Fake Drugs : ನಕಲಿ ಔಷಧಗಳಿಗೆ ಕಡಿವಾಣ ಹಾಕಲು ಬರಲಿದೆ ಬಾರ್ ಕೋಡ್ | ಈ ಕುರಿತು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಅನಾರೋಗ್ಯ ಪೀಡಿತರಾದಾಗ ಔಷಧಿಗಳ ಸೇವನೆ ಮಾಡುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಂತೂ ನಾವು ಸೇವಿಸುವ ಆಹಾರ ಪದಾರ್ಥಗಳಿಂದ ಹಿಡಿದು ಪ್ರತಿ ವಸ್ತುಗಳಲ್ಲಿಯು ಕೂಡ ಕಲಬೆರಕೆ, ನಕಲಿ ವಸ್ತುಗಳು ಮಾರುಕಟ್ಟೆಗೆ ಪ್ರವೇಶಿಸಿ ಜನರ ಮನೆ ಸೇರುತ್ತಿವೆ. ಜನರಿಗೆ ನಕಲಿಯಾದ ವಸ್ತುವಿನ ಬಗ್ಗೆ ತಿಳಿಯದೆ ಸೇವಿಸಿ ಅನಾಹುತ ಸಂಭವಿಸಿದರೂ ಅಚ್ಚರಿಯಿಲ್ಲ.
ಇದೀಗ ದೇಶದಲ್ಲಿ ನಕಲಿ ಔಷಧಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಔಷಧಗಳ ಪ್ಯಾಕ್ ಮೇಲೆ ಅದರ ಕುರಿತ ಸಂಪೂರ್ಣ ವಿವರ ನೀಡುವ ಬಾರ್‌ಕೋಡ್ (Barcode), ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಪೂರ್ವ ತಯಾರಿಗಳು ಪೂರ್ಣವಾಗಿದ್ದು, ಸದ್ಯದಲ್ಲೇ ಇದರ ಕುರಿತಾಗಿ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ನೀಡುವ ಸಾಧ್ಯತೆ ದಟ್ಟವಾಗಿದೆ.
ನಕಲಿ ಔಷಧಿಗಳ ಮಾರಾಟದಿಂದ ರೋಗಿಗಳ ಆರೋಗ್ಯದಲ್ಲಿ ವೈಪರಿತ್ಯ, ತೆರಿಗೆ ವಂಚನೆ, ಮೂಲ ಕಂಪನಿಗಳಿಗೆ ನಷ್ಟ… ಹೀಗೆ ನಾನಾ ಸಮಸ್ಯೆಗಳಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಯೋಜನೆ ರೂಪಿಸಿದೆ.
ಇನ್ನು ಮುಂದೆ ಮಾರಾಟವಾಗುವ ಪ್ರತಿ ಔಷಧದ ಲೇಬಲ್‌ನ ಮೇಲೆ ಬಾರ್‌ಕೋಡ್ ಅಥವಾ ಕ್ಯೂಆರ್ ಕೋಡ್ ಮುದ್ರಿಸಲಾಗುತ್ತದೆ. ಗ್ರಾಹಕರು ಈ ಕೋಡ್ ಅನ್ನು ಸ್ಕ್ಯಾನ್ (Scan) ಮಾಡಿದರೆ, ಆ ಔಷಧದ ಸಂಪೂರ್ಣ ವಿವರಗಳನ್ನು ತಿಳಿಯುವ ಜೊತೆಗೆ ಔಷಧಿಯು ನಕಲಿಯಾಗಿದ್ದರೆ ತಿಳಿಯಬಹುದು. ಸ್ಕ್ಯಾನ್ ಮಾಡಿದಾಗ ಬ್ರಾಂಡ್ ನ ಹೆಸರು, ಉತ್ಪಾದಕರ ವಿಳಾಸ, ಬ್ಯಾಚ್ ನಂಬರ್, ಉತ್ಪಾದನೆ ಮಾಡಿದ ದಿನಾಂಕ, ಅವಧಿ ಮುಗಿಯುವ ಸಮಯ, ಉತ್ಪಾದಕರ ಲೈಸೆನ್ಸ್ ನಂಬರ್ ಈ ವಿಷಯಗಳನ್ನು ಗ್ರಾಹಕರು ಸುಲಭವಾಗಿ ಪಡೆಯಬಹುದಾಗಿದೆ.
ಕೇಂದ್ರ ಸರ್ಕಾರ ಅತ್ಯಗತ್ಯ ವಾಗಿರುವ 34 ಔಷಧಗಳ ದರ ಇಳಿಕೆ ಮಾಡುವ ಯೋಜನೆಯಲ್ಲಿದೆ. ಈ ಯೋಜನೆಯನ್ನು ಅತಿ ಹೆಚ್ಚು ಮಾರಾಟವಾಗುವ ಔಷಧಿಗಳಿಗೆ ಜಾರಿಗೊಳಿಸಲು ತೀರ್ಮಾನಿಸಿದ್ದು, ಮೊದಲಿಗೆ 300 ಔಷಧಗಳಿಗೆ ಜಾರಿಯಾಗುವ ಸಾಧ್ಯತೆ ಇದೆ.
ಮೊದಲ ಹಂತದಲ್ಲಿ ಕೆಲವು ಔಷಧಿಗಳಿಗೆ ಜಾರಿಗೊಳಿಸಿದ ಬಳಿಕ ಇಡೀ ಔಷಧ ವಲಯಕ್ಕೆ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ. ಡೋಲೋ, ಆಗ್‌ಮೆಂಟಿನ್, ಸಾರಿಡಾನ್, ಕಾಲ್‌ಪಾಲ್, ಥೈರೋನಾರ್ಮ್ ಮೊದಲಾದ ಔಷಧಗಳು ಮೊದಲ ಹಂತದಲ್ಲಿ ಯೋಜನೆಗೆ ಒಳಪಡುವ ಸಾಧ್ಯತೆ ಇದೆ.ಈಗ ಮಾರಾಟವಾಗುತ್ತಿರುವ ನಕಲಿ ಔಷಧಿಗಳ ಕಡಿವಾಣ ಹಾಕುವ ಯೋಜನೆಯ ಬೆನ್ನಲ್ಲೇ, ವಿಶ್ವ ಆರೋಗ್ಯಸಂಸ್ಥೆಯಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.
ವಿಶ್ವದಲ್ಲಿ ಮಾರಾಟವಾಗುತ್ತಿರುವ ನಕಲಿ ಔಷಧಿಗಳ ಪೈಕಿಯಲ್ಲಿ ಶೇ.35ರಷ್ಟು ಭಾರತದಿಂದಲೇ ರವಾನೆಯಾಗುತ್ತಿದ್ದು, ಈ ನಕಲಿ ಔಷಧಿಗಳಿಗೆ ದೇಶೀಯ ಮಾರುಕಟ್ಟೆಯ ಜೊತೆಗೆ ಜಾಗತಿಕ ಮಟ್ಟದಲ್ಲಿಯೂ ಕೂಡ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.
ದೇಶದಲ್ಲಿ ಮಾರಾಟವಾಗುತ್ತಿರುವ ಔಷಧಿಗಳಲ್ಲಿ ಒಟ್ಟಾರೆ ಯಾಗಿ ಶೇ.25ರಷ್ಟು ನಕಲಿ ಔಷಧಗಳಾಗಿದ್ದು, ನಕಲಿ ಔಷಧಗಳ ವಾರ್ಷಿಕ ಆದಾಯ ಕೂಡ 35000 ಕೋಟಿ ರೂ. ಗಳಾಗಿವೆ. ಭಾರತದಲ್ಲಿ ಹೆಚ್ಚುತ್ತಿರುವ ನಕಲಿ ಔಷಧಿಗಳ ಸಮಸ್ಯೆಯೂ ಸರಕಾರಕ್ಕೆ ದೊಡ್ದ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ 2019 ರಲ್ಲಿ ಅಮೆರಿಕ ಕೂಡ ಎಚ್ಚರಿಕೆಯ ಸಂದೇಶ ರವಾನಿಸಿತ್ತು.
‘ಕುಖ್ಯಾತ ಮಾರುಕಟ್ಟೆಗಳ’ ವಿಮರ್ಶೆಯ ತನ್ನ ವಾರ್ಷಿಕ ‘ವಿಶೇಷ 301 ವರದಿ’ಯಲ್ಲಿ, ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ ಕಚೇರಿಯು ಹೆಚ್ಚಾಗುತ್ತಿರುವ ನಕಲಿ ಔಷಧಿ ಸಮಸ್ಯೆಗೆ ಭಾರತವೆ ಕಾರಣವೆಂದು ಆರೋಪಿಸಿದೆ. ಬಾರ್ ಕೋಡ್‌ಗಳನ್ನು ಹೊರತರುವ ಕ್ರಮವು 2016 ರಿಂದಲೂ ಜಾರಿಗೊಳಿಸುವ ಯೋಜನೆಯಿದ್ದರೂ ಕೂಡ ಕಾರಣಾಂತರಗಳಿಂದ ಮುಂದೂಡಿಕೆಯಾಗುತ್ತಿದೆ.