ಮಗ ಸತ್ತಿದ್ದರೂ ನಂಬದ ಮನೆಯವರು ; ಶವದೊಂದಿಗೆ ಜೀವನ ಕಳೆಯುತ್ತಾ ಆರೈಕೆ ಮಾಡುತ್ತಿದ್ದ ಅಪ್ಪ-ಅಮ್ಮ
ಅಪ್ಪ ಅಮ್ಮನಿಗೆ ಮಕ್ಕಳು ಅಂದ್ರೆ ಸಹಜವಾಗಿಯೇ ಪ್ರೀತಿ ಜಾಸ್ತಿ. ಮಕ್ಕಳಿಗೆ ಒಂಚೂರು ನೋವಾದರೂ ಹೆತ್ತವರು ಸಹಿಸುವುದಿಲ್ಲ. ಅಂತದರಲ್ಲಿ ಮಗ ಸಾವನ್ನಪ್ಪಿದ್ದಾನೆ ಅಂದ್ರೆ ಯಾವ ಅಪ್ಪ-ಅಮ್ಮನಿಗೆ ಆದ್ರೂ ಸಹಿಸಲು ಅಸಾಧ್ಯವೇ ಸರಿ. ಅದೇ ರೀತಿ ಇಲ್ಲೊಂದು ಕಡೆ ಮಗನ ಸಾವನ್ನು ನಂಬದ ಅಪ್ಪ ಅಮ್ಮ ಮಾಡಿದ್ದೇನು ಗೊತ್ತಾ?
ಹೌದು. ದಂಪತಿಗಳು ತನ್ನ ಮಗನನ್ನು ಕೋವಿಡ್ನಿಂದ ಮೃತಪಟ್ಟಿದ್ದರು. ಆದ್ರೆ, ಅವರು ಸತ್ತಿದ್ದಾರೆ ಎಂದು ನಂಬಲು ತಯಾರಿಲ್ಲದ ಪತ್ನಿ ಹಾಗೂ ಅಪ್ಪ-ಅಮ್ಮ, ಸುಮಾರು ಒಂದೂವರೆ ವರ್ಷಗಳ ಕಾಲ ಮನೆಯಲ್ಲೇ ಇರಿಸಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
2021ರ ಏಪ್ರಿಲ್‌ನಲ್ಲಿ ಆದಾಯ ತೆರಿಗೆ ಇಲಾಖೆ ಉದ್ಯೋಗಿಯಾಗಿದ್ದ ವಿಮಲೇಶ್ ಕುಮಾರ್ ಅವರು ಮೃತಪಟ್ಟಿದ್ದರು. ಆದರೆ ಅವರು ಮೃತಪಡಲಿಲ್ಲ, ವಾಪಸ್ ಬರುತ್ತಾರೆ, ಕೋಮಾಕ್ಕೆ ಜಾರಿದ್ದಾರೆ ಎಂದು ನಂಬಿದ ಕುಟುಂಬಸ್ಥರು ಮನೆಯಲ್ಲಿಯೇ ಗಂಗಾಜಲವನ್ನು ಕುಡಿಸುತ್ತಾ ಇರಿಸಿಕೊಂಡಿದ್ದಾರೆ.
ಆದರೆ ವರ್ಷ ಕಳೆದರೂ ವಿಮಲೇಶ್ ಕುಮಾರ್ ಕಚೇರಿಗೆ ಹಾಜರಾಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಆದಾಯ ತೆರಿಗೆ ಇಲಾಖೆ ಸೂಚಿಸಿತ್ತು. ಆಗ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವು ಮನೆಗೆ ತೆರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಈ ವೇಳೆ, ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದರೂ, ಕುಟುಂಬಸ್ಥರು ಮಾತ್ರ ಅವರು ಜೀವಂತವಾಗಿದ್ದಾರೆ ಎಂದಿದ್ದಾರೆ.
ಮನೆಯವರನ್ನು ನಂಬಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಗಿ ಬಂದಿತ್ತು. ಪತಿ ಕೋಮಾದಿಂದ ಹೊರ ಬರಲಿ ಎಂದು ಪ್ರತಿದಿನ ಬೆಳಗ್ಗೆ ಕುಮಾರ್ ಅವರ ದೇಹಕ್ಕೆ ಪತ್ನಿ ಗಂಗಾಜಲ ಸಿಂಪಡಿಸುತ್ತಿದ್ದರು. ಅಲ್ಲದೇ, ನೆರೆಹೊರೆಯವರಿಗೂ ವಿಮಲೇಶ್ ಕುಮಾರ್ ಕೋಮಾದಲ್ಲಿದ್ದಾರೆ ಎಂದು ಕುಟುಂಸ್ಥರು ತಿಳಿಸಿದ್ದರು. ಆಗಾಗ್ಗೆ ಆಕ್ಸಿಜನ್ ಸಿಲಿಂಡರ್ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ಅದನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕಾನ್ಪುರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಲೇಶ್ ಅವರ ಪತ್ನಿ ಮಾನಸಿಕವಾಗಿ ಬಳಲುತ್ತಿರುವಂತೆ ತೋರುತ್ತದೆ. ಕುಟುಂಬಸ್ಥರು ಕೂಡ ಮಗನ ನೆನಪಿನಲ್ಲೇ ದಿನ ಕಳೆದಿದ್ದರು.