Women Health : ಮಹಿಳೆಯರೇ ನಿಮಗೆ ಸುಸ್ತು, ಆಯಾಸ ಕಾಡುತ್ತಿದೆಯೇ? ಹಾಗಾದರೆ ಇದನ್ನೋದಿ
ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಆದರೆ ಇದರಿಂದಾಗಿ ಒಮ್ಮೆ ಆರೋಗ್ಯ ಕೆಟ್ಟರೆ, ರೋಗ ನಿರೋಧಕ ಶಕ್ತಿ ಕುಂಠಿತವಾಗಿ, ಅರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ.
ಮಹಿಳೆಯರು ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುವುದರಿಂದ ಕೆಲವೊಮ್ಮೆ ಒತ್ತಡ ಹೆಚ್ಚಾಗಿ, ಮಹಿಳೆಯರ ದೇಹದಲ್ಲಿ ಅತಿಯಾಗಿ ನಿಶ್ಯಕ್ತಿ ಹಾಗೂ ನಿತ್ರಾಣವು ಕಾಡುತ್ತದೆ. ಆಗ ಔಷಧಿಗಳ ಸೇವನೆ ಮಾಡುವುದು ಸಹಜ ಕ್ರಿಯೆ. ಆದರೆ ಅತಿಯಾದ ಔಷಧಿಗಳ ಸೇವನೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಪೌಷ್ಟಿಕ ಆಹಾರ ಸೇವನೆ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆಯನ್ನು ತಂದುಕೊಂಡರೆ ವರದಾನವಾಗಿ ದೊರೆತಿರುವ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ದಿನದ ಸಂಪೂರ್ಣ ಆಯಾಸವನ್ನು ಹೋಗಲಾಡಿಸಲು ರಾತ್ರಿ ವೇಳೆ ನಿದ್ರೆಯು ಅವಶ್ಯಕವಾಗಿದ್ದು, ಆದರೆ ಕೆಲವೊಮ್ಮೆ ಸರಿಯಾಗಿ ನಿದ್ರೆ ಮಾಡಿದರೂ ಬಳಲಿಕೆ ಮಾತ್ರ ಹಾಗೆ ಉಳಿದುಕೊಂಡಿರುವುದು. ದೈಹಿಕ ಶಕ್ತಿ ಕುಂದಲು ಹಲವು ಕಾರಣಗಳಿದ್ದರೂ ಕೂಡ ಆಹಾರ ಕ್ರಮ ಹಾಗೂ ಜೀವನಶೈಲಿಯು ಇಲ್ಲಿ ಪ್ರಮುಖ ಪಾತ್ರ ವಹಿಸುವುದು.
ಮಹಿಳೆಯರು ಡ್ರೈ ಫ್ರೂಟ್ಸ್ ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗಿ ನಿಯಮಿತವಾಗಿ ಡ್ರೈ ಫ್ರೂಟ್ಸ್ ಸೇವಿಸುತ್ತ ಬಂದರೆ ಜೀರ್ಣಾಂಗ ವ್ಯವಸ್ಥೆ ಬಲಗೊಂಡು ದೇಹದ ಆಯಾಸ ದೌರ್ಬಲ್ಯವನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ.
ಕೆಲಸದ ಒತ್ತಡದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ಧೋರಣೆ ಪಾಲಿಸುತ್ತಾರೆ. ಹಾಗೆಯೇ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡದಿದ್ದಾಗ ದೇಹದಲ್ಲಿ ನೀರಿನ ಕೊರತೆಯಾಗಿ ಮಹಿಳೆಯರು ಆಯಾಸ ಮತ್ತು ಸುಸ್ತಿನ ಸಮಸ್ಯೆ ಎದುರಿಸುತ್ತಾರೆ. ಮಹಿಳೆಯರು ದಿನವಿಡೀ 2 ರಿಂದ 3 ಲೀಟರ್ ನೀರನ್ನು ಕುಡಿಯಬೇಕು. ದೇಹದ ಆಯಾಸ ಮತ್ತು ಸುಸ್ತನ್ನು ನೀರು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಟೀ, ಕಾಫಿ ಅಥವಾ ಸಕ್ಕರೆ ಪಾನೀಯಗಳನ್ನು ಅತಿಯಾಗಿ ಸೇವನೆ ಮಾಡುತ್ತಿದ್ದು, ಮಧ್ಯಾಹ್ನದ ಸಂದರ್ಭದಲ್ಲಿ ಬಳಲಿಕೆ ಕಾಡುತ್ತಲಿದ್ದರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸಕ್ಕರೆಯಿರುವ ಪಾನೀಯಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಠಾತ್ ಏರಿಕೆಯಾಗಿ ದೇಹಕ್ಕೆ ತಕ್ಷಣವೇ ಶಕ್ತಿ ನೀಡಿದರೂ ಕೆಲವೇ ಸಮಯದಲ್ಲೆ ದೈಹಿಕ ಶಕ್ತಿಯು ಕುಂಠಿತ ಗೊಳ್ಳುತ್ತದೆ. ಪದೇ ಪದೇ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಬದಲಾವಣೆ ಆಗುತ್ತಲಿದ್ದರೆ ಆಗ ದೇಹವು ನಿಶ್ಯಕ್ತಿ ಒಳಗಾಗುವುದು. ರಕ್ತಹೀನತೆ, ಕೆಟ್ಟ ಏಕಾಗ್ರತೆ ಮತ್ತು ಮನಸ್ಥಿತಿ ಬದಲಾವಣೆಯು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಸಮತೋಲನ ಉಂಟು ಮಾಡುವುದು. ಪ್ರೋಟೀನ್ ಮತ್ತು ನಾರಿನಾಂಶವು ಇರುವಂತಹ ಆಹಾರವನ್ನು ಸೇವನೆ ಮಾಡುವುದು ಉತ್ತಮ.
ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗಲು ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಕ್ಯಾಲ್ಸಿಯಂ ಜೀವಕೋಶಗಳು ಆಮ್ಲಜನಕವನ್ನು ಪಡೆಯಲು ಸಹಾಯ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆಯಾದ್ರೆ ಆಯಾಸ ಕಾಡುತ್ತದೆ. ಋತು ಚಕ್ರದ ಸಮಯದಲ್ಲಿ ದೇಹದ ಅಂಗಾಂಶಗಳಿಗೆ ಪೂರೈಕೆ ಯಾಗಬೇಕಾಗಿರುವಂತಹ ಆಮ್ಲಜನಕವು ಇಲ್ಲಿ ಪೂರೈಕೆ ಆಗದೆ ಇದ್ದಾಗ ಕೂಡ ದಿನವಿಡೀ ಸುಸ್ತು ಕೆಲವರನ್ನು ಕಾಡುತ್ತದೆ. ಕಬ್ಬಿಣ ಭರಿತ ಆಹಾರವನ್ನು ಸೇವಿಸಬೇಕು. ಪಾಲಕ್, ಬೀನ್ಸ್, ಬಟಾಣಿ, ಕೋಸುಗಡ್ಡೆ ಮತ್ತು ಸಿಹಿ ಆಲೂಗಡ್ಡೆ ಇವುಗಳಲ್ಲಿ ಕಬ್ಬಿಣದ ಅಂಶ ಕಂಡು ಬರುತ್ತದೆ. ಹಾಗಾಗಿ ಈ ಎಲ್ಲ ಆಹಾರವನ್ನು ಮಹಿಳೆಯರು ಸೇವಿಸುವುದು ಉತ್ತಮ.
ನಿರಂತರವಾಗಿ ಊಟ ಮಾಡದೆ ಇದ್ದಾಗ ಆಹಾರ ಕ್ರಮದ ಬಗ್ಗೆ ಮತ್ತೆ ಚಿಂತಿಸಬೇಕಾಗಿದೆ. ಖಾಲಿ ಹೊಟ್ಟೆಯಲ್ಲಿ ಹೆಚ್ಚು ದೂರ ಓಡಿದರು ಕೂಡ ದೇಹದ ಶಕ್ತಿಯು ಕಡಿಮೆಯಾಗುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಹಿಳೆಯರು ದಿನದಲ್ಲಿ ಒಂದು ಸಮಯವಾದ್ರೂ ಹಾಲನ್ನು ಕುಡಿಯಬೇಕು ಇಲ್ಲವೇ ಮಜ್ಜಿಗೆ, ತುಪ್ಪ ಮತ್ತು ಮೊಸರನ್ನು ತಿನ್ನಬಹುದು. ಹಾಲು ಕುಡಿಯುವುದರಿಂದ ಸುಸ್ತು ಕಡಿಮೆಯಾಗುತ್ತದೆ.
ಬಾಳೆ ಹಣ್ಣಿನಲ್ಲಿ ಸಾಕಷ್ಟು ಪೌಷ್ಟಿಕಾಂಶದ ಜೊತೆಗೆ ಕಾರ್ಬೋಹೈಡ್ರೇಟ್ ಅನ್ನು ಒಳಗೊಂಡಿದೆ. ಇದು ದೇಹಕ್ಕೆ ಶಕ್ತಿ ನೀಡಿ, ದೇಹದ ದಣಿವನ್ನು ಕಡಿಮೆ ಮಾಡುತ್ತದೆ. ಪ್ರತಿ ದಿನ ಬಾಳೆಹಣ್ಣು ತಿನ್ನುವುದರಿಂದ ದೇಹದ ಮೂಳೆಗಳು ಬಲಗೊಳ್ಳುತ್ತವೆ.
ಮನಸ್ಸನ್ನು ಒಂದು ಸ್ಥಳದಲ್ಲಿ ಬಂಧಿಸಿಟ್ಟು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲವಾದರೆ ಆಗ ಕೆಫಿನ್ ಸೇವನೆ ಕಡಿಮೆ ಮಾಡಬೇಕು. ಆದರೆ, ಅತಿಯಾಗಿ ಕೆಫಿನ್ ಸೇವನೆ ಮಾಡಿದರೆ ನಕಾರಾತ್ಮಕ ಪರಿಣಾಮ ಬೀರಿ ಬಳಲಿಕೆ ಉಂಟಾಗಬಹುದು.
ಮೆಗ್ನಿಶಿಯಂ ದೇಹದಲ್ಲಿ ಶಕ್ತಿ ಉತ್ಪತ್ತಿಗೆ ಕಾರಣವಾಗುವುದು ಮತ್ತು ಮೆಗ್ನಿಶಿಯಂ ಕಡಿಮೆ ಇದ್ದರೆ ಅದರಿಂದ ದೇಹದಲ್ಲಿ ನಿಶ್ಯಕ್ತಿಯು ಕಾಡುವುದು. ಇದಕ್ಕೆ ಹಸಿರೆಲೆ ತರಕಾರಿಗಳು ಮತ್ತು ಇಡೀ ಧಾನ್ಯಗಳನ್ನು ಸೇವನೆ ಮಾಡಿದರೆ ಒಳ್ಳೆಯದು.