ಚರ್ಮ ಗಂಟು ರೋಗ: 2 ಕೋಟಿ ಪರಿಹಾರ ಬಿಡುಗಡೆ
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ಅವರು ಚರ್ಮಗಂಟು ರೋಗದಿಂದ ಮೃತಪಟ್ಟಿರುವ ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ ಕರ್ನಾಟಕ ರಾಜ್ಯದಲ್ಲಿ 23,784 ರಾಸುಗಳು ಚರ್ಮ ಗಂಟು ರೋಗದಿಂದ ಬಳಲುತ್ತಿವೆ. ಇದರಲ್ಲಿ 11,494 ರಾಸುಗಳು ಚೇತರಿಸಿಕೊಂಡಿವೆ. 680 ಜಾನುವಾರುಗಳು ಮೃತಪಟ್ಟಿವೆ ಎಂದು ಸಮೀಕ್ಷೆ ತಿಳಿಸಿದೆ.
ಎಷ್ಟೆಷ್ಟು ಪರಿಹಾರ ಎಂಬುದರ ಬಗ್ಗೆ ಈ ಕೆಳಗೆ ವಿವರ ನೀಡಲಾಗಿದೆ.
ಆಗಸ್ಟ್ 1ರಿಂದ ಈಚೆಗೆ ಚರ್ಮ ಗಂಟು ರೋಗದಿಂದ ಮೃತಪಟ್ಟಿರುವ 1)ಪ್ರತಿ ರಾಸುಗಳಿಗೆ ತಲಾ 20,000 ರೂಪಾಯಿ 2)ಎತ್ತುಗಳಿಗೆ ತಲಾ 30,000 ರೂಪಾಯಿ 3) ಕರುಗಳಿಗೆ ತಲಾ 5,000 ಪರಿಹಾರ ನೀಡಲಾಗುವುದು.
ಪ್ರಧಾನಿ ಮೋದಿ ಅವರು ದೇಶದ ಎಂಟು ರಾಜ್ಯಗಳ ವಿವಿಧ ಭಾಗಗಳಲ್ಲಿ 67,000 ಜಾನುವಾರುಗಳನ್ನು ಬಲಿಪಡೆಯದಿರುವ ಈ ಚರ್ಮ ಗಂಟು ರೋಗಕ್ಕೆ ಸ್ವದೇಶಿ ಲಸಿಕೆಯನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ ಎಂದು ಈಗಾಗಲೇ ಘೋಷಿಸಿದ್ದಾರೆ.
ಡೈರಿ ಒಕ್ಕೂಟದ ವಿಶ್ವದ ಡೈರಿ ಶೃಂಗವನ್ನು ಉದ್ಘಾಟಿಸಿ ಮಾತನಾಡಿದ ಮೋದಿ ಜಾನುವಾರುಗಳ ಚರ್ಮಗಂಟು ರೋಗ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದರು. 2025ರ ವೇಳೆಗೆ ಶೇ. ನೂರರಷ್ಟು ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಲುಂಪಿ- ಪ್ರೊ ವ್ಯಾಕ್ ಇನ್ ಹೊಸ ಲಸಿಕೆ ಇನ್ನು ಮೂರು ನಾಲ್ಕು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಕೇಂದ್ರ ಪಶು ಸಂಗೋಪನೆ ಇಲಾಖೆ ಘೋಷಿಸಿದೆ.