ಅರವಿಂದ್ ಕೇಜ್ರಿವಾಲ್ ವಿರುದ್ಧ 11,550 ಕೋಟಿ ಹಗರಣ | ಈ ಹಗರಣ ನಿಮ್ಮನ್ನು ಖಂಡಿತ ಕಂಬಿಯೆಣಿಸುತ್ತದೆ ಎಂದ BJP
ಆಮ್ ಆದ್ಮಿ ಪಕ್ಷದ ಮುಖಂಡರೂ, ದೆಹಲಿಯ ಮುಖ್ಯಮಂತ್ರಿಯೂ ಆಗಿರುವ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿಯು ಹೊಸ ಹಗರಣವೊಂದನ್ನು ಆರೋಪಿಸಿದೆ. ಬರೋಬ್ಬರಿ 11,550 ಕೋಟಿ ವಿದ್ಯುತ್ ರೂಪಾಯಿಯ ಹಗರಣವನ್ನು ಬಿಜೆಪಿ ಆರೋಪಿಸುತ್ತಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಬಿಎಸ್ಇಎಸ್ ಡಿಸ್ಕಾಂಗಳಿಗೆ ಆಮ್ ಆದ್ಮಿ ಪಕ್ಷ (ಎಎಪಿ) ನೀಡಿರುವ ವಿದ್ಯುತ್ ಸಬ್ಸಿಡಿಯಲ್ಲಿನ ಅಕ್ರಮಗಳು ಮತ್ತು ವ್ಯತ್ಯಾಸಗಳ ಬಗ್ಗೆ ತನಿಖೆ ನಡೆಸುವಂತೆ ತಮ್ಮ ಮುಖ್ಯ ಕಾರ್ಯದರ್ಶಿಯ ಬಳಿ ತಿಳಿಸಿದ ಸುದ್ದಿಯಾದ ಕೆಲವೇ ಕ್ಷಣಗಳ ನಂತರ ಬಿಜೆಪಿಯು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ʼಅಬಕಾರಿ ಮದ್ಯ ಹಗರಣದ ಬಳಿಕ ಹೊಸತಾಗಿ ಈಗ ವಿದ್ಯತ್ ಹಗರಣವು ಆಮ್ ಆದ್ಮಿ ಪಕ್ಷದ ನಾಯಕರನ್ನು ಖಂಡಿತ ಜೈಲಿನಲ್ಲಿ ಕಂಬಿಯೆಣಿಸುವಂತೆ ಮಾಡುತ್ತದೆʼ ಎಂದು ಬಿಜೆಪಿಯು ಘಂಟಾಘೋಷವಾಗಿ ಆರೋಪಿಸಿದೆ.
ʼಎರಡು ಪವರ್ ಡಿಸ್ಕಮ್ಗಳಿಗೆ 11,550 ಕೋಟಿ ರೂಪಾಯಿಯಷ್ಟು ಮೌಲ್ಯದಷ್ಟು ಅನಗತ್ಯ ಪ್ರಯೋಜನಗಳಿಗೆ ವ್ಯಯಿಸಿ, 8,500 ಕೋಟಿಯಷ್ಟು ರೂಪಾಯಿಗಳನ್ನು ದೆಹಲಿಯ ಜನತೆಯಿಂದ ಖರೀದಿಸಿ,ಅದೆಲ್ಲವನ್ನೂ ಖಾಸಗಿ ಕಂಪನಿಗಳಿಗೆ ಪಾವತಿಸಿ ವಿಶ್ವಾಸ ದ್ರೋಹ ಬಗೆದಿದ್ದಾರೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಟ್ವೀಟ್ ಮೂಲಕ ಕಾಲೆಳೆದಿದ್ದಾರೆ.
ದೆಹಲಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಡಿಇಆರ್ಸಿ) ಫೆಬ್ರವರಿ 19, 2018 ರ ಆದೇಶದ ಪ್ರಕಾರ ಏಳು ದಿನಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಲ್ಜಿ ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ ಬಳಿಕ ಈ ಸುದ್ದಿಯು ವ್ಯಾಪಕವಾಗಿದೆ. ಈ ಆರೋಪವು ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಗದ್ದಲಕ್ಕೆ ಅನುವು ಮಾಡಿ ಕೊಟ್ಟಿದೆ.
ವರದಿಯ ಪ್ರಕಾ ವಿದ್ಯುತ್ ಸಬ್ಸಿಡಿ ವಿಚಾರದಲ್ಲಿ ಹಲವು ಅಸಮರ್ಪಕತೆ ಮತ್ತು ವ್ಯತ್ಯಾಸಗಳನ್ನು ತೋರಿಸುತ್ತಿದೆ ಎಂದು ದೆಹಲಿ ಎಲ್ ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕೇಜ್ರಿವಾಲ್, ʼರಾಷ್ಟ್ರ ರಾಜಧಾನಿಯಲ್ಲಿ ಚಾಲ್ತಿಯಲ್ಲಿರುವ ಉಚಿತ ವಿದ್ಯುತ್ ಹರಿವನ್ನು ಸ್ಥಗಿತಗೊಳಿಸಲು ಯಾರಿಂದಲೂ ಅಸಾಧ್ಯ. ದೆಹಲಿಯಲ್ಲಿ ರೂಢಿಯಲ್ಲಿರುವ ಉಚಿತ ವಿದ್ಯುತ್ ನೀತಿಯನ್ನು ಸಹಿಸದ ಬಿಜೆಪಿ ಇದನ್ನು ತಡೆಯಲು ಬಯಸುತ್ತಿದೆʼ ಎಂದು ಅವರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ʼನಿಮ್ಮ ತನಿಖೆಗಳು ರಾಜಕೀಯ ಪ್ರೇರಿತ ಮತ್ತು ಅಸಂವಿಧಾನಿಕ. ಭೂಮಿ, ಪೊಲೀಸ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಹೊರತುಪಡಿಸಿ ದೆಹಲಿ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ಆದೇಶಗಳನ್ನು ಹೊರಡಿಸುವ ಅಧಿಕಾರ ಎಲ್ಜಿಗೆ ಇಲ್ಲʼ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಕ್ಸೇನಾ ಅವರಿಗೆ ಪತ್ರ ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.