Kantara : ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರೋ ಪದವನ್ನು ಬಳಸಬೇಡಿ | ದೈವಕ್ಕೆ ಅವಮಾನ ಮಾಡಬೇಡಿ – ರಿಷಬ್ ಶೆಟ್ಟಿ
ಕಾಂತಾರ (Kantara) ಸಿನಿಮಾ ನಮ್ಮ ಮಣ್ಣಿನ ಸೊಗಡಿನ ಕಥೆ ಹೊಂದಿರೋ ಸಿನಿಮಾ. ಇದನ್ನು ಅದ್ಭುತವಾಗಿ ತೆರೆಗೆ ತಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty)ಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬೇಕು. ಕಾಂತಾರ ರಿಲೀಸ್ ಆಗಿ ಮೂರನೇ ದಿನವೂ ಇಡೀ ರಾಜ್ಯಾದ್ಯಂತ ಹೌಸ್ ಫುಲ್ (Housefull) ಪ್ರದರ್ಶನ ಕಾಣುತ್ತಿದೆ. ಮೂಲತಃ ರಿಷಬ್ ಶೆಟ್ಟಿ ಕರಾವಳಿ ಕಡೆಯವರಾದ್ದರಿಂದ ಕರಾವಳಿಯ ಭಾಷೆ, ಸೊಗಡು, ಆಚರಣೆಗಳು, ನಂಬಿಕೆ ಎಲ್ಲದರ ಬಗ್ಗೆಯೂ ತಿಳಿದುಕೊಂಡವರು. ಹಾಗಾಗಿ ‘ಕಾಂತಾರ’ (Kantara Movie Review) ಮೂಲಕ ಕರಾವಳಿ ಸೊಗಡಿನ ಆಳಕ್ಕಿಳಿದು ಸಿನಿಮಾ ಮಾಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ರಿಷಬ್ ಶೆಟ್ಟಿ ಅವರು ಬಹಳ ಅಂದರೇ ಬಹಳ ಮನೋಜ್ಞವಾಗಿ ಅಭಿನಯಿಸಿದ್ದಾರೆ ಕಾಂತಾರ ಸಿನಿಮಾದಲ್ಲಿ. ನಿಜ ಹೇಳಬೇಕೆಂದರೆ ಹಿಂದೆಂದೂ ಕಾಣಿಸಿರದಷ್ಟು ಅದ್ಭುತ ಅಭಿನಯ ಮಾಡಿದ್ದಾರೆ ಎಂದೇ ಹೇಳಬಹುದು. ಈ ಸಿನಿಮಾದಲ್ಲಿ ನಟಿಸಿದ ಎಲ್ಲಾ ಪಾತ್ರಧಾರಿಗಳು ಕೂಡಾ ಉತ್ತಮ ಅಭಿನಯ ನೀಡಿದ್ದಾರೆ. ಅದರಲ್ಲೂ ಈ ಸಿನಿಮಾದ ಕೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿ ಅಭಿನಯ ಎಂತವರಿಗೂ ಮೈ ರೋಮಾಂಚನ ಗೊಳಿಸದೇ ಇರದು. ಕೊನೆಯ 20 ನಿಮಿಷಗಳಲ್ಲಿ ತಾನೆಂಥ ನಟ ಎಂಬುದನ್ನು ರಿಷಬ್ ಶೆಟ್ಟಿ ಪ್ರೂವ್ ಮಾಡಿದ್ದಾರೆ ಹಾಗೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದೇ ಹೇಳಬಹುದು. ಕಾಂತಾರ ಸಿನಿಮಾ ನೋಡಿದವರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುತ್ತಿದ್ದಾರೆ. ರಿಷಬ್ ಕೆರಿಯರ್‌ನಲ್ಲೇ ಟರ್ನಿಂಗ್ ಪಾಯಿಂಟ್ ಈ ಕಾಂತಾರ ಅಂದರೆ ತಪ್ಪಾಗಲಾರದು. ಹಾಗೇನೆ ಈ ಸಿನಿಮಾ ದೈವದ ಕಥೆ ಹೊಂದಿರುವ ಈ ಸಿನಿಮಾ. ಹಾಗಾಗಿ ” ಓ” ಎಂಬ ದೈವ ಪದ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ.
“ದೈವ ಆರಾಧನೆ ಮಾಡುವುದು ನಮ್ಮ ಸಂಸ್ಕೃತಿ, ನಮ್ಮ ಮಣ್ಣಿನ ಕಥೆ. ಈ ಜನಪದ ಅನ್ನೋದು ಮಕ್ಕಳಿಗೆ ತಲುಪಬೇಕು. ನಿಮ್ಮ ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಬನ್ನಿ. ಇದು ಕೇವಲ ಸೌತ್‌ಗೆ ಸೇರಿದ ಸಿನಿಮಾ ಅಂತಲ್ಲ. ಎಲ್ಲರಿಗೂ ಸೇರಬೇಕಾದ ಸಿನಿಮಾ. ಸಿನಿಮಾ ನೋಡಿ ಬಂದು ಹೊರಗಡೆ ಎಲ್ಲರೂ ಓ ಎಂಬ ಪದವನ್ನು ಬೇರೆ ಬೇರೆ ರೀತಿಯಲ್ಲಿ ಬಳಸುತ್ತಿದ್ದಾರೆ. ಇದನ್ನು ಮಾಡಬೇಡಿ. ಸುಮ್ ಸುಮ್ನ ಆ ಪದ ಬಳಸಬೇಡಿ. ಇದು ಬೇರೆ ಸಿನಿಮಾದ ಡೈಲಾಗನಂತಲ್ಲ. ಅದಕ್ಕೆ ಒಂದು ಬೆಲೆ ಇದೆ ಎಂದು ರಿಷಬ್ ಶೆಟ್ಟಿ ಲೈವ್ ಬಂದು ಸಂದೇಶ ಕೊಟ್ಟಿದ್ದಾರೆ.
ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನ ತಲೆಯಲ್ಲಿ ಅಚ್ಚಳಿಯದೆ ಕುಳಿತುಕೊಂಡಿದೆ “ಓ” ಎನ್ನುವ ಪದ. ಈ ಪದವನ್ನು ಎಲ್ಲರೂ ಹೇಳುತ್ತಿದ್ದಾರೆ. ಇದು ದೈವದ ಮಾತು. ಇದನ್ನು ಜನಸಾಮಾನ್ಯರು ಸುಮ್ಮನೆ ಹೇಳುವಂತಿಲ್ಲ. ಈ ಬಗ್ಗೆ ರಿಷಬ್ ಶೆಟ್ಟಿ ನೇರವಾಗಿ ಮಾತನಾಡಿದ್ದಾರೆ. ಜೊತೆಗೆ ಓ ಎಂದು ಕೂಗಿ ದೈವಕ್ಕೆ ಅವಮಾನ ಮಾಡಬೇಡಿ ಎಂದು ರಿಷಬ್ ಸಂದೇಶ ರವಾನಿಸಿದ್ದಾರೆ.