ಉಡುಪಿ: ಕಾಂಗ್ರೆಸ್ ಹೇಳಿಕೆಗೆ ಬಿಜೆಪಿ ತಿರುಗೇಟು!! ಸಂಸದೆಯೊಂದಿಗೆ ಸೆಲ್ಫಿ-ಮಿಥುನ್ ರೈ ವತಿಯಿಂದ ಬಹುಮಾನ!?

ಉಡುಪಿ:ರಸ್ತೆ ಅವ್ಯವಸ್ಥೆಯ ವಿರುದ್ಧ ಕಾಂಗ್ರೆಸ್ ವತಿಯಿಂದ ನಡೆದಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ಆ ಹೇಳಿಕೆಗೆ ಬಿಜೆಪಿಗರು ತಿರುಗೇಟು ನೀಡಿದ್ದಾರೆ.

 

ಅಂದು ನಡೆದಿದ್ದ ಪ್ರತಿಭಟನೆಯಲ್ಲಿ ಮಿಥುನ್ ರೈ ಅವರು ಬಿಜೆಪಿಯ ಸದಸ್ಯರಿಗೆ ಸ್ಪರ್ಧೆಯೊಂದನ್ನು ನೀಡಿದ್ದು,ಸಂಸದೆ ಶೋಭಾ ಗೌಡ (ಕರಂದ್ಲಾಜೆ) ಅವರು ಜಿಲ್ಲೆಯಲ್ಲಿ ಇಲ್ಲ. ಈಗಾಗಲೇ ಜಿಲ್ಲೆಯ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿದ್ದು, ಸಮಸ್ಯೆ ಅರಿತರೂ ಇತ್ತ ತಲೆ ಹಾಕದ ಸಂಸದರನ್ನು ಹುಡುಕಿ ಎಂದು ಪ್ರತಿಭಟನಾ ಭಾಷಣದ ಭರದಲ್ಲಿ ಬಹಿರಂಗವಾಗಿ ತಾಕೀತು ಮಾಡಿದ್ದರು.

ಅಲ್ಲದೇ ಸಂಸದೆಯನ್ನು ಹುಡುಕಿ, ಬಳಿಕ ಅವರೊಂದಿಗೆ ಸೆಲ್ಫಿ ತೆಗೆದು ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕೊಟ್ಟಲ್ಲಿ, ಮೊದಲ ಐವರು ವಿಜೇತರಿಗೆ ತಲಾ 5000 ನಗದು ಬಹುಮಾನ ವಿತರಿಸಿ ಗೌರವಿಸುವುದಾಗಿಯೂ ಹೇಳಿದ್ದರು. ಅದಾಗಿಯೂ ಸಂಸದೆ ಇತ್ತ ತಲೆ ಹಾಕದೆ ಇದ್ದಲ್ಲಿ, ಕಾಂಗ್ರೆಸ್ ವತಿಯಿಂದ ಜಿಲ್ಲೆಯ ಪ್ರತೀ ಠಾಣೆಗಳಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗುವುದು ಎಂದಿದ್ದರು.

ಆದರೆ ಇಂದು ಸಂಸದೆ ಜಿಲ್ಲೆಗೆ ಆಗಮಿಸಿದ್ದು, ಕಾಪು ವಿನಲ್ಲಿ ನಡೆದ ಖಾದಿ ಮೇಳವನ್ನು ಉದ್ಘಾಟಿಸಿದರು. ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆಗೆ ತಿರುಗೇಟು ನೀಡಲೆಂದು ಕಾರ್ಯಕ್ರಮದ ಬಳಿಕ ಸಂಸದೆಯೊಂದಿಗೆ ಸೆಲ್ಫಿ ಗೆ ಕಾರ್ಯಕರ್ತರು ಮುಗಿ ಬಿದ್ದಿದ್ದು, ಯುವಮೋರ್ಚಾ, ಮಹಿಳಾ ಮೋರ್ಚಾ ಸಹಿತ ಬಿಜೆಪಿಯ ಹಲವು ಕಾರ್ಯಕರ್ತರು ಸೆಲ್ಫಿ ಕ್ಲಿಕ್ಕಿಸಿದರು. ಸದ್ಯ ಕಾಂಗ್ರೆಸ್ ಏಟಿಗೆ ಬಿಜೆಪಿ ತಿರುಗೇಟು ನೀಡಿದ್ದು, ಬಹುಮಾನ ಯಾರ ಪಾಲಾಗಲಿದೆ, ಆ ಐವರು ಅದೃಷ್ಟಶಾಲಿಗಳು ಯಾರೆನ್ನುವುದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.