ಬಣ್ಣದ ಲೋಕದ ಖ್ಯಾತ ನಟ ಆತ್ಮಹತ್ಯೆಗೆ ಶರಣು | ಸಂಸಾರದ ತಾಪತ್ರಯವೇ ನಟನ ಆತ್ಮಹತ್ಯೆಗೆ ಕಾರಣವಾಯಿತೇ?

ತಮಿಳು ಕಿರುತೆರೆಯ ಖ್ಯಾತ ನಟ ಮಂಗಳವಾರ ( ಅ.4) ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳಿನ ನೂರಾರು ಸೀರಿಯಲ್​ಗಳಲ್ಲಿ ನಟಿಸಿದ್ದ ಈ ನಟ ಈಗ ಸಾವಿಗೀಡಾಗಿದ್ದಾರೆ. ಸುಮಾರು 150ಕ್ಕೂ ಅಧಿಕ ಧಾರಾವಾಹಿ ಹಾಗೂ ಸುಮಾರು 15 ಸಿನಿಮಾಗಳಲ್ಲಿ ನಟಿಸಿದ್ದ ಲೋಕೇಶ್​ ರಾಜೇಂದ್ರನ್​ ( 34 ವರ್ಷ) ಎಂಬುವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಲೋಕೇಶ್ ರಾಜೇಂದ್ರನ್​ ನಿಧನಕ್ಕೆ (Lokesh Rajendran Death) ತಮಿಳು ಕಿರುತೆರೆಯ ಸೆಲೆಬ್ರಿಟಿಗಳು, ಸೀರಿಯಲ್ ವೀಕ್ಷಕರು ಕಂಬನಿ ಮಿಡಿಯುತ್ತಿದ್ದಾರೆ.

ಸಂಸಾರದ ಕಿರಿಕ್ ಈ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಖ್ಯಾತ ಕಿರುತೆರೆ ನಟ ಲೋಕೇಶ್​ ರಾಜೇಂದ್ರನ್​ (Lokesh Rajendran) ಬದುಕಿನಲ್ಲೂ ಸಂಸಾರದ ಸಮಸ್ಯೆ ( Family Problem) ಇತ್ತು. ಪತ್ನಿ ಜೊತೆ ಅವರಿಗೆ ಮನಸ್ತಾಪ ಮೂಡಿತ್ತು. ಆದರೆ ಅದನ್ನು ಬಗೆಬರಿಸಿಕೊಳ್ಳುವ ಬದಲು ಲೋಕೇಶ್​ ರಾಜೇಂದ್ರನ್​ ಅವರು ಇಹಲೋಕ ತ್ಯಜಿಸಿದ್ದಾರೆ.

ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರತಿಭಾವಂತ ನಟ ಈಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತೀವ್ರ ಆಘಾತ ಮೂಡಿಸಿದೆ ಎನ್ನಲಾಗಿದೆ. ಲೋಕೇಶ್​ ರಾಜೇಂದ್ರನ್​ ನಟಿಸಿದ್ದ ‘ವಿದಾತು ಕರುಪ್ಪು’ ಸೀರಿಯಲ್​ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಡೀ ತಂಡದವರು ಜೊತೆಯಾಗಿ ಸೇರಿದ್ದರು. ಅದಾಗಿ ಕೆಲವೇ ದಿನ ಕಳೆಯುವುದರೊಳಗೆ ಇಂಥ ಕಹಿ ಸುದ್ದಿ ಕೇಳುವಂತಾಗಿದ್ದು ವಿಪರ್ಯಾಸ.

‘ಮರ್ಮದೇಸಮ್​’ ಸೀರಿಯಲ್​ನಲ್ಲಿ ಅವರು ರಾಸು ಎಂಬ ಪಾತ್ರ ಮಾಡಿ ಜನಮನ ಗೆದ್ದಿದ್ದರು. ‘ಲೋಕೇಶ್​ ಮತ್ತು ಅವನ ಹೆಂಡತಿ ನಡುವೆ ಏನೋ ವೈಮನಸ್ಸು ಇತ್ತು. ನನಗೆ ಇದು ಒಂದು ತಿಂಗಳ ಹಿಂದೆ ಗೊತ್ತಾಯಿತು. ನಾಲ್ಕು ದಿನಗಳ ಹಿಂದೆ ಆತನ ಹೆಂಡತಿಯಿಂದ ಡಿವೋರ್ಸ್​ಗಾಗಿ ಲೀಗಲ್​ ನೋಟಿಸ್​ ಬಂದಿತ್ತು. ಕಳೆದ ಶುಕ್ರವಾರ ಆತನನ್ನು ನಾನು ನೋಡಿದ್ದೆ. ಖಿನ್ನತೆಗೆ ಒಳಗಾಗಿದ್ದ. ಸ್ವಲ್ಪ ಹಣ ಬೇಕು ಅಂತ ಕೇಳಿದ್ದ. ನಾನು ಕೊಟ್ಟಿದ್ದೆ. ಎಡಿಟರ್​ ಆಗಿ ಹೊಸ ಕೆಲಸ ಮಾಡುವುದಾಗಿ ಆತ ತಿಳಿಸಿದ್ದ’ ಎಂದು ಕೆಲವು ಮಾಧ್ಯಮಗಳಿಗೆ ಲೋಕೇಶ್​ ರಾಜೇಂದ್ರನ್​ ಅವರ ತಂದೆ ಹೇಳಿಕೆ ನೀಡಿದ್ದಾರೆ.

ಸಂಸಾರದ ತಾಪತ್ರಯಗಳಿಂದ ನೊಂದಿದ್ದ ಲೋಕೇಶ್​ ರಾಜೇಂದ್ರನ್​ ಅವರು ಮದ್ಯವ್ಯಸನ ಮಾಡುತ್ತಿದ್ದರು ಎನ್ನಲಾಗಿದೆ. ಹಲವು ಬಾರಿ ಚೈನ್ನೈನ ಬಸ್ ನಿಲ್ದಾಣಗಳಲ್ಲಿ ಅವರು ಮಲಗಿದ್ದನ್ನು ಜನರು ಗಮನಿಸಿದ್ದಾರೆ. ಸೋಮವಾರ (ಅ.3) ಬಸ್​ ನಿಲ್ದಾಣದಲ್ಲಿ ಲೋಕೇಶ್​ ರಾಜೇಂದ್ರನ್​ ಅಸ್ವಸ್ಥರಾಗಿದ್ದನ್ನು ನೋಡಿದ ಕೆಲವರು 108ಕ್ಕೆ ಕರೆ ಮಾಡಿ, ಪೊಲೀಸರಿಗೂ ಮಾಹಿತಿ ನೀಡಿದ್ದರು. ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಂಗಳವಾರ ರಾತ್ರಿ ಅವರು ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.