Tonsillitis home remidies : ಟಾನ್ಸಿಲ್ ಸಮಸ್ಯೆಗೆ ಈ ಮನೆಮದ್ದು ಟ್ರೈ ಮಾಡಿ ನೋಡಿ!!!
ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್ ಎಂದು ಕರೆಯುತ್ತಾರೆ. ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾ ಸೋಂಕು ಟಾನ್ಸಿಲೈಟಿಸಿನ ಪ್ರಮುಖ ಕಾರಣವಾಗಿದೆ. ಇದಲ್ಲದೇ ಅಡಿನೊ ವೈರಸ್, ಹರ್ಪಿಸ್, ಇ ಬಿ ವೈರಸ್, ಮೀಸಲ್ಸ್ ವೈರಸ್ ಕೂಡ ಟಾನ್ಸಿಲೈಟಿಸ್ ಸಮಸ್ಯೆಗೆ ಕಾರಣವಾಗುತ್ತವೆ.
ಈ ಸೂಕ್ಷ್ಮಜೀವಿಗಳು ಟಾನ್ಸಿಲ್‌ಗಳಿಗೆ ಸೋಂಕು ತಗುಲಿಸಿ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಇದಲ್ಲದೆ, ಅವು ಸಾಮಾನ್ಯ ಶೀತ ಮತ್ತು ನೋಯುತ್ತಿರುವ ಗಂಟಲಿನ ಕಾರಣವೂ ಆಗಿರಬಹುದು. ಬಾಯಿ ದುರ್ವಾಸನೆ, ತುಂಬಾ ಚಳಿಯಾಗುವುದು, ಜ್ವರ, ಗಂಟಲಿನಲ್ಲಿ ನೋವು, ಆಹಾರ ನುಂಗಲು ಕಷ್ಟವಾಗುವುದು,ಹೊಟ್ಟೆ ನೋವು, ತಲೆ ನೋವು, ಕುತ್ತಿಗೆ ಬಿಗಿಯಾಗುವುದು.
ಟಾನ್ಸಿಲ್ ಗ್ರಂಥಿಗಳು ಊದಿಕೊಳ್ಳುವುದು,ಕಿವಿನೋವು, ಕೆಮ್ಮು, ಗಂಟಲು ಊದಿಕೊಳ್ಳುವುದು, ಬಾಯಿ ಅಗಲಿಸಲು ಕಷ್ಟವಾಗುವುದು ಈ ರೀತಿಯ ಲಕ್ಷಣಗಳು ಕಂಡುಬರುತ್ತವೆ.
ಈ ಸಮಸ್ಯೆಗೆ ಮನೆ ಮದ್ದು ಮಾಡಿ ಪರಿಹಾರ ಕಂಡುಕೊಳ್ಳಬಹುದು.
ಒಂದು ಚಮಚ ಶುಂಠಿ ಪುಡಿಯನ್ನು ಒಂದೂವರೆ ಕಪ್ ನೀರು ಮತ್ತು ಚಹಾ ಪುಡಿ ಜತೆಗೆ ಸುಮಾರು 10 ನಿಮಿಷಗಳ ಕಾಲ ಕುದಿಸಿ. ಈ ಚಹಾವನ್ನು ದಿನಕ್ಕೆ 2-3 ಬಾರಿ ಕುಡಿಯಬೇಕು. ಅರಿಶಿನಕ್ಕೆ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣ ಇದೆ. ಉರಿಯೂತದಿಂದ ಹಳದಿ ಅಂಗಾಂಶವನ್ನು ರಕ್ಷಿಸುತ್ತದೆ.
ಒಂದು ಕಪ್ ಹಾಲಿಗೆ ಸ್ವಲ್ಪ ಅರಿಶಿನ ಬೆರೆಸಿ ಕುದಿಸಿ ಬಿಸಿಯಾಗಿ ಕುಡಿಯಬೇಕು.ಟಾನ್ಸಿಲೈಟಿಸ್ ಅಥವಾ ಮತ್ತಿತರ ಗಂಟಲಿನ ಸಮಸ್ಯೆ ಕಾಣಿಸಿದಾಗ ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಆಗಾಗ ಬಾಯಿ ಮುಕ್ಕಳಿಸುವುದರಿಂದ ನೋವು ಬೇಗನೆ ಕಡಿಮೆಯಾಗುವುದು.
ಊಟವನ್ನು ಮಾಡುವ ಮೊದಲು ಕೈಗಳನ್ನು ಶುಚಿಗೊಳಿಸಬೇಕು. ಶೀತ, ಕೆಮ್ಮು ಇದ್ದರೆ ಸ್ಪೂನ್ ಬಳಸಿ ಊಟ ಮಾಡುವುದು ಒಳ್ಳೆಯದು. ಇತರರು ಕೆಮ್ಮುವಾಗ ಅಥವಾ ಸೀನುವಾಗ ಅವರಿಂದ ಸ್ವಲ್ಪ ದೂರವಿರಬೇಕು.
ಟಾನ್ಸಿಲ್ ಬಂದರೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಮೃದುವಾದ ಆಹಾರ ಸೇವನೆ ಮಾಡಬೇಕು. ಜೇನಿನಲ್ಲಿ ಆ್ಯಂಟಿ ಬ್ಯಾಕ್ಟಿರಿಯಾ ಅಂಶವಿರುವುದರಿಂದ ಬಿಸಿ ಬಿಸಿಯಾದ ಶುಂಠಿ ಟೀ ಮಾಡಿ ಅದಕ್ಕೆ ಜೇನು ಹಾಕಿ ಕುಡಿದರೆ ಟಾಮ್ಸಿಲೈಟಿಸ್‌ಗೆ ಕಾರಣವಾದ ಸೋಂಕಾಣುಗಳನ್ನು ಹೋಗಲಾಡಿಸಬಹುದು.
ತಣ್ಣೀರು ಕುಡಿಯುವುದಾಗಲಿ, ತಣ್ಣಗಿನ ಪದಾರ್ಥ ತಿನ್ನುವುದಾಗಲಿ ಮಾಡಬಾರದು.ಟಾನ್ಸಿಲ್ ತೊಂದರೆ ಇರುವವರು ಮದ್ಯ ಮತ್ತು ಧೂಮಪಾನ ಅಭ್ಯಾಸವಿದ್ದರೆ ಬಿಡಬೇಕು. ಆದಷ್ಟು ಬಿಸಿ ಬಿಸಿಯಾದ ಆಹಾರ ಸೇವನೆ ಜೊತೆಗೆ ಬಿಸಿ ನೀರನ್ನು ಕುಡಿಯಬೇಕು. ಈ ಮೇಲಿನ ಸಲಹೆಗಳನ್ನು ಪಾಲಿಸಿದರೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.