ಮಂಗಳೂರು : ನಾಪತ್ತೆಯಾದ ಪಿಯುಸಿ ವಿದ್ಯಾರ್ಥಿನಿಯರ ಪ್ರಕರಣ : ಮೂರು ವಿದ್ಯಾರ್ಥಿನಿಯರು ಪತ್ತೆ

ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಕಿಟಕಿ ಮುರಿದು ಬುಧವಾರ ಮುಂಜಾನೆ 3-30ರ ವೇಳೆಗೆ ಪರಾರಿಯಾಗಿದ್ದ ಘಟನೆಯೊಂದು ನಡೆದಿದ್ದು, ಈಗ ಪೊಲೀಸರ ತನಿಖೆಯ ಪ್ರಕಾರ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

 

ವಿದ್ಯಾರ್ಥಿನಿಯರು ಮಂಗಳೂರು ರೈಲು ನಿಲ್ದಾಣದ ಮೂಲಕ ಕೊಯಮುತ್ತೂರಿಗೆ ಪ್ರಯಾಣಿಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ನಂತರ ವಿದ್ಯಾರ್ಥಿನಿಯರ ಪೋಷಕರೊಂದಿಗೆ ಕೊಯಮುತ್ತೂರಿಗೆ ತೆರಳಿದ್ದರು. ಅಲ್ಲದೆ ಮಂಗಳೂರು ಪೊಲೀಸರು ಚೆನ್ನೈಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಈ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ, ಇದನ್ನು ಕಂಡು ವಿಚಾರಣೆ ನಡೆಸಿದ ಪೊಲೀಸರು, ನಂತರ ಸಂಶಯಗೊಂಡು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದ್ದರು. ಅಲ್ಲಿಂದ ಇದೀಗ ಮಂಗಳೂರಿಗೆ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ.

ಘಟನೆ ವಿವರ : ಹಾಸ್ಟೆಲ್ ನಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದಲೇ ನಾಪತ್ತೆಯಾಗಿರುವ ಘಟನೆಯೊಂದು ಬುಧವಾರ ನಡೆದಿತ್ತು. ನಗರದ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ಓದುತ್ತಿದ್ದ ಮೂವರು ಪಿಯುಸಿ ವಿದ್ಯಾರ್ಥಿನಿಯರು ಕಾಲೇಜು ಹಾಸ್ಟೆಲ್ ನಿಂದ ಪರಾರಿಯಾಗಿದ್ದರು.

ಬೆಂಗಳೂರು ಮೂಲದ ಯಶಸ್ವಿನಿ, ದಕ್ಷತಾ ಮತ್ತು ಚಿತ್ರದುರ್ಗ ಮೂಲದ ಸಿಂಚನಾ ಪರಾರಿಯಾದ ವಿದ್ಯಾರ್ಥಿನಿಯರು. ಮುಂಜಾನೆ ಮೂರು ಗಂಟೆಯ ಸುಮಾರಿಗೆ ಹಾಸ್ಟೆಲ್‌ ಕಿಟಕಿ ಮುರಿದು ಹೊರಕ್ಕೆ ಹಾರಿ, ವಿದ್ಯಾರ್ಥಿನಿಯರು ಪರಾರಿಯಾಗಿದ್ದು ನಿಜಕ್ಕೂ ಆತಂಕ ಮೂಡಿಸಿತ್ತು.”ನಾವು ಹೋಗುತ್ತಿದ್ದೇವೆ, ಕ್ಷಮಿಸಿ” ಅಂತ ಪತ್ರ ಬರೆದಿಟ್ಟು ತೆರಳಿದ್ದ ವಿದ್ಯಾರ್ಥಿನಿಯರು, ಎಲ್ಲಿ ಹೋಗಿದ್ದಾರೆ, ಯಾರ ಉತ್ತೇಜನದಿಂದ ಹೊರ ತೆರಳಿದ್ದಾರೆ ಅನ್ನೋದು ಗೊಂದಲ ಮೂಡಿಸಿತ್ತು. ಈಗ ಪೊಲೀಸರು ತನಿಖೆಯಿಂದ ವಿದ್ಯಾರ್ಥಿಗಳ ಪತ್ತೆಯಾಗಿದೆ.

Leave A Reply

Your email address will not be published.