ಸ್ನೇಹಿತನ ತಂಗಿಯನ್ನು ಲವ್ ಮಾಡಿದ ಫ್ರೆಂಡ್ | ಆಕ್ರೋಶಗೊಂಡ ಅಣ್ಣನಿಂದ ನಡೆಯಿತು ಬರ್ಬರ ಕೊಲೆ

ಕಾಲೇಜ್ ಕ್ಯಾಂಪಸ್ನಲ್ಲಿ ಹಲವಾರು ಪ್ರೇಮ ಪ್ರಕರಣಗಳು ಅರಳಿ, ಕಾಲೇಜು ಮುಗಿಯುತ್ತಿದ್ದಂತೆ ನಾನೊಂದು ತೀರ… ನೀನೊಂದು ತೀರ..ಎಂದು ಪ್ರೇಮ ಕಹಾನಿ ಅಂತ್ಯ ಕಾಣುವುದು ಸಾಮಾನ್ಯ. ಹೀಗೆ ಪ್ರೇಮ ಕಥೆ ಮುಂದುವರೆದರು ಕೂಡ ಮನೆಯವರ ಕೆಂಗಣ್ಣಿಗೆ ಗುರಿಯಾಗಿ ಓಡಿ ಹೋಗಿ ಮದುವೆ ಆಗಿರುವ ನಿದರ್ಶನಗಳು ಬೇಕಾದಷ್ಟಿವೆ. ಇದಲ್ಲದೆ, ಏಷ್ಟೋ ಬಾರಿ ಪ್ರೀತಿಸಿದ ಕಾರಣಕ್ಕೆ ಪ್ರೀತಿಯ ಹಕ್ಕಿಗಳು ದುರಂತ ಅಂತ್ಯ ಕಂಡ ಘಟನೆ ಬೇಕಾದಷ್ಟಿದೆ.

 

ತಂಗಿಯನ್ನು ಪ್ರೀತಿಸುತ್ತಿದ್ದ ಲವರ್ ಬಾಯ್ ಅನ್ನು ಹುಡುಗಿಯ ಅಣ್ಣ ಸ್ಕೆಚ್ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನಿಜಕ್ಕೂ ಜನರನ್ನು ಭಯಭೀತಿಗೊಳಿಸಿದೆ.

ದೊಡ್ಡಬಳ್ಳಾಪುರದ ನಿವಾಸಿ 22 ರ ಹರೆಯದ ನಂದನ್ ಕೊಲೆಗಿಡಾದ ಯುವಕ. ತನ್ನ ತಂಗಿಯನ್ನು ಚುಡಾಯಿಸಿ ಪ್ರೀತಿ-ಪ್ರೇಮದ ಜಾಲ ಬೀಸುತ್ತಿದ್ದ ನಂದನ್‍ಗೆ ದರ್ಶನ್ ಎಚ್ಚರಿಕೆ ನೀಡುತ್ತಿದ್ದ. ನಂದನ್ ಚಿಕ್ಕಬಳ್ಳಾಪುರ ನಗರದ ಗಾಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಅಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

ಈತ ಸ್ನೇಹಿತ ದರ್ಶನ್ ತಂಗಿಯನ್ನು ಪ್ರೀತಿಸುತ್ತಿದ್ದ. ಆದರೆ ದರ್ಶನ್, ತಂಗಿಯ ತಂಟೆಗೆ ಬಾರದಂತೆ ಹಲವು ಸಲ ನಂದನ್‌ಗೆ ಎಚ್ಚರಿಕೆ ಕೊಟ್ಟಿದ್ದಾನೆ. ದರ್ಶನ್ ತಂಗಿಯ ಜೊತೆ ನಂದನ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದರಿಂದ ದರ್ಶನ್ ಕೋಪಗೊಂಡು ತನ್ನ ಸ್ನೇಹಿತರ ನೆರವಿನಿಂದ ಸ್ಕೆಚ್ ಹಾಕಿ ನಂದನ್‍ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಪಾರ್ಟಿ ಮಾಡುವ ನೆಪದಲ್ಲಿ ನಂದನ್ ನನ್ನು ದರ್ಶನ್ ಹಾರೋಬಂಡೆಗೆ ಕರೆದುಕೊಂಡು ಹೋಗಿದ್ದು, ವಾದ-ವಿವಾದ ನಡೆಸಿ ಬಳಿಕ ನಂದನ್ ಕೊಲೆಗೆ ದರ್ಶನ್ ಹಾಗೂ ಆತನ ಸ್ನೇಹಿತ ಆಶ್ರಯ್ ಸೇರಿ ಸ್ಕೆಚ್ ಹಾಕಿದ್ದಾರೆ. ನಂತರ ನಂದನ್‌ಗೆ ಕಂಠಪೂರ್ತಿ ಕುಡಿಸಿದ ಬಳಿಕ ಮಾರಕಾಸ್ತ್ರಗಳಿಂದ 40ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಿದ್ದಾರೆ.

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಪ್ರದೀಪ್ ಪೂಜಾರಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ದರ್ಶನ್ ಮತ್ತು ಆತನ ಸ್ನೇಹಿತ ಆಶ್ರಯ್ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಸಿಪಿಐ ರಾಜು ತನಿಖೆಯನ್ನು ಕೈಗೊಂಡಿದ್ದಾರೆ. ಹೀಗೆ ಪ್ರೀತಿಯ ನಶೆಯಿಂದ ಬಾಳಿ ಬದುಕಬೇಕಿದ್ದ ಯುವಕ ಕೊಲೆಯಾಗಿ, ದುರಂತ ಅಂತ್ಯ ಕಾಣುವಂತಾಗಿದೆ.

Leave A Reply

Your email address will not be published.