ಬೆಳ್ತಂಗಡಿ : ಸ್ವಸಹಾಯ ಸಂಘದ ಸಾಲ ತೆಗೆದು ಗೆಳೆಯನಿಗೆ ಸಹಾಯ, ಮಾಡಿದ್ದೇ ಜೀವಕ್ಕೆ ಉರುಳಾಯಿತೇ?

0 50

‘ಸಾಲ’ ಎಂಬುದು ಕೇವಲ ಒಂದು ಪದವಾದರೆ, ಇದು ಅದೆಷ್ಟೋ ಜನರ ಪ್ರಾಣವನ್ನೇ ಹಿಂಡಿದೆ. ಸಾಲ ಮರುಪಾವತಿಯಾಗದೆಯೋ ಅಥವಾ ಇನ್ಯಾರೋ ಹಣ ಪಾವತಿಸದಿದ್ದಾಗ ಇದರ ಹೊರೆ ಸಾಲಗಾರನ ಮೇಲೆ ಬಿದ್ದು ಅದೆಷ್ಟೋ ಬಡ ಜೀವಗಳು ಆತ್ಮಹತ್ಯೆ ಎಂಬ ಪರಿಹಾರಕ್ಕೆ ತಲೆ ಕೊಟ್ಟಂತಹ ಅದೆಷ್ಟೋ ಘಟನೆಗಳು ನಡೆದಿದೆ. ಅದೇ ರೀತಿಯ ಘಟನೆ ಇದೀಗ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ನಿನ್ನೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಮೃತ ಯುವಕನನ್ನು ನೆರಿಯ ಗ್ರಾಮದ ಚಂದ್ರಶೇಖರ್ (24) ಎಂದು ಗುರುತಿಸಲಾಗಿದೆ.

ಗಾರೆ ಮತ್ತು ವಯರಿಂಗ್ ಕೆಲಸ ಮಾಡುತ್ತಿದ್ದ ಬೆಳ್ತಂಗಡಿ ತಾಲೂಕಿನ ಬೆಂದ್ರಳ ತೋಟತ್ತಾಡಿಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿಯಾಗಿರುವ ಚಂದ್ರಶೇಖರ ಪೂಜಾರಿ (23) ಒಂದು ವಾರದ ಹಿಂದೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಇದನ್ನು ಕಂಡ ಮನೆಯವರು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಕೋಮ ಸ್ಥಿತಿಗೆ ತಲುಪಿದ್ದ ಯುವಕ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗಿದೆ ಬೆಳಗ್ಗೆ ಸರಿಸುಮಾರು ಒಂಬತ್ತು ಗಂಟೆಗೆ ಸಾವನ್ನಪ್ಪಿದ್ದಾರೆ.

ಏನಿದು ಘಟನೆ :
ಚಂದ್ರಶೇಖರ ಸಹಿತ ಎಂಟು ಜನ ಸೇರಿ ಶಬರಿ ಸ್ವಸಹಾಯ ಸಂಘ ಮಾಡಿದ್ದರು. ಈ ಸಂಘದ ಮುಖಾಂತರ ಉಜಿರೆಯ ಖಾಸಗಿ ಬ್ಯಾಂಕಿನಿಂದ ನಾಲ್ಕು ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಈ ಹಣವನ್ನು ಎಂಟು ಜನ ಸದಸ್ಯರು ಹಂಚಿಕೊಂಡಿದ್ದು, ಚಂದ್ರಶೇಖರನ ಹಣವನ್ನು ಸದಸ್ಯ ಯೋಗೀಶ ಪಡೆದುಕೊಂಡಿದ್ದ ಎನ್ನಲಾಗಿದೆ. ಆದರೆ, ಸಾಲ ಪಡೆದವ ಸಾಲ ಕಟ್ಟದ ಹಿನ್ನೆಲೆಯಲ್ಲಿ ಬ್ಯಾಂಕಿನವರು ಈ ಬಗ್ಗೆ ಪ್ರಶ್ನಿಸಿದ್ದು, ಬ್ಯಾಂಕ್ ಸಿಬ್ಬಂದಿಯು ಚಂದ್ರಶೇಖರ ಇವರಿಗೆ ಪದೇಪದೇ ಕರೆಗಳನ್ನು ಮಾಡುತ್ತಿದ್ದರು.

ಈ ವೇಳೆ ಚಂದ್ರಶೇಖರ ಇತರರಿಗೆ ದೂರವಾಣಿ ಕರೆ ಮಾಡಿ ಹಣ ಕಟ್ಟದಿರುವ ಬಗ್ಗೆ ಕೇಳಿದ್ದರು. ಆದರೆ, ಸ್ವ ಸಹಾಯ ಸಂಘದ ಸದಸ್ಯರಾದ ಸಚಿನ್, ಯೋಗೀಶ್, ನಾರಾಯಣ ಹಾಗೂ ಸುದರ್ಶನ ಅವರು ಸೇರಿಕೊಂಡು ಚಂದ್ರಶೇಖರ್ ಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದರು. ಇದರಿಂದ ನೊಂದು ಚಂದ್ರಶೇಖರ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಆತನ ತಾಯಿ ಪುಷ್ಪಾವತಿ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರು.

ಬ್ಯಾಂಕ್ ಸಿಬ್ಬಂದಿ ಪದೇ ಪದೇ ಕರೆ ಮಾಡಿ ಕೇಳುತ್ತಿದ್ದರಿಂದ ಮನನೊಂದು ಹಾಗೂ ಚಂದ್ರಶೇಖರ್ ಅವರಿಗೆ ತಂಡದ ಸದಸ್ಯರು ಬೆದರಿಕೆ ಹಾಕಿದ್ದರಿಂದ ಬೇಸತ್ತು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ನಿನ್ನೆ ಮಂಗಳೂರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply