ಮುಕ್ಕೂರು : ಎಸೆಸೆಲ್ಸಿ, ಪಿಯುಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ

ಮುಕ್ಕೂರು: ಬದುಕು ಸಾಗಿಸುವ ಜೀವನ ಶಿಕ್ಷಣ ಅತ್ಯಂತ ಅಗತ್ಯವಾದದು ಎಂದು ಪತ್ರಕರ್ತ ದುರ್ಗಾಕುಮಾರ್ ನಾಯರ್‌ ಕೆರೆ ಅಭಿಪ್ರಾಯಪಟ್ಟರು.

 

ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಹಾಗೂ ಮುಕ್ಕೂರು ಶಾಲಾ ಎಸ್‍ಡಿಎಂಸಿ ಆಶ್ರಯದಲ್ಲಿ ಅ.2 ರಂದು ಮುಕ್ಕೂರು ಸಭಾಂಗಣದಲ್ಲಿ ನಡೆದ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕು ಅನ್ನುವುದು ವಾಸ್ತವ. ವಾಸ್ತವದ ಬದುಕನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಬಾಲ್ಯದ ದಿನಗಳನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳಬೇಕು. ಅಂತಹ ಬಾಲ್ಯದ ನೆನೆಪುಗಳನ್ನು ಹುಟ್ಟು ಹಾಕುವುದೇ ಶಿಕ್ಷಣ ಸಂಸ್ಥೆಗಳು ಎಂದು ಅವರು ನುಡಿದರು.

ಬದುಕನ್ನು ಆನಂದಿಸುವುದು ಸಣ್ಣ ಸಣ್ಣ ಸಂಗತಿಗಳಿಂದ. ಆದರೆ ಇಂದು ಬದುಕು, ಕಲಿಕೆಯನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ. ಎಲ್ಲವು ಯಾಂತ್ರಿಕತೆಯ ಬದುಕು. ಇಂತಹ ಸಂದರ್ಭದಲ್ಲಿ ಹಳ್ಳಿಯ ಶಾಲೆಗಳು ನಮ್ಮನ್ನು ಬದುಕಿನ ಸಹಜತೆಗೆ ಕರೆದೊಯ್ಯಲು ಒಂದು ವೇದಿಕೆ ಎಂದ ಅವರು, ಎಲ್ಲವು ಕೃತಕ ಎನ್ನುವ ಜಗತ್ತಿನೊಳಗೆ ಹಿರಿಯರ ಕಾಲದ ಬದುಕು ಮತ್ತೆ ನೆನೆಪಾಗಬೇಕು. ಹಿರಿಯರು ಒಳ್ಳೆಯ ಸಮಾಜ ಕೊಟ್ಟಿದ್ದು ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ನಮ್ಮಿಂದ ಆಗಬೇಕು ಎಂದು ಅವರು ನುಡಿದರು.

ಸ್ಪರ್ಧಾತ್ಮಕ ಯುಗ ಇದಾಗಿದ್ದು ಹಾಗಾಗಿ ನಾವು ಬದುಕನ್ನು ಹೇಗೆ ಮುನ್ನೆಡೆಸಿಕೊಳ್ಳಬೇಕು ಎನ್ನುವ ಯೋಚನೆ ಮಾಡಿಕೊಂಡು ಮುಂದಡಿ ಇಡಬೇಕು ಎಂದ ಅವರು, ಪ್ರಕೃತಿ, ಕುಟುಂಬ, ಮಹಾಕಾವ್ಯಗಳು ಜೀವನ ಪಾಠ ಕಲಿಸುತ್ತವೆ. ಅದರ ಜತೆಗೆ ಪ್ರೀತಿ, ವಾತ್ಸಲ್ಯ, ಸಹಬಾಳ್ವೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಬದುಕು ರಿಯಾಲಿಟಿ ಅಲ್ಲ, ಅದು ರಿಯಲ್ ಅನ್ನುವ ವಾಸ್ತವ ಸತ್ಯ ಅರಿವಾಗಬೇಕು ಎಂದರು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅಬುದಾಬಿಯ ನಿವೃತ್ತ ಎಂಜಿನಿಯರ್ ಉಮೇಶ್ ರಾವ್ ಕೊಂಡೆಪ್ಪಾಡಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸಾಕಾರಗೊಳ್ಳುವ ಕನಸು ಕಾಣಬೇಕು. ತನ್ಮೂಲಕ ಉನ್ನತ ಹಂತಕ್ಕೇರಿ ಸಾಧನೆ ತೋರಬೇಕು ಎಂದರು.

ಅಂಕ ಗಳಿಕೆಯೊಂದಿದ್ದರೆ ಮಾತ್ರ ಜೀವನ ಪರಿಪೂರ್ಣ ಅಲ್ಲ. ಉತ್ತಮ ವ್ಯಕ್ತಿತ್ವ ಬೇಕು. ಅಂಕದ ಜತೆಗೆ ವಿನಯವು ಬೇಕು. ನಾವು ದಿನ ನಿತ್ಯ ಕಲಿಯುತ್ತಲೇ ಇರಬೇಕು. ಅದಕ್ಕಾಗಿ ಕಣ್ಣು-ಕಿವಿ ತೆರೆದಿಡಬೇಕು. ನಾವು ಯಾರಿಂದಲೂ ಕಲಿಯಲು ಇಲ್ಲ ಎನ್ನುವ ಮನಸ್ಥಿತಿ ಇರಬಾರದು ಎಂದ ಅವರು ನಾವು ಒಬ್ಬ ಉತ್ತಮ ಮನುಷ್ಯ ಎಂದೆನಿಸಿಕೊಳ್ಳುವುದು ಬಹು ದೊಡ್ಡ ಕಾರ್ಯ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ನೇಸರ ಯುವಕ ಮಂಡಲ ಪ್ರತಿ ಬಾರಿಯು ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮ ಅನುಷ್ಠಾನಿಸುತ್ತಿದ್ದು ಆ ಸಾಲಿಗೆ ಇಂದಿನ ಪ್ರತಿಭಾ ಪುರಸ್ಕಾರವು ಸೇರಿದೆ. ಇಂದು ಸಾಧಕರಿಗೆ ಪ್ರೋತ್ಸಾಹ ನೀಡುವ ಕೆಲಸ ಆಗುತ್ತಿದ್ದು ಇದರ ಪ್ರಯೋಜನವನ್ನು ಪ್ರತಿಯೋರ್ವರು ಪಡೆದುಕೊಳ್ಳಬೇಕು ಎಂದರು.

ಎಸೆಸೆಲ್ಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿದ ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ ಮಾತನಾಡಿ, ಮಕ್ಕಳನ್ನು ಗುರುತಿಸುವುದರಿಂದ ಅವರಿಗೆ ಸ್ಪೂರ್ತಿ ದೊರೆಯುತ್ತದೆ. ಬೇರೆ ಮಕ್ಕಳಿಗೂ ಪ್ರೇರಣೆ ಸಿಗುತ್ತದೆ. ಒಳ್ಳೆಯ ಪ್ರಜೆ, ಭಾರತೀಯನಾಗುವ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವೇದಿಕೆ ಆಗಬೇಕು.

ಎಂಜಿನಿಯರ್ ಕಾನಾವು ನರಸಿಂಹ ತೇಜಸ್ವಿ ಮಾತನಾಡಿ, ಅಹಿಂಸೆಯನ್ನು ಜಗತ್ತಿಗೆ ಸಾರಿದ ಮಹಾತ್ಮ ಗಾಂಧೀಜಿ, ಜೈ ಜವಾನ್-ಜೈ ಕಿಸಾನ್ ಘೋಷ ಮೊಳಗಿಸಿದ ಲಾಲ್ ಬಹುದ್ದೂರ ಶಾಸ್ತ್ರಿ ಅವರ ಜನ್ಮದಿನದಂದು ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ನಡೆದಿರುವುದು ಉತ್ತಮ ಸಂಗತಿ. ಈ ಮಹಾತ್ಮರ ಆದರ್ಶಗಳು ಭವಿಷ್ಯದ ಪೀಳಿಗೆಗೆ ದಾರಿ ದೀಪವಾಗಬೇಕು ಎಂದ ಅವರು ಸ್ವಚ್ಛ ಪರಿಸರ ರೂಪಿಸುವ ಮೂಲಕ ಸ್ವಚ್ಛ ಭಾರತದ ಕನಸಿಗೆ ಕೈ ಜೋಡಿಸಬೇಕು ಎಂದರು.

ಪಿಯುಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿದ ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ರೈ ಕಾಪು ಮಾತನಾಡಿ, ಹಿಂದೆ ಅವಕಾಶಗಳೇ ವಿರಳವಾಗಿದ್ದ ಕಾಲದಲ್ಲಿ ಸಾಧನೆ ತೋರಿದ ಅನೇಕರು ಇಂದಿನ ಮಕ್ಕಳಿಗೆ ಪ್ರೇರಣೆದಾಯಕವಾಗಬೇಕು. ಅವಕಾಶ ಹೇರಳವಾಗಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಶ್ರಮ ಪಟ್ಟು ಸಾಧನೆ ತೋರಬೇಕು ಎಂದರು.

ಈ ಸಂದರ್ಭದಲ್ಲಿ ಅಂಗನವಾಡಿಯ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಪೆರುವಾಜೆ ಗ್ರಾ.ಪಂ.ಪಿಡಿಓ ಜಯಪ್ರಕಾಶ್ ಅಲೆಕ್ಕಾಡಿ, ಮುಕ್ಕೂರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಶಾಲಾ ಮುಖ್ಯಗುರು ವಸಂತಿ, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು. ನೇಸರ ಯುವಕ ಮಂಡಲದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ಸ್ವಾಗತಿಸಿ, ವಂದಿಸಿದರು. ರಕ್ಷಿತಾ ಕೊಡಂಗೆ ಹಾಗೂ ವೀಕ್ಷಿತಾ ಕೂರೋಡಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಭಾ ಪುರಸ್ಕಾರ ಪ್ರಧಾನ
ಪೆರುವಾಜೆ ಗ್ರಾಮದ ಕೋಡಿಬೈಲು ರಾಮಚಂದ್ರ ಭಟ್ ಮತ್ತು ಅಶ್ವಿನಿ ಅವರ ಪುತ್ರಿ ಅವನಿ ಕೋಡಿಬೈಲು (98.24 ಶೇ.), ಡಾ| ಕಾನಾವು ನರಸಿಂಹ ಶರ್ಮಾ ಮತ್ತು ಸೌಮ್ಯಲಕ್ಷ್ಮಿಅವರ ಪುತ್ರಿ ಶರ್ಮಿಲಿ ಶಂಕರಿ ಕಾನಾವು (90.06 ಶೇ.), ಕಂಡಿಪ್ಪಾಡಿ ಸತ್ಯಪ್ರಸಾದ್ ಮತ್ತು ಉದಯ ಕುಮಾರಿ ಅವರ ಪುತ್ರ ಚಿನ್ಮಯ್ ಎಸ್.ಪಿ.ಕಂಡಿಪ್ಪಾಡಿ (89 ಶೇ.), ಹೊಸೊಕ್ಲು ಕೆ.ಎಚ್.ಮಹಮ್ಮದ್ ಮತ್ತು ಆಮೀನಾ ಅವರ ಪುತ್ರಿ ಫಾತಿಮತ್ ಸಫ್ರೀನಾ ಎಂ.ಎಚ್.(86.8 ಶೇ.), ಪಾಲ್ತಾಡಿ ಗ್ರಾಮದ ಬೊಮ್ಮಂತಗುಂಡಿ ಪುತ್ರ ಬಿ ಮತ್ತು ಸೀತಾ ಬಿ ಅವರ ಪುತ್ರಿ ಭವ್ಯ ಬೊಮ್ಮಂತಗುಂಡಿ (85.44 ಶೇ.), ಮುಕ್ಕೂರು ದಿವಂಗತ ರಾಘವೇಂದ್ರ ಶಾಸ್ತ್ರಿ ಮತ್ತು ಸೌಮ್ಯ ಅವರ ಪುತ್ರ ಪತಂಜಲಿ ಶಾಸ್ತ್ರಿ ಮುಕ್ಕೂರು (80 ಶೇ.) ತೋಟದಮೂಲೆ ಶ್ರೀಧರ ರೈ ಮತ್ತು ವಿಲಾಸಿನಿ ಅವರ ಪುತ್ರಿ ವಿಸ್ತೃತ ರೈ ತೋಟದಮೂಲೆ (78.24 ಶೇ.) ಹಾಗೂ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಪೆರುವಾಜೆ ಗ್ರಾಮದ ಕಜೆ ನಾಗರಾಜ ಭಟ್ ಮತ್ತು ಉಷಾ ಕಜೆ ಅವರ ಪುತ್ರಿ ಪ್ರಜ್ಞಾ ಕಜೆ (94.8 ಶೇ.), ಪಾತಾಜೆ ಕಂರ್ಬುತ್ತೋಡಿ ಪ್ರೇಮನಾಥ ರೈ ಮತ್ತು ಜಯಂತಿ ರೈ ಅವರ ಪುತ್ರಿ ಸೌಪರ್ಣಿಕಾ ರೈ ಪಾತಾಜೆ-ಕಂರ್ಬುತ್ತೋಡಿ (93.5 ಶೇ.), ಕುಂಡಡ್ಕ ಮಹಮ್ಮದ್ ಮತ್ತು ಆಸ್ಯಮ್ಮ ಅವರ ಪುತ್ರಿ ಹಲೀಮತ್ ಹಫೀಫ (92.5 ಶೇ.), ಅಡ್ಯತಕಂಡ ದಾಮೋದರ ಗೌಡ ಮತ್ತು ಲೀಲಾವತಿ ಅವರ ಪುತ್ರಿ ಅರ್ಪಿತಾ ಅಡ್ಯತಕಂಡ (88.83 ಶೇ.) ಕಿನ್ನಿಜಾಲು ರಾಘವೇಂದ್ರ ಬೈಪಡಿತ್ತಾಯ ಮತ್ತು ಅನುಪಮ ಅವರ ಪುತ್ರಿ ಶ್ರೀವಲ್ಲಿ ಕಿನ್ನಿಜಾಲು (81 ಶೇ.) ಅವರಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು. ಶರ್ಮಿಲಿ ಶಂಕರಿ ಕಾನಾವು ಅವರ ಪರವಾಗಿ ತಂದೆ ಡಾ|ನರಸಿಂಹ ಶರ್ಮಾ ಕಾನಾವು ಅವರು ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು. ನಯನಾ ಅಡ್ಯತಕಂಡ ಹಾಗೂ ಜೀವನ್ ಕೊಂಡೆಪ್ಪಾಡಿ ಸಮ್ಮಾನ ಪತ್ರ ವಾಚಿಸಿದರು.

ಗಾಂಧೀಜಿ, ಶಾಸ್ತ್ರಿ ಸ್ಮರಣೆ
ಇದೇ ಸಂದರ್ಭದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಆಚರಿಸಲಾಯಿತು. ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಅವರ ಆದರ್ಶಗಳನ್ನು ಸ್ಮರಿಸಲಾಯಿತು.

Leave A Reply

Your email address will not be published.