ನೂತನ ಸಿಡಿಎಸ್‌ ಆಗಿ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ನೇಮಕ

ನವದೆಹಲಿ: ಜನರಲ್ ಬಿಪಿನ್ ರಾವತ್ ಅವರ ನಿಧನದ ಬಳಿಕ 9 ತಿಂಗಳಿಂದ ಖಾಲಿ ಇದ್ದ ಸೇನಾಪಡೆಗಳ ಮುಖ್ಯಸ್ಥರ (ಸಿಡಿಎಸ್‌) ಹುದ್ದೆಗೆ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ.

 

ಲೆ. ಜನರಲ್ ಚೌಹಾಣ್ ನೇಮಕ ಕುರಿತಂತೆ ರಕ್ಷಣಾ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

‘ಲೆಫ್ಟಿನೆಂಟ್ ಜನರಲ್(ನಿವೃತ್ತ) ಅನಿಲ್ ಚೌಹಾಣ್ ಅವರನ್ನು ಸೇನಾಪಡೆಗಳ ನೂತನ ಮುಖ್ಯಸ್ಥರಾಗಿ(ಸಿಡಿಎಸ್) ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಅವರು, ಭಾರತ ಸರ್ಕಾರದ ರಕ್ಷಣಾ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಆದೇಶಗಳು ಜಾರಿಗೆ ಬರಲಿವೆ’ಎಂದು ಅದು ಹೇಳಿದೆ.

ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ, ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ಸೇನೆಯಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಬಂಡುಕೋರ ಚಟುವಟಿಕೆ ನಿಗ್ರಹ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.

2021ರ ಡಿಸೆಂಬರ್ 8ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ ಅವರು ಹುತಾತ್ಮರಾಗಿದ್ದರು. ಆ ಬಳಿಕ ಸಿಡಿಎಸ್‌ ಹುದ್ದೆ ತೆರವಾಗಿತ್ತು

Leave A Reply

Your email address will not be published.