ಮೃತದೇಹವನ್ನೇ ತಿಂದು ಹಾಕಿದ ಇಲಿಗಳು!

ಆಸ್ಪತ್ರೆಯವರ ನಿರ್ಲಕ್ಷ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಒಂದಲ್ಲ ಒಂದು ಘಟನೆಗಳು ವರದಿಯಾಗುತ್ತಲೇ ಇದೆ. ಅದರಂತೆ ಇಲ್ಲೊಂದು ಕಡೆ ಶವಗಾರದಲ್ಲಿ ಇರಿಸಿದ್ದ ಮೃತದೇಹವನ್ನು ಇಲಿಗಳು ತಿಂದಿರುವಂತಹ ಘಟನೆ ಬೆಳಕಿಗೆ ಬಂದಿದೆ.

 

ಇಂತಹದೊಂದು ನಿರ್ಲಕ್ಷದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಪೋಸ್ಟ್​ ಮಾರ್ಟಂಗಾಗಿ ಶವಾಗಾರದಲ್ಲಿ ಇರಿಸಲಾಗಿದ್ದ ಮೃತದೇಹದ ಮುಖ ಹಾಗೂ ಮೂಗನ್ನು ಇಲಿಗಳು ರಾತ್ರಿ ವೇಳೆ ಕಚ್ಚಿ ಹಾಕಿವೆ. ಬೆಳಗ್ಗೆ ಸಂಬಂಧಿಕರು ಮೃತದೇಹಗಳನ್ನು ಪಡೆಯಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಖೋರಾಬರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಗದೀಶ್‌ಪುರ ಫೋರ್‌ಲೇನ್‌ನಲ್ಲಿ ಪಿಕಪ್ ವಾಹನ ಪಲ್ಟಿಯಾಗಿ, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಸುಮಿತ್ ಗೌರ್ (21 ವರ್ಷ) ಮತ್ತು ಮೆಹಬೂಬ್ ಸಿದ್ದಿಕಿ (20 ವರ್ಷ) ಈ ವೇಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಹೀಗಾಗಿ, ಇವರ ಮೃತದೇಹಗಳನ್ನು ಪೋಸ್ಟ್​ ಮಾರ್ಟ್ಂಗಾಗಿ ಶವಾಗಾರಕ್ಕೆ ರವಾನಿಸಲಾಗಿತ್ತು.

ಆದರೆ, ಪೋಸ್ಟ್​ ಮಾರ್ಟಂಗಾಗಿ ಶವಾಗಾರದಲ್ಲಿ ಇರಿಸಲಾಗಿದ್ದ ಸುಮಿತ್​ ಅವರ ಮುಖ ಹಾಗೂ ಮೂಗನ್ನು ಇಲಿಗಳು ರಾತ್ರಿ ವೇಳೆ ಕಚ್ಚಿ ಹಾಕಿವೆ. ಬೆಳಗ್ಗೆ ಸಂಬಂಧಿಕರು ಮೃತದೇಹಗಳನ್ನು ಪಡೆಯಲು ಬಂದಾಗ ಓರ್ವ ಮೃತದೇಹದ ಮುಖ ಮತ್ತು ಮೂಗನ್ನು ಇಲಿಗಳು ಕಚ್ಚಿರುವುದು ಕಂಡುಬಂದಿದೆ. ಇದನ್ನು ಕಂಡು ಮೃತರ ಸಂಬಂಧಿಕರು ಆಸ್ಪತ್ರೆ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಶವಾಗಾರದಲ್ಲೇ ಇಂತಹ ಸ್ಥಿತಿ ಇರಬೇಕಾದರೆ, ಆಸ್ಪತ್ರೆಯಲ್ಲಿ ಎಂತಹಾ ಸ್ಥಿತಿ ಇರಬಹುದು ಎಂದು ಜನ ಆತಂಕಕ್ಕೆ ಒಳಗಾಗಿದ್ದಾರೆ.

ಈ ಬಗ್ಗೆ ದೂರು ನೀಡಲು ಸಿಎಂಒಗೆ ಹೋಗಿದ್ದಾರೆ. ಆದರೆ ಭೇಟಿಯಾಗಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಮಾತನಾಡಿದ ಸಿಎಂಒ ಅಶುತೋಷ್​ ದುಬೆ, ಇಬ್ಬರು ಯುವಕರ ಶವಗಳನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಇನ್ನು ಮೃತ ದೇಹವನ್ನು ಇಲಿಗಳು ತಿಂದು ಹಾಕಿವೆ ಎಂದು ಅವರ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.