Eyebrow Shape Personality Test | ನಿಮ್ಮ ಹುಬ್ಬುಗಳೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ!!!
ಜನರು ಏನೇ ಒಳ್ಳೆಯ ಘಟನೆ, ಇಲ್ಲವೇ ಕೆಟ್ಟದ್ದು ಸಂಭವಿಸಿದರೂ ಕೂಡ ದೇವರ ಇಲ್ಲವೇ, ಪಂಡಿತರ ಮೊರೆ ಹೋಗುವುದು ವಾಡಿಕೆ. ಜೋತಿಷ್ಯ ಶಾಸ್ತ್ರದ ಮೂಲಕ ಜಾತಕ ನೋಡಿ ಭವಿಷ್ಯದಲ್ಲಿ ನಡೆಯುವ ವಿಚಾರಗಳ ಬಗ್ಗೆ, ಸಂಖ್ಯಾಶಾಸ್ತ್ರ, ಹಸ್ತ ಸಾಮುದ್ರಿಕಾ ಹೀಗೆ ಅನೇಕ ವಿಧಾನಗಳಿಂದ ಭವಿಷ್ಯದ ಬಗ್ಗೆ ತಿಳಿಯಬಹುದು. ಇದಲ್ಲದೆ, ಶರೀರದ ರಚನೆಯ ಬದಲಾವಣೆಯಿಂದಲೂ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ. ಹಾಗಾಗಿ ಕಣ್ಣು, ಬೆರಳು, ಹಸ್ತದ ರಚನೆಯೂ ಸಹ ವ್ಯಕ್ತಿಯ ಸ್ವಭಾವದ ಬಗ್ಗೆ ತಿಳಿಸುತ್ತದೆ. ಹುಬ್ಬಿನಿಂದಲು ಸಹ ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದಾಗಿದೆ.ದಪ್ಪ, ತೆಳು, ನೇರ, ಕಮಾನು ಹೀಗೆ ಭಿನ್ನ ಆಕಾರಗಳಲ್ಲಿ ವಿಂಗಡಿಸಿ, ಆಯಾ ಆಕಾರಕ್ಕನುಸಾರ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಮತ್ತು ಭಾವನಾತ್ಮಕ ಅಂಶ, ಬುದ್ಧಿವಂತಿಕೆಯ ಅಂಶಗಳ ಮಟ್ಟವನ್ನೂ ತಿಳಿಯಬಹುದು. ದಪ್ಪ ಹುಬ್ಬು ಹೊಂದಿದ್ದವರು, ಸ್ವತಂತ್ರ ಮನೋಭಾವದವರಾಗಿರುತ್ತಾರೆ. ಪ್ರತಿಯೊಂದರಲ್ಲಿಯೂ ಸೌಂದರ್ಯವನ್ನು ಕಾಣುವ ಸ್ವಭಾವದವರಾಗಿದ್ದು, ಉತ್ತಮ ವಿಷಯಗಳನ್ನು ನೇರವಾಗಿ ಪ್ರಶಂಸಿಸುವ ಗುಣ ಹೊಂದಿರುತ್ತಾರೆ. ಇತರರು ಇವರ ಬಗ್ಗೆ ಹೇಗೆ ಯೋಚಿಸುತ್ತಾರೆ, ಗ್ರಹಿಸುತ್ತಾರೆ ಎಂಬ ಬಗ್ಗೆ ಇವರು ಚಿಂತಿಸುವುದಿಲ್ಲ. ಈ ವ್ಯಕ್ತಿಗಳು ಹೆಚ್ಚು ಅಹಂಕಾರ ಗುಣವನ್ನು ಹೊಂದಿರುತ್ತಾರೆ. ಹಣದ ಬಗ್ಗೆ ಹೆಚ್ಚಿನ ವ್ಯಾಮೋಹವನ್ನು ಹೊಂದಿರುತ್ತಾರೆ. ಅಷ್ಟೆ ಅಲ್ಲದೇ ಯಾವುದಾದರೂ ಸರಿ ಹಣ ಸಂಪಾದಿಸಬೇಕೆಂಬ ನಿಲುವು ಇವರದ್ದಾಗಿರುತ್ತದೆ. ಈ ರೀತಿ ಹುಬ್ಬು ಹೊಂದಿರುವ ವ್ಯಕ್ತಿಗಳು ಹೆಚ್ಚು ಸಿಟ್ಟನ್ನು ಹೊಂದಿರುತ್ತಾರೆ. ಬದುಕಿನುದ್ದಕ್ಕೂ ಪರಿಪೂರ್ಣತೆಯೆಡೆಗಿನ ತುಡಿತ ಹೊಂದಿದ್ದು, ಇವರ ಆದರ್ಶ, ಆಲೋಚನೆಗಳಿಗೆ ಅನುಗುಣವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ.ಪ್ರತೀ ವಿಷಯಗಳ ಬಗ್ಗೆಯೂ ಸೂಕ್ಷ್ಮವಾಗಿ ಯೋಚಿಸಿ, ನಿರ್ಧಾರ ಕೈಗೊಳ್ಳುವ ಗುಣ ಮತ್ತು ಆತ್ಮವಿಶ್ವಾಸ ಹೆಚ್ಚಿರುತ್ತದೆ. ತಾರ್ಕಿಕ ವ್ಯಕ್ತಿತ್ವದವರಾಗಿದ್ದು, ಭಾವನಾತ್ಮಕ ಏರಿಳಿತಗಳಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವುದಿಲ್ಲ. ಗುರಿಗೆ ಅಡ್ಡಬರುವ ಸಂಗತಿಗಳನ್ನು ನಿರ್ಲಕ್ಷಿಸುತ್ತಾರೆ.ತೆಳ್ಳಗಿನ ಹುಬ್ಬುಗಳನ್ನು ಹೊಂದಿದ್ದವರಲ್ಲಿ ಆತ್ಮವಿಶ್ವಾಸದ ಕೊರತೆ ಇದೆ ಎನ್ನಲಾಗುತ್ತದೆ. ಹಾಗಾಗಿ ನಿರ್ಧಾರ ಕೈಗೊಳ್ಳುವಾಗ ಹೊಯ್ದಾಟ ಉಂಟಾಗುತ್ತದೆ, ಆಗ ಇತರರ ಸಹಾಯ ಪಡೆಯಲು ಇಚ್ಛಿಸುತ್ತಾರೆ. ಅಲ್ಲದೆ, ಸಮಾಧಾನ ಚಿತ್ತರಾಗಿ ಸದಾ ಸಂತೋಷದಿಂದ ಇರುವ ಈ ವ್ಯಕ್ತಿಗಳಿಗೆ ತಾಳ್ಮೆಯೂ ಅತ್ಯಧಿಕವಾಗಿರುತ್ತದೆ. ಆದರ್ಶ ಮತ್ತು ಸಿದ್ಧಾಂತಗಳ ನೆಲೆಗಟ್ಟಿನಲ್ಲಿಯೇ ಮುಂದುವರಿದು ಗುರಿ ಸಾಧಿಸುವ ಛಲ ಹೊಂದಿರುತ್ತಾರೆ. ಈ ವ್ಯಕ್ತಿಗಳು ಹೆಚ್ಚು ಜವಾಬ್ದಾರಿಯುತ ಗುಣವನ್ನು ಮತ್ತು ಹೆಚ್ಚಿನ ಜ್ಞಾನವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ.ಕಮಾನಿನಾಕಾರದ ಹುಬ್ಬುಗಳನ್ನು ಹೊಂದಿದವರು ಮಹತ್ವಾಕಾಂಕ್ಷೆ, ತಾಳ್ಮೆ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಯಾವ ವಿಷಯವನ್ನು ಕೂಡ ನೇರವಾಗಿ ತಿಳಿಸದೆ ಸಿಹಿಲೇಪಿಸಿ ಹೇಳಿಕೆಯ ಮೂಲಕ ಇತರರಿಗೆ ತಲುಪಿಸಲು ಇಷ್ಟಪಡುತ್ತಾರೆ. ತಮ್ಮ ಉಲ್ಲಸಿತ ಮನೋಭಾವದಿಂದ ಸುತ್ತಮುತ್ತಲಿನವರನ್ನು ಆಕರ್ಷಿಸುತ್ತಾರೆ ಜೊತೆಗೆ ಮಾತನಾಡುವ ಕೌಶಲ್ಯ ದಿಂದ ಇತರರನ್ನು ಸೆಳೆಯುತ್ತಾರೆ. ಯಾರನ್ನಾದರೂ ಹೃದಯಕ್ಕೆ ಹತ್ತಿರವಾಗಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಅಲ್ಲದೆ, ಇವರ ಭಾವನಾತ್ಮಕ ಸ್ಪಂದನೆ ಸಶಕ್ತ ಮತ್ತು ಪ್ರಭಾವಶಾಲಿಯಾಗಿರುತ್ತದೆ.ನೇರ ಹುಬ್ಬುಗಳನ್ನು ಹೊಂದಿದವರು ತಾರ್ಕಿಕದ ಕಡೆ ಹೆಚ್ಚು ಗಮನ ಕೊಡುವವರು. ಏಕೆಂದರೆ, ಇವರ ಹೃದಯವು ಭಾವನೆಗಳೆಡೆಗೆ ಜಾರುವುದು ಅವರಿಗೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿರುತ್ತದೆ. ಅದನ್ನು ಮೀರಲೆಂದು ಎಚ್ಚರಿಕೆಯ ನಡೆಯನ್ನು ರೂಢಿಸಿಕೊಂಡಿರುತ್ತಾರೆ. ಆದರೂ ಭಾವನೆಗಳಿಗೆ ಪ್ರಾಧಾನ್ಯ ಕೊಡುವಂಥ ಬೌದ್ಧಿಕ ಶಕ್ತಿಯುಳ್ಳ ವ್ಯಕ್ತಿ. ವೈಯಕ್ತಿಕ ಮತ್ತು ವೃತ್ತಿಜೀವನವನ್ನು ಪ್ರತ್ಯೇಕವಾಗಿ ಕಾಪಾಡಿಕೊಳ್ಳುವ ದಕ್ಷತೆ ಇವರಿಗಿದೆ. ಆದ್ದರಿಂದಲೇ ವೃತ್ತಿ ವಿಷಯವಾಗಿ ಇವರ ಪ್ರಯತ್ನಗಳು ಸಫಲವಾಗುತ್ತವೆ. ಭಾವನಾತ್ಮಕ ಪ್ರಕ್ಷುಬ್ಧತೆಗೆ ಒಳಗಾಗುವುದು ಅತಿ ವಿರಳ. ಹಾಗೆಯೇ ಭಾವನಾತ್ಮಕ ಸ್ಥಿರತೆಯುಳ್ಳ ವ್ಯಕ್ತಿಗಳಿಗೆ ಆದ್ಯತೆ ಕೊಡುತ್ತಾರೆ. ನಿಂತ ಕಾಲಮೇಲೆ ನಿರ್ಧಾರ ತೆಗೆದುಕೊಳ್ಳುವುದು ಇವರ ಸ್ವಭಾವ ಅಲ್ಲ. ಇವರನ್ನು ಕಾಪಾಡುವುದು ಇವರ ಹಠ, ನೇರವಂತಿಕೆ.ಕೂಡಿರುವ ಹುಬ್ಬು ಹೊಂದಿರುವವರು, ಚತುರರು ಮತ್ತು ಸಂಯಮವನ್ನು ಹೊಂದಿರುವವರು ಆಗಿರುತ್ತಾರೆ. ಈ ವ್ಯಕ್ತಿಗಳು ಸದಾ ತಮ್ಮ ಯಶಸ್ಸು ಮತ್ತು ಜೀವನದಲ್ಲಿ ಸಾಧಿಸಬೇಕಾದ ಗುರಿಗಳ ಬಗ್ಗೆಯೇ ಆಲೋಚಿಸುತ್ತಾ ಇರುತ್ತಾರೆ. ಇತರರಿಂದ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಬಗ್ಗೆ ಇವರಿಗೆ ಚೆನ್ನಾಗಿ ತಿಳಿದಿರುತ್ತದೆ.ಎರಡು ಹುಬ್ಬುಗಳ ಅಂತ್ಯದಲ್ಲಿ ಹೆಚ್ಚಿನ ಅಂತರವನ್ನು ಹೊಂದಿದ್ದರೆ ಅಂತಹ ವ್ಯಕ್ತಿಗಳು ಸ್ವಚ್ಚ ಮತ್ತು ಜೀವನದ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುವವರು ಆಗಿರುತ್ತಾರೆ. ನೇರ ನುಡಿಯನ್ನು ಹೊಂದಿರುವವರು ಕಣ್ಣಿಗೆ ಕಂಡದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಸಹಾಯದ ಆವಶ್ಯಕತೆ ಇದ್ದಾಗ ಹಿಂದೆಮುಂದೆ ಯೋಚಿಸದೆ ಸಹಾಯ ನೀಡುತ್ತಾರೆ. ನೇರವಂತಿಕೆ ಸ್ವಭಾವವಾದರೂ ಬಾಹ್ಯಜಗತ್ತಿನಿಂದ ಸುಲಭವಾಗಿ ಪ್ರಭಾವಕ್ಕೆ ಒಳಗಾಗುತ್ತಾರೆ ಇತರರಿಗೆ ಸಹಾಯ ಮಾಡಲು ಹೋಗಿ ಇವರು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಕೆಲವೊಮ್ಮೆ ಇವರು ಕೈಗೊಂಡ ನಿರ್ಧಾರಗಳು ತಪ್ಪು ಹಾದಿ ಹಿಡಿಯಬಹುದು. ಅದಕ್ಕೆ ಕಾರಣ ಅತೀಭಾವುಕತನ. ಮುಂದಾಲೋಚನೆ ಇಲ್ಲದೆ ವರ್ತಿಸುವ ಸ್ವಭಾವವೇ ಇವರ ಬದುಕಿನ ಚಲನೆಗೂ ಕಾರಣವಾಗುತ್ತದೆ.ಉದ್ದವಾದ ಹುಬ್ಬು ಹೊಂದಿದವರು, ಚಂಚಲ ಸ್ವಭಾವವನ್ನು ಹೊಂದಿದ್ದು, ಓದುವುದು ಮತ್ತು ಬರೆಯುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದಿಲ್ಲ. ಇಂತಹ ವ್ಯಕ್ತಿಗಳಿಗೆ ವ್ಯಾವಹಾರಿಕ ಜ್ಞಾನವೂ ಕಡಿಮೆಯೇ ಎಂದು ಹೇಳಲಾಗುತ್ತದೆ. ಅಲ್ಲದೆ ಈ ವ್ಯಕ್ತಿಗಳು ಜಿಪುಣರಾಗಿರುತ್ತಾರೆ.ಕಡುಗಪ್ಪು ಹುಬ್ಬು ಹೊಂದಿದ್ದರೆ ಹೆಚ್ಚು ಪ್ರತಿಭಾವಂತರಾಗಿರುತ್ತಾರೆ. ಕಲೆಯನ್ನು ಪ್ರೀತಿಸುವ ಈ ವ್ಯಕ್ತಿಗಳು ಐಷಾರಾಮಿ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ತಮ್ಮ ವೃತ್ತಿ ಕ್ಷೇತ್ರದ ಬಗ್ಗೆ ಹೆಚ್ಚು ಗಂಭೀರತೆ ಹೊಂದಿರುವ ಈ ವ್ಯಕ್ತಿಗಳು ಯಶಸ್ಸಿನ ಮೆಟ್ಟಿಲನ್ನು ಹತ್ತುವಲ್ಲಿ ಸಫಲರಾಗುತ್ತಾರೆ.