Pan Card : ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಇದೆಯೇ? ಹಾಗಾದರೆ ತಕ್ಷಣ ಈ ಕೆಲಸ ಮಾಡಿ!!!
ಇತ್ತೀಚಿನ ದಿನಗಳಲ್ಲಿ ಪ್ರತಿ ವ್ಯವಹಾರ ಹಾಗೂ ಕೆಲಸ ಕಾರ್ಯಗಳಲ್ಲಿ ಪಾನ್ ಕಾರ್ಡ್ ಪ್ರಮುಖ ಪಾತ್ರ ವಹಿಸುತ್ತಿದೆ. ಆಧಾರ್ ಕಾರ್ಡ್ ರೀತಿಯೇ ಪ್ಯಾನ್ ಕಾರ್ಡ್ ಕೂಡ ಅತ್ಯಂತ ಪ್ರಮುಖ ದಾಖಲೆಯಾಗಿದೆ. 10 ಅಂಕೆಯನ್ನು ಹೊಂದಿರುವ ಪಾನ್ ಕಾರ್ಡನ್ನು ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತಿದ್ದು, ಬ್ಯಾಂಕಿನ ಸೇವೆ ಹಾಗೂ ತೆರಿಗೆ ಪಾವತಿಗೆ ಪಾನ್ ಕಾರ್ಡ್ ಸಂಖ್ಯೆ ನೀಡುವ ಅವಶ್ಯಕತೆ ಹೆಚ್ಚಿದೆ.
ಕೆಲವೊಮ್ಮೆ ಇಲಾಖೆಯಿಂದಲೇ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡನ್ನು ನವೀಕರಣ, ಇಲ್ಲವೇ ಮದುವೆಯ ನಂತರದ ಬದಲಾವಣೆಗಳಿಗಾಗಿ ಅಥವಾ ಒಬ್ಬ NRI ಹಲವು ವರ್ಷಗಳ ನಂತರ ಭಾರತಕ್ಕೆ ಬಂದು ಇಲ್ಲಿ ವ್ಯಾಪಾರ ಮಾಡಲು ಯೋಚಿಸಿದರೆ, ವಾಣಿಜ್ಯ ವಹಿವಾಟುಗಳಿಗಾಗಿ ಪಾನ್ ಕಾರ್ಡ್ ಅಗತ್ಯವಿದ್ದು ಈಗಾಗಲೇ ಪಾನ್ ಕಾರ್ಡ್ ಇದ್ದರೂ ಆತ ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಅವಶ್ಯಕವಾಗಿರುತ್ತದೆ.
ಇದರ ನಡುವೆಯೂ ಅನೇಕರು ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡ ಘಟನೆಗಳು ಕೂಡ ಹೆಚ್ಚಾಗಿ ನಡೆಯುತ್ತಿವೆ. ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಲು ಅಥವಾ ಆಸ್ತಿಯನ್ನು ಖರೀದಿಸುವ ವೇಳೆಯಲ್ಲಿ ಪ್ಯಾನ್ಕಾರ್ಡ್ ಅವಶ್ಯಕವಾಗಿದ್ದು, ಒಂದು ವೇಳೆ ಒಬ್ಬರ ಬಳಿ ಎರಡು ಪ್ಯಾನ್ಕಾರ್ಡ್ ಇದ್ದರೆ ಸಮಸ್ಯೆಯಾಗುವ ಸಾಧ್ಯತೆಯ ಜೊತೆಗೆ ಭಾರಿ ದಂಡವನ್ನು ತೆರಬೇಕಾದ ಸ್ಥಿತಿಯು ಎದುರಾಗಬಹುದು.
ಇಂತಹ ವ್ಯಕ್ತಿಗಳ ಸಾಲ ಮತ್ತು ಕ್ರೆಡಿಟ್ ಕಾರ್ಡ್ನಂತಹ ಎಲ್ಲಾ ಅರ್ಜಿಗಳನ್ನು ಬ್ಯಾಂಕ್ ರದ್ದುಗೊಳಿಸುವುದಲ್ಲದೇ, ಒಂದಕ್ಕಿಂತ ಹೆಚ್ಚು ಪ್ಯಾನ್ಕಾರ್ಡ್ ಹೊಂದಿದ್ದರೆ ವಂಚನೆ ಎಂದು ಪರಿಗಣಿಸಿ, ಬ್ಯಾಂಕ್ಗಳು ಇಂತಹವರನ್ನು ಕಪ್ಪುಪಟ್ಟಿಗೆ ಸೇರಿಸುತ್ತವೆ.
ಈ ತಪ್ಪನ್ನು ಸರಿಪಡಿಸಲು ಆದಾಯ ತೆರಿಗೆ ಇಲಾಖೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ಗಳನ್ನು ಹೊಂದಿರುವುದು ಕಾನೂನುಬಾಹಿರವಾಗಿದೆ. ಆದರೂ ಈ ಅಪರಾಧ ಮರೆಮಾಚಲು ಯತ್ನಿಸಿದರೆ, ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 272 ಬಿ ಅಡಿಯಲ್ಲಿ 6 ತಿಂಗಳ ಜೈಲು ಶಿಕ್ಷೆ ಅಥವಾ 10,000 ರೂ.ಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.
ಎರಡು ಅಥವಾ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ, ಸಾಧ್ಯವಾದಷ್ಟು ಬೇಗ ಹೆಚ್ಚುವರಿ ಪ್ಯಾನ್ ಕಾರ್ಡ್ ಅನ್ನು ಒಪ್ಪಿಸುವುದು ಬಹಳ ಮುಖ್ಯವಾಗಿದ್ದು, ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಅನ್ನು ಒಪ್ಪಿಸಲು ಆನ್ ಲೈನ್ ಮತ್ತು ಆಫ್ ಲೈನ್ ಸೌಲಭ್ಯಗಳನ್ನು ಒದಗಿಸಿದ್ದು, ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ ಇಲ್ಲವೇ ಸಂಬಂಧಪಟ್ಟ ಎನ್ಎಸ್ಡಿಎಲ್ ಕಚೇರಿಗೆ ತೆರಳಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.
ಪಾನ್ ಕಾರ್ಡ್ ಅನ್ನು ಒಪ್ಪಿಸುವ ವಿಧಾನ ಸರಳವಾಗಿದ್ದು, ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ‘ಹೊಸ ಪ್ಯಾನ್ ಕಾರ್ಡ್ಗಾಗಿ ವಿನಂತಿ’ ಇದ್ದು, ಪ್ಯಾನ್ ಡೇಟಾ ಆಯ್ಕೆಯಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿ ಮಾಡಬೇಕು. ಬಳಿಕ ಈ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಪ್ಯಾನ್ ಕಾರ್ಡ್ ಗಳು ಮತ್ತು ಅದಕ್ಕೆ ಅಗತ್ಯವಾದ ದಾಖಲೆಗಳೊಂದಿಗೆ ಎನ್ ಎಸ್ ಡಿಎಲ್ ಕಚೇರಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಎನ್ಎಸ್ಡಿಎಲ್ ಕಚೇರಿಯಲ್ಲಿ, ಈಗಾಗಲೇ ಭರ್ತಿ ಮಾಡಿದ ಫಾರ್ಮಿನೊಂದಿಗೆ ಹೆಚ್ಚುವರಿ ಪ್ಯಾನ್ ಕಾರ್ಡ್ ಅನ್ನು ಸಲ್ಲಿಸಿ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಾಗ, 100 ರೂ.ಗಳ ಬಾಂಡ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ವಿಧಾನ ಅನುಸರಿಸಿ ಹೆಚ್ಚುವರಿ ಇರುವ ಪಾನ್ ಕಾರ್ಡಿಗೆ ದಂಡ ವಿಧಿಸುವ ಅಪಾಯವನ್ನು ತಪ್ಪಿಸಬಹುದು.