ಸಾಲಗಾರರೇ ಗಮನಿಸಿ | ಮತ್ತೆ ಏರಲಿದೆ ಇಎಂಐ ಹೊರೆ
ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಹೀಗಾಗಿ ರೆಪೊ ದರದಲ್ಲಾಗುವ ಬದಲಾವಣೆಗಳು ಸಾಲಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂದರೆ, ರೆಪೋ ದರ ಹೆಚ್ಚಿದರೆ, ಸಾಲಗಳ ಬಡ್ಡಿದರವೂ ಹೆಚ್ಚುತ್ತದೆ.
ಆರ್‌ಬಿಐ ನ ಈ ನಿರ್ಧಾರದ ನಂತರ ರೆಪೋ ದರಕ್ಕೆ ಲಿಂಕ್ ಮಾಡಲಾದ ಎಲ್ಲ ಸಾಲಗಳ ಮೇಲಿನ ಬಡ್ಡಿದರಗಳು ಹೆಚ್ಚಲಿವೆ. ಹೆಚ್ಚಿನ ಗೃಹ ಸಾಲಗಳು ರೆಪೋ ದರಕ್ಕೆ ಲಿಂಕ್ ಆಗಿರುವುದರಿಂದ ಸಹಜವಾಗಿಯೇ ಹೋಮ್‌ಲೋನ್‌ಗಳ ಬಡ್ಡಿ ಹೆಚ್ಚಲಿದೆ. ಹೀಗಾಗಿ ಇಎಂಐ ಮತ್ತಷ್ಟು ದುಬಾರಿಯಾಗಲಿದೆ. ಇದು ಗೃಹ ಸಾಲದ ಗ್ರಾಹಕರ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ಬಡ್ಡಿದರಗಳ ಹೆಚ್ಚಳದಿಂದ, ಅವರು EMI ನಲ್ಲಿ ಹೆಚ್ಚು ಪಾವತಿಸಬೇಕಾಗುತ್ತದೆ. ಆದರೆ, ಬಡ್ಡಿ ಹೆಚ್ಚಳದ ನಡುವೆಯೂ ಕೋವಿಡ್ ನಂತರದಲ್ಲಿ ಸಾಲದ ಬೇಡಿಕೆ ಹೆಚ್ಚಾಗಿದೆ. ರೆಪೋ ದರ ಅಥವಾ ಕೇಂದ್ರ ಬ್ಯಾಂಕ್‌ಗಳು ಬ್ಯಾಂಕ್‌ಗಳಿಗೆ ನೀಡುವ ಸಾಲದ ದರವು ಸತತ ನಾಲ್ಕು ಹೆಚ್ಚಳದ ನಂತರ ಶೇ. 1.9ರಷ್ಟು ಏರಿಕೆಯಾಗಿದ್ದು ಬರೋಬ್ಬರಿ ಶೇ. 5.9ಕ್ಕೆ ತಲುಪಿದೆ. ಇದರಿಂದ ಸಾಲಗಾರರಿಗೆ ಇಎಂಐ ದುಬಾರಿಯಾಗಲಿದೆ.
ಒಬ್ಬ ವ್ಯಕ್ತಿಯು 2022 ರ ಏಪ್ರಿಲ್‌ನಲ್ಲಿ 30 ಲಕ್ಷ ರೂಪಾಯಿಗಳ ಗೃಹ ಸಾಲವನ್ನು 20 ವರ್ಷಗಳವರೆಗೆ ಶೇ. 6.95ರ ಬಡ್ಡಿಗೆ ತೆಗೆದುಕೊಂಡಿದ್ದರೆ, ಅವನ ಇಎಂಐ ಕಂತು ಈಗ ಶೇ. 8.35 ರ ದರದಲ್ಲಿ 25,751 ರೂಪಾಯಿ ಆಗಿರುತ್ತದೆ. ರೆಪೋ ದರ ಹೆಚ್ಚಳದ ನಂತರ ಬ್ಯಾಂಕ್ ಸಾಲದ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದರೆ, ಬಡ್ಡಿ ದರವು ಶೇಕಡಾ 8.60ಕ್ಕೆ ತಲುಪುತ್ತದೆ. ಇದರಿಂದ ಅವರ ಕಂತು 26,225 ರೂ.ಗೆ ಏರಿಕೆಯಾಗಲಿದೆ.
ಅವಧಿಗಳು ಕಡಿಮೆ ಇರುವ ವಾಹನ ಸಾಲಗಳಿಗೆ ಬಡ್ಡಿ ದರ ಭಿನ್ನವಾಗಿರುತ್ತದೆ. ಉದಾಹರಣೆಗೆ ಏಳು ವರ್ಷಗಳ ಅವಧಿಗೆ ಸುಮಾರು ಶೇ. 8.6ರ ಬಡ್ಡಿ ದರದಲ್ಲಿ 10 ಲಕ್ಷ ರೂ. ವಾಹನ ಸಾಲವನ್ನು ಪಡೆದಿದ್ದರೆ ಗ್ರಾಹಕನ ಇಎಂಐ 15,887 ಆಗಿರುತ್ತದೆ. ಇದೀಗ ಬಡ್ಡಿ ದರ ಬದಲಾಗಿರುವುದರಿಂದ ಪ್ರತಿ ತಿಂಗಳ ಕಂತು 16,140 ರೂ.ಗೆ ಏರಿಕೆಯಾಗಲಿದೆ. ಈ ಮೂಲಕ ಇಎಂಐ 253 ರೂ. ಹೆಚ್ಚಳವಾಗಲಿದೆ.
ರೆಪೋ ದರ ಏರಿಕೆಯ ಮತ್ತೊಂದು ಪರಿಣಾಮವೆಂದರೆ, ಠೇವಣಿಗಳ ಮೇಲಿನ ಬಡ್ಡಿದರಗಳು ಹೆಚ್ಚಾದಾಗ ಲಾಭವೂ ಇದ್ದು, ಕಳೆದ ತಿಂಗಳಲ್ಲಿ ಆರ್‌ಬಿಐ ರೆಪೋ ದರ ಹೆಚ್ಚಿಸುವುದರೊಂದಿಗೆ, ಅನೇಕ ಬ್ಯಾಂಕ್‌ಗಳು ಎಫ್‌ಡಿ ಮೇಲಿನ ದರಗಳನ್ನು ಹೆಚ್ಚಿಸಿವೆ. ಆದರೆ, ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳಕ್ಕೆ ಹೋಲಿಸಿದರೆ, ಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಳ ಕಡಿಮೆಯೆಂದರೂ ತಪ್ಪಾಗದು. ಡಿಸೆಂಬರ್ ನಲ್ಲಿ ಮತ್ತೆ 35 ಮೂಲಾಂಶಗಳಷ್ಟು ರೆಪೊ ದರ ಏರಿಕೆಯಾದಲ್ಲಿ ಸಾಲದ ಕಂತಿನ ಹೊರೆ ಮತ್ತೆ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯವಿದೆ.