ಬಣ್ಣದ ಲೋಕದ ಖ್ಯಾತ ನಟ ಆತ್ಮಹತ್ಯೆಗೆ ಶರಣು | ಸಂಸಾರದ ತಾಪತ್ರಯವೇ ನಟನ ಆತ್ಮಹತ್ಯೆಗೆ ಕಾರಣವಾಯಿತೇ?
ತಮಿಳು ಕಿರುತೆರೆಯ ಖ್ಯಾತ ನಟ ಮಂಗಳವಾರ ( ಅ.4) ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳಿನ ನೂರಾರು ಸೀರಿಯಲ್ಗಳಲ್ಲಿ ನಟಿಸಿದ್ದ ಈ ನಟ ಈಗ ಸಾವಿಗೀಡಾಗಿದ್ದಾರೆ. ಸುಮಾರು 150ಕ್ಕೂ ಅಧಿಕ ಧಾರಾವಾಹಿ ಹಾಗೂ ಸುಮಾರು 15 ಸಿನಿಮಾಗಳಲ್ಲಿ ನಟಿಸಿದ್ದ ಲೋಕೇಶ್ ರಾಜೇಂದ್ರನ್ ( 34 ವರ್ಷ) ಎಂಬುವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಲೋಕೇಶ್ ರಾಜೇಂದ್ರನ್ ನಿಧನಕ್ಕೆ (Lokesh Rajendran Death) ತಮಿಳು ಕಿರುತೆರೆಯ ಸೆಲೆಬ್ರಿಟಿಗಳು, ಸೀರಿಯಲ್ ವೀಕ್ಷಕರು ಕಂಬನಿ ಮಿಡಿಯುತ್ತಿದ್ದಾರೆ.
ಸಂಸಾರದ ಕಿರಿಕ್ ಈ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಖ್ಯಾತ ಕಿರುತೆರೆ ನಟ ಲೋಕೇಶ್ ರಾಜೇಂದ್ರನ್ (Lokesh Rajendran) ಬದುಕಿನಲ್ಲೂ ಸಂಸಾರದ ಸಮಸ್ಯೆ ( Family Problem) ಇತ್ತು. ಪತ್ನಿ ಜೊತೆ ಅವರಿಗೆ ಮನಸ್ತಾಪ ಮೂಡಿತ್ತು. ಆದರೆ ಅದನ್ನು ಬಗೆಬರಿಸಿಕೊಳ್ಳುವ ಬದಲು ಲೋಕೇಶ್ ರಾಜೇಂದ್ರನ್ ಅವರು ಇಹಲೋಕ ತ್ಯಜಿಸಿದ್ದಾರೆ.
ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರತಿಭಾವಂತ ನಟ ಈಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತೀವ್ರ ಆಘಾತ ಮೂಡಿಸಿದೆ ಎನ್ನಲಾಗಿದೆ. ಲೋಕೇಶ್ ರಾಜೇಂದ್ರನ್ ನಟಿಸಿದ್ದ ‘ವಿದಾತು ಕರುಪ್ಪು’ ಸೀರಿಯಲ್ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಡೀ ತಂಡದವರು ಜೊತೆಯಾಗಿ ಸೇರಿದ್ದರು. ಅದಾಗಿ ಕೆಲವೇ ದಿನ ಕಳೆಯುವುದರೊಳಗೆ ಇಂಥ ಕಹಿ ಸುದ್ದಿ ಕೇಳುವಂತಾಗಿದ್ದು ವಿಪರ್ಯಾಸ.
‘ಮರ್ಮದೇಸಮ್’ ಸೀರಿಯಲ್ನಲ್ಲಿ ಅವರು ರಾಸು ಎಂಬ ಪಾತ್ರ ಮಾಡಿ ಜನಮನ ಗೆದ್ದಿದ್ದರು. ‘ಲೋಕೇಶ್ ಮತ್ತು ಅವನ ಹೆಂಡತಿ ನಡುವೆ ಏನೋ ವೈಮನಸ್ಸು ಇತ್ತು. ನನಗೆ ಇದು ಒಂದು ತಿಂಗಳ ಹಿಂದೆ ಗೊತ್ತಾಯಿತು. ನಾಲ್ಕು ದಿನಗಳ ಹಿಂದೆ ಆತನ ಹೆಂಡತಿಯಿಂದ ಡಿವೋರ್ಸ್ಗಾಗಿ ಲೀಗಲ್ ನೋಟಿಸ್ ಬಂದಿತ್ತು. ಕಳೆದ ಶುಕ್ರವಾರ ಆತನನ್ನು ನಾನು ನೋಡಿದ್ದೆ. ಖಿನ್ನತೆಗೆ ಒಳಗಾಗಿದ್ದ. ಸ್ವಲ್ಪ ಹಣ ಬೇಕು ಅಂತ ಕೇಳಿದ್ದ. ನಾನು ಕೊಟ್ಟಿದ್ದೆ. ಎಡಿಟರ್ ಆಗಿ ಹೊಸ ಕೆಲಸ ಮಾಡುವುದಾಗಿ ಆತ ತಿಳಿಸಿದ್ದ’ ಎಂದು ಕೆಲವು ಮಾಧ್ಯಮಗಳಿಗೆ ಲೋಕೇಶ್ ರಾಜೇಂದ್ರನ್ ಅವರ ತಂದೆ ಹೇಳಿಕೆ ನೀಡಿದ್ದಾರೆ.
ಸಂಸಾರದ ತಾಪತ್ರಯಗಳಿಂದ ನೊಂದಿದ್ದ ಲೋಕೇಶ್ ರಾಜೇಂದ್ರನ್ ಅವರು ಮದ್ಯವ್ಯಸನ ಮಾಡುತ್ತಿದ್ದರು ಎನ್ನಲಾಗಿದೆ. ಹಲವು ಬಾರಿ ಚೈನ್ನೈನ ಬಸ್ ನಿಲ್ದಾಣಗಳಲ್ಲಿ ಅವರು ಮಲಗಿದ್ದನ್ನು ಜನರು ಗಮನಿಸಿದ್ದಾರೆ. ಸೋಮವಾರ (ಅ.3) ಬಸ್ ನಿಲ್ದಾಣದಲ್ಲಿ ಲೋಕೇಶ್ ರಾಜೇಂದ್ರನ್ ಅಸ್ವಸ್ಥರಾಗಿದ್ದನ್ನು ನೋಡಿದ ಕೆಲವರು 108ಕ್ಕೆ ಕರೆ ಮಾಡಿ, ಪೊಲೀಸರಿಗೂ ಮಾಹಿತಿ ನೀಡಿದ್ದರು. ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಂಗಳವಾರ ರಾತ್ರಿ ಅವರು ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.