ಹತ್ತನೇ ತರಗತಿ ವಿದ್ಯಾರ್ಥಿನಿಯ ಬ್ಯಾಗ್ ಓಪನ್ ಮಾಡುತ್ತಿದ್ದಂತೆ ಬೆಚ್ಚಿಬಿದ್ದ ಶಿಕ್ಷಕ!
ಸಾಮಾನ್ಯವಾಗಿ ಸ್ಕೂಲ್ ಬ್ಯಾಗ್ ಅಂದಾಕ್ಷಣ ಅದರಲ್ಲಿ ಪುಸ್ತಕ, ಪೆನ್, ಪೆನ್ಸಿಲ್ ಹೀಗೆ ಕಲಿಕೆಗೆ ಸಂಬಂಧಿಸಿದ ವಸ್ತುಗಳು ಇರುವುದು ಕಾಮನ್. ಆದರೆ, ಇಲ್ಲೊಂದು ಕಡೆ ಹತ್ತನೇ ತರಗತಿ ವಿದ್ಯಾರ್ಥಿನಿಯ ಬ್ಯಾಗ್ ನಲ್ಲಿ ಇದ್ದಿದ್ದು ಮಾತ್ರ ಎಲ್ಲರನ್ನೂ ಬೆಚ್ಚಿ ಬೀಳಿಸುವಂತದ್ದು.
ಹೌದು. ಸ್ಕೂಲ್ ಬ್ಯಾಗ್ ನಲ್ಲಿ ಹಾವು ಬಂದು ಕೂತಿದೆ. ಹಾವು ಅಂದಾಕ್ಷಣ ಬೆಚ್ಚಿ ಬೀಳೋವಾಗ ಬ್ಯಾಗ್ ನಲ್ಲೇ ಹಾವು ಬುಸುಗುಟ್ಟುವಾಗ ಹೇಗನಿಸ ಬೇಡ?.. ಆದ್ರೆ, ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯ ಬಡೋನಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಜವಾಗಿಯೂ ಈ ಘಟನೆ ನಡೆದಿದೆ.
ಹಾವೊಂದು ವಿದ್ಯಾರ್ಥಿನಿಯೊಬ್ಬಳ ಸ್ಕೂಲ್ ಬ್ಯಾಗ್ ಒಳಗೆ ನುಸುಳಿಬಿಟ್ಟಿದ್ದು, ಈ ಘಟನೆ ಸೆಪ್ಟೆಂಬರ್ 22 ರಂದು ನಡೆದಿದೆ.10ನೇ ತರಗತಿಯ ವಿದ್ಯಾರ್ಥಿನಿ ಉಮಾ ರಜಾಕ್, ಎಂದಿನಂತೆಯೇ ಸೆ.22ರಂದು ಮನೆಯಿಂದ ತನ್ನ ಬ್ಯಾಗ್ ನೇತು ಹಾಕಿಕೊಂಡು ಶಾಲೆಗೆ ಬಂದಿದ್ದಾಳೆ. ಈ ವೇಳೆ ಬ್ಯಾಗ್ನಿಂದ ಪಠ್ಯಪುಸ್ತಕವನ್ನು ತೆಗೆದುಕೊಳ್ಳಲು ಆಕೆ ಮುಂದಾದಾಗ, ಬ್ಯಾಗ್ ಮೇಲಿನಿಂದ ಮೃದುವಾದ ವಸ್ತುವೊಂದು ಇರುವುದು ಅವಳ ಅನುಭವಕ್ಕೆ ಬರುತ್ತದೆ. ಆಕೆಗೆ ಹಾವು ಸೇರಿದೆ ಎಂಬುದು ಗೊತ್ತಾಗುತ್ತದೆ.
ಬಳಿಕ ವಿದ್ಯಾರ್ಥಿನಿ ತನ್ನ ಶಿಕ್ಷಕರಿಗೆ ಈ ವಿಚಾರವನ್ನು ತಿಳಿಸುತ್ತಾಳೆ. ವೈರಲ್ ವೀಡಿಯೋದಲ್ಲಿ ಇರುವಂತೆ, ಆಕೆಯ ಬ್ಯಾಗ್ ಅನ್ನು ಶಿಕ್ಷಕ, ತರಗತಿಯಿಂದ ಹೊರಗೆ ತಂದು ಜಿಪ್ ತೆಗೆದು, ಒಳಗಿದ್ದ ಪುಸ್ತಕವನ್ನೆಲ್ಲ ಹೊರಗೆ ಸುರಿಯುತ್ತಾರೆ. ಆದರೆ ಹಾವು ಮಾತ್ರ ಹೊರಬರುವುದಿಲ್ಲ. ಮತ್ತೆ ಖಾಲಿ ಬ್ಯಾಗ್ ಅನ್ನು ಜೋರಾಗಿ ಅಲ್ಲಾಡಿಸುತ್ತಾರೆ. ಈ ವೇಳೆ ಕಪ್ಪು ಬಣ್ಣದ ನಾಗರಹಾವೊಂದು ಬ್ಯಾಗ್ನಿಂದ ಹೊರಗೆ ಬೀಳುತ್ತದೆ. ಈ ವೇಳೆ ಹಾವು ತನ್ನ ಹೆಡೆ ಬಿಚ್ಚಿರುತ್ತದೆ.
ಆದರೆ, ಬ್ಯಾಗ್ನಿಂದ ಹೊರ ಬಂದಿದ್ದೆ ತಡ ಸುರ್ರನೇ ಹೋಗಿ ಪರಾರಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಶಿಕ್ಷಣಾಧಿಕಾರಿ ಯು.ಎನ್. ಮಿಶ್ರಾ, ವಿದ್ಯಾರ್ಥಿನಿಯ ಮನೆಯಲ್ಲೇ ಹಾವು ಸ್ಕೂಲ್ ಬ್ಯಾಗ್ ಒಳಗೆ ನುಸುಳಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೇವೆ. ಶಾಲಾ ಬ್ಯಾಗ್ಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡುವಂತೆ ಸೂಚಿಸಿದ್ದೇವೆ ಎಂದು ಹೇಳಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಒಮ್ಮೆಗೆ ಬೆಚ್ಚಿಬಿದ್ದಿದ್ದಾರೆ. ಒಟ್ಟಾರೆ, ಈ ದೃಶ್ಯ ಶಾಲೆಯ ವಿದ್ಯಾರ್ಥಿಗಳನ್ನು ಭಯಬೀಳಿಸುವಂತೆ ಮಾಡಿದೆ.