UPI ಪಾವತಿ ವಿಫಲವಾದರೆ ಏನು ಮಾಡಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ
ಇತ್ತಿಚಿನ ದಿನಗಳಲ್ಲಿ ಮೊಬೈಲ್ ಒಂದು ಸರ್ವಂತರ್ಯಾಮಿ ಸಾಧನವಾಗಿಬಿಟ್ಟಿದೆ. ದಿನನಿತ್ಯದ ದಿನಚರಿ ಏಳುವಾಗಲಿಂದ ಮಲಗುವವರೆಗೂ ಸಂಗಾತಿಯಂತೆ ಮೊಬೈಲ್ ಎಂಬ ಮಾಯಾವಿ ಜೊತೆಗಿರದೆ ಇದ್ದರೆ ಏನೋ ಕಳೆದುಕೊಂಡ ಭಾವಅನೇಕರನ್ನು ಕಾಡುವುದುಂಟು.
ಮಾತನಾಡುವುದರಿಂದ ಹಿಡಿದು, ಅಂಗಡಿ, ದಿನಸಿ ಸಾಮಗ್ರಿ, ಹೊಟೇಲ್ ಎಲ್ಲ ಕಡೆಗಳಿಗೂ ಹಣ ಪಾವತಿಸಲು ,ಗೂಗಲ್ ಪೇ, ಫೋನ್ ಪೇ ಹೀಗೆ ನಾನಾ ರೀತಿಯಲ್ಲಿ ಮೊಬೈಲ್ ಬಳಕೆ ಸರಾಗವಾಗಿ ಸಾಗುತ್ತಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿ, ಗ್ರಾಹಕ ಮನೆಯಲ್ಲಿಯೆ ಕುಳಿತು ಹಣ ವರ್ಗಾವಣೆ, ಪಾವತಿ ಕ್ಷಣ ಮಾತ್ರದಲ್ಲಿ ನಡೆಸಲು ಸಾಧ್ಯವಾಗಿದೆ. ಬ್ಯಾಂಕ್ ಗ್ರಾಹಕ ಸ್ನೇಹಿ ಸೇವೆಗಳ ಮೂಲಕ, ಆನ್ಲೈನ್ ಬ್ಯಾಂಕಿಂಗ್, ಆನ್ಲೈನ್ ಪೇಮೆಂಟ್ ಹೀಗೆ ಜನರಿಗೆ ನೆರವಾಗುತ್ತಿವೆ. ಹೀಗಾಗಿ ಬ್ಯಾಂಕ್ ಗೆ ಗ್ರಾಹಕ ಅಲೆದಾಡುವ ತಾಪತ್ರಯ ತಪ್ಪಿದೆ. ಇದರೊಂದಿಗೆ, ಯುಪಿಐ ಪಾವತಿಗಳು ಹಣ ವರ್ಗಾವಣೆಯನ್ನು ಸುಲಭವಾಗಿಸುವ ಮೂಲಕ ಜನರ ಕೆಲಸವನ್ನು ಸಲೀಸಾಗಿ ಮಾಡಲು ಸಹಕರಿಸುತ್ತಿವೆ. ಹಣ ಸಣ್ಣ ಮೊತ್ತವಾಗಿದ್ದರೂ ಕೂಡ ಕೆಲವೇ ಸೆಕೆಂಡ್ಗಳಲ್ಲಿ ದೇಶದ ಯಾವ ಮೂಲೆಯಿಂದ ಬೇಕಾದರೂ ಹಣ ಪಾವತಿಸಬಹುದು.
ಆದರೆ, ಕೆಲವೊಮ್ಮೆ ಹೀಗೆ ಯುಪಿಐ ಮೂಲಕ ಪಾವತಿಸುವಾಗ ತೊಡಕು ಉಂಟಾಗಿ ಪಾವತಿ ಮಾಡಲು ಹಲವು ಬಾರಿ ಪ್ರಯತ್ನಿಸಬೇಕಾಗುತ್ತದೆ. ಆಗ ಯುಪಿಐ ಪಾವತಿ ವಿಫಲವಾಗಿ ಕೆಲವೊಮ್ಮೆ ಖಾತೆಯಿಂದ ಎರಡೆರಡು ಬಾರಿ ಹಣ ಕಡಿತವಾಗಿರುತ್ತದೆ. ಇನ್ನೂ ಕೆಲವೊಮ್ಮೆ ಬ್ಯಾಂಕ್ ಸರ್ವರ್ ತೊಂದರೆಯಿಂದ ಹಣ ವರ್ಗಾವಣೆ ಆಗದೆ ಇರುವ ಸಾಧ್ಯತೆಯೂ ಇರುತ್ತದೆ. ಇದಲ್ಲದೆ ಕೆಲವೊಮ್ಮೆ ಪೇಮೆಂಟ್ ಪ್ರೊಸೆಸಿಂಗ್ ಎಂದು ತೋರಿಸುತ್ತದೆ. ಯಾವುದೋ ಶಾಪ್ ನಲ್ಲಿ ತುರ್ತಾಗಿ ಏನೋ ಖರೀದಿಸಿ ಯುಪಿಐ ಪಾವತಿ ಮಾಡಿದ ಬಳಿಕ ಪಾವತಿ ವಿಫಲವಾಗಿ, ಕೈಯಲ್ಲಿ ಹಣವೂ ಆ ಸಂದರ್ಭದಲ್ಲಿ ಇಲ್ಲದೆ ಹೋದರೆ ದಿಕ್ಕೆ ದೋಚದ ಪರಿಸ್ಥಿತಿ ಎದುರಾಗುವುದು ಖಚಿತ.
ಯುಪಿಐ ಪಾವತಿ ಸೇವೆ ಬಳಕೆದಾರರು ಕೆಲವು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯುಪಿಐ ಪಾವತಿ ವಿಫಲವಾಗಲು ಕೆಲವು ಕಾರಣಗಳು ಹೀಗಿವೆ:
ಯುಪಿಐ ವಹಿವಾಟಿನ ದೈನಂದಿನ ಮಿತಿ ಮೀರಿರಬಹುದು. 24 ಗಂಟೆಗಳಲ್ಲಿ ಒಬ್ಬ ಬಳಕೆದಾರನಿಗೆ ಯುಪಿಐ ಪಾವತಿಗೆ ನಿಗದಿತ ಮಿತಿಯಿರುತ್ತದೆ. ಬಹುತೇಕ ಬ್ಯಾಂಕುಗಳಲ್ಲಿ 24ಗಂಟೆಗಳಿಗೆ , 10 ಬಾರಿ ವಹಿವಾಟು ನಡೆಸುವ ಮಿತಿಯಿದ್ದು, ಒಂದು ವೇಳೆ ಗ್ರಾಹಕ ಈ ಮಿತಿ ಮೀರಿದರೆ, ಮತ್ತೆ 24 ಗಂಟೆಗಳ ಬಳಿಕ ಪ್ರಯತ್ನಿಸಬೇಕಾಗುತ್ತದೆ.
ತಪ್ಪು ಮಾಹಿತಿಗಳೊಂದಿಗೆ ಪಾವತಿಗಳನ್ನು ಮಾಡಿದರು ಕೂಡ ವಿಫಲವಾಗುತ್ತದೆ. ಹೀಗಾಗಿ ಯುಪಿಐನಿಂದ ಪಾವತಿಗಳನ್ನು ಮಾಡುವ ಮುನ್ನ ಯುಪಿಐ ಪಿನ್ (UPI PIN) ಸ್ವೀಕರಿಸುವವರ ಮಾಹಿತಿ ಹಾಗೂ ಪಾವತಿಯ ಬೆಳವಣಿಗೆಗಳ ಬಗ್ಗೆ ತಿಳಿಯಲು ಲೋಕೇಷನ್ ಆನ್ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ತಪ್ಪು ಯುಪಿಐ ಪಿನ್ ಬಳಕೆಯಿಂದ ಯುಪಿಐ (UPI) ಪಾವತಿ ವಿಫಲವಾಗಬಹುದು. ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೂ ಕೂಡ ಯುಪಿಐ ಪಾವತಿ ವಿಫಲವಾಗುತ್ತದೆ. ಈ ಮೇಲೆ ತಿಳಿಸಿದ ಎಲ್ಲ ಅಂಶವನ್ನು ಪರಿಗಣಿಸಿದರೆ , ಖಾತೆದಾರರು ಯುಪಿಐ ಪಾವತಿ ವಿಫಲವಾಗದಂತೆ ಕ್ರಮ ಕೈಗೊಳ್ಳಬಹುದು.