ಇರಾನ್ನಲ್ಲಿ ಹಿಜಾಬ್ ವಿರುದ್ಧದ ಕೈ ಮೀರಿದ ಪ್ರತಿಭಟನೆ : 75 ಮಂದಿ ಸಾವು
ಇರಾನ್ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆಗಳು ಮುಂದುವರೆದಿವೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಗುಂಡಿನ ದಾಳಿಗಳಲ್ಲಿ ಇದುವರೆಗೆ 75 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ನಾಗರೀಕರು ಇರಾನ್ ಆಡಳಿತದ ವಿರುದ್ಧ ಪ್ರತಿಭಟಿಸುತ್ತಿದ್ದು, ಅಯತೊಲ್ಲಾ ಅಲಿ ಖಮೇನಿ ಅವರನ್ನು ಸರ್ವಾಧಿಕಾರಿ ಎಂದು ಬಣ್ಣಿಸಿದ್ದಾರೆ. ಕಳೆದ 13 ವರ್ಷಗಳಲ್ಲಿ, ಇರಾನ್ನಲ್ಲಿ ಈ ಪ್ರಮಾಣದಲ್ಲಿ ಯಾವುದೇ ಪ್ರತಿಭಟನೆಗಳು ನಡೆದಿಲ್ಲ. ಇವತ್ತಿನ ದುಸ್ಥಿತಿಗೆ ಅಯತೊಲ್ಲಾ ಆಳ್ವಿಕೆಯೇ ಕಾರಣ ಈ ಕೂಡಲೇ ಅಧಿಕಾರದಿಂದ ಕೆಳಗಿಳಿಯುವಂತೆ ಘೋಷನೆ ಮೊಳಗುತ್ತಿವೆ.
ಈ ಆಂದೋಲನಕ್ಕೆ ಮಹಿಳೆಯರಷ್ಟೇ ಅಲ್ಲ ಪುರುಷರೂ ಬೆಂಬಲ ನೀಡುತ್ತಿದ್ದಾರೆ. ಇರಾನ್ ನಲ್ಲಿ ಹಿಜಾಬ್ ಧರಿಸದ ಕಾರಣಕ್ಕೆ 22 ವರ್ಷದ ಮಾಶಾ ಅಮಿನಿ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿ ಆಕೆ ಸಾವಿಗೀಡಾಗಿದ್ದಾಳೆ. ಯುವತಿಯ ಸಾವಿಗೆ ನ್ಯಾಯ ಬೇಕೆಂದು ಆಗ್ರಹಿಸಿ ಮಹಿಳೆಯರು ಹಿಜಾಬ್ ಬಹಿಷ್ಕರಿಸುತ್ತಾ ಬೀದಿಗಿಳಿದಿದ್ದಾರೆ.
ಪ್ರತಿಭಟನೆಯಿಂದಾಗಿ ಇರಾನ್ನಲ್ಲಿ ಹಿಜಾಬ್ ಕಾನೂನನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಹಿಜಾಬ್ ಧರಿಸಬೇಕು ಎಂದು ಆದೇಶಿಸಲಾಗಿದೆ. ಇರಾನ್ನ 46 ಪ್ರಮುಖ ನಗರಗಳಲ್ಲಿ ಈ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಭಾರೀ ಸಂಖ್ಯೆಯಲ್ಲಿ ರಸ್ತೆಗಿಳಿದ ಪ್ರತಿಭಟನಾಕಾರರನ್ನು ಪೊಲೀಸರು ಹಾಗೂ ಸೇನೆ ಹತ್ತಿಕ್ಕುತ್ತಿದೆ. ಲಾಠಿಚಾರ್ಜ್ ಮತ್ತು ಪೊಲೀಸ್ ಫೈರಿಂಗ್ನಲ್ಲಿ ಇದುವರೆಗೆ 15 ಜನರು ಸಾವನ್ನಪ್ಪಿದ್ದು, ಸಾವಿರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ.