಕೋರಿದೆ.

ಇನ್ನು ಮುಂದೆ ಟೋಲ್ ದರವೂ ಕೂಡ, ಜನರು ತಾವು ಬಳಸಿದ ವಿದ್ಯುಚ್ಛಕ್ತಿಯ ಮೊತ್ತವನ್ನು ಪಾವತಿಸುವಂತೆಯೇ ಆಗುತ್ತದೆ. ವಾಹನದ ಗಾತ್ರ ಮತ್ತು ರಸ್ತೆ ಮೂಲಸೌಕರ್ಯಗಳ ಮೇಲಿನ ವಾಹನದ ಸಂಭಾವ್ಯ ಒತ್ತಡ ಆಧರಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಾವತಿಸುವ ಟೋಲ್ ಮೊತ್ತವನ್ನು ನಿರ್ಧರಿಸಬಹುದಾಗಿದೆ.

Leave A Reply

Your email address will not be published.