ಕ್ರೆಡಿಟ್ ಕಾರ್ಡ್ ಮೂಲಕ ಮನೆ ಬಾಡಿಗೆ ಪಾವತಿಸುವ ಕುರಿತು ತಜ್ಞರ ಅಭಿಪ್ರಾಯ!!!
ಕೆಲವೊಮ್ಮೆ ಅಂಗಡಿ, ಹೊಟೇಲ್ ಗಳಿಗೆ ಹೋದಾಗ ಹಣ ಅಥವಾ ವ್ಯಾಲೆಟ್ ಮನೆಯಲ್ಲೇ ಮರೆತು ಬಂದರೆ, ಹಣ ಪಾವತಿಸಲು ಏನು ಮಾಡುವುದು ಎಂದು ಚಿಂತಿಸುವ ಅಗತ್ಯವಿಲ್ಲ. ಈಗ ಎಲ್ಲ ಕಡೆ ಮೊಬೈಲ್ ನದ್ದೇ ಕಾರುಬಾರು. ಪೇಟಿಯಂ ಇಲ್ಲವೆ ಗೂಗಲ್ ಪೇ ಮೂಲಕವೋ ಅಥವಾ ಕ್ರೆಡಿಟ್ ಕಾರ್ಡ್ ಮುಖಾಂತರ ಹಣ ಪಾವತಿಸಬಹುದು.
ಹಣಕಾಸಿನ ಮುಗ್ಗಟ್ಟಿನ ಸಂದರ್ಭದಲ್ಲಿ ನಮಗೆ ನೆರವಿಗೆ ಬರುವುದು ಕ್ರೆಡಿಟ್ ಕಾರ್ಡ್. ದಿನನಿತ್ಯದ ಸಾಮಗ್ರಿಗಳ ಬಿಲ್ ನಿಂದ ಹಿಡಿದು ಶಾಪಿಂಗ್ ಮಾಡಿದಾಗ ಹಣ ಪಾವತಿಸಲು ಹೆಚ್ಚಿನವರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದು ಸಾಮಾನ್ಯ. ಬಳಕೆದಾರರಿಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮನೆ ಬಾಡಿಗೆಯನ್ನು ಪಾವತಿಸಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯವನ್ನು ಪೇಟಿಯಂ, ಕ್ರೆಡಿಟ್ ಹೀಗೆ ಹಲವು ಫ್ಲ್ಯಾಟ್ ಫಾರಂಗಳು ಕ್ರೆಡಿಟ್ ಕಾರ್ಡ್ ಮೂಲಕ ಪರಿಚಯಿಸುತ್ತಿವೆ. ಶೇ.0.4 ರಿಂದ ಶೇ.2ರಷ್ಟು ಸೇವಾ ಶುಲ್ಕವನ್ನು ಕೂಡ ಗ್ರಾಹಕರಿಂದ ವಸೂಲಿ ಮಾಡುತ್ತವೆ.
ದಿನನಿತ್ಯ ದುಡಿದರೆ ಮಾತ್ರ ಜೀವನ ಸಾಗಿಸುವ ವರ್ಗಕ್ಕೆ ಮನೆ ಬಾಡಿಗೆ ಎಂಬುದು ಹೆಚ್ಚಿನ ಹೊರೆ ತರುವ ಖರ್ಚಾಗಿದೆ. ಕೆಲವರು ಕ್ರೆಡಿಟ್ ಕಾರ್ಡ್ ಮೂಲಕ ರಿವಾರ್ಡ್ ಪಾಯಿಂಟ್ ಪಡೆಯುವ ಉದ್ದೇಶದಿಂದ ಮನೆ ಬಾಡಿಗೆ ಪಾವತಿಸಿದರೆ, ಉಳಿದವರು ತಮ್ಮ ಕೆಲಸದ ಒತ್ತಡದ ನಡುವೆ ಸಮಯಾಭವದಿಂದ ತ್ವರಿತವಾಗಿ ಪಾವತಿಸುವ ಉದ್ದೇಶದಿಂದ ಕ್ರೆಡಿಟ್ ಕಾರ್ಡ್ ಬಳಸಿ ಮನೆ ಬಾಡಿಗೆ ಪಾವತಿಸುತ್ತಾರೆ.
ಹಣಕಾಸು ತಜ್ಞರ ಪ್ರಕಾರ, ಕ್ರೆಡಿಟ್ ಕಾರ್ಡ್ ಬಳಸಿ ಮನೆ ಬಾಡಿಗೆ ಪಾವತಿಸುವುದು ಸೂಕ್ತವಲ್ಲ. ಬಾಡಿಗೆಯು ನಿಶ್ಚಿತ ವೆಚ್ಚವಾಗಿದ್ದು, ಹಠಾತ್ ಉದ್ಭವಿಸುವ ಖರ್ಚಲ್ಲ. ಹಾಗಾಗಿ ಪಾವತಿ ಮಾಡುವಾಗ ಮಾಸಿಕ ಹಣಕಾಸಿನ ಲೆಕ್ಕಾಚಾರ ಮಾಡಿ ಮೊದಲೇ ಇಂತಿಷ್ಟು ಉಳಿತಾಯ ಮಾಡಿ, ಗಳಿಕೆಯಲ್ಲಿ ಎಷ್ಟು ಖರ್ಚಾಗುತ್ತದೆ ಎಂದು ಗಮನಿಸಿ, ಪಾವತಿ ಮಾಡುವುದು ಸೂಕ್ತ.
ಅನಿರೀಕ್ಷಿತವಾಗಿ ಒದಗಿದ ವೆಚ್ಚಕ್ಕೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡುವುದು ಉತ್ತಮ. ರಿವಾರ್ಡ್ ಗಳಿಸುವ ಧಾವಂತದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆಯನ್ನು ಪಾವತಿಸದಿರುವುದು ಒಳ್ಳೆಯದು. ಬ್ಯಾಂಕ್‌ಗಳು ಪ್ರತಿ ಸೇವೆಗೆ ಶುಲ್ಕ ವಿಧಿಸುವುದರಿಂದ, ಬಳಕೆಯ ಮೇಲೆ ಹೆಚ್ಚುವರಿ ಪಾವತಿಗಳನ್ನು ಮಾಡಲೇಬೇಕು. ಹೀಗಾಗಿ, ಬಾಡಿಗೆ ಪಾವತಿಗಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದರಿಂದ ಹೆಚ್ಚಿನ ಪ್ರಯೋಜನ ದೊರೆಯದು.
ಮನೆ ಬಾಡಿಗೆ ಪಾವತಿಸುವಾಗ, ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಗದಿತ ದಿನಾಂಕದೊಳಗೆ ಬಿಲ್ ಪಾವತಿಯನ್ನು ಮಾಡದಿದ್ದರೆ, ಕ್ರೆಡಿಟ್ ಸ್ಕೋರ್ ಗೆ ಸಮಸ್ಯೆಯಾಗುತ್ತದೆ. ಮನೆ ಬಾಡಿಗೆಯು ದೊಡ್ಡ ವೆಚ್ಚವಾಗಿರುವುದರಿಂದ ಇತರ ವೆಚ್ಚಗಳಿಗೆ ಕಾರ್ಡ್ ಅನ್ನು ಬಳಸಿದರೆ ಅದು ಹೆಚ್ಚಿನ ಕ್ರೆಡಿಟ್ ಬಳಕೆಯ ಅನುಪಾತಕ್ಕೆ ಕಾರಣವಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಕೆಯ ಅನುಪಾತವು ನಿಗದಿತ ಕ್ರೆಡಿಟ್ ಮಿತಿಯ ಶೇ.30ಕ್ಕಿಂತ ಹೆಚ್ಚಿದ್ದರೆ, ಕ್ರೆಡಿಟ್ ಸ್ಕೋರ್ ಕೂಡ ಕುಸಿಯುತ್ತದೆ. ಹೀಗಾಗಿ ತಿಂಗಳ ಬಜೆಟ್ ಅನ್ನು ಸರಿಯಾಗಿ ಯೋಚಿಸಿ,ಯೋಜಿಸುವುದು ಒಳ್ಳೆಯದು. ಅಷ್ಟೆ ಅಲ್ಲ ಮನೆ ಬಾಡಿಗೆಯನ್ನು ಸಂಬಳದಿಂದ ಪಾವತಿಸುವುದು ಉತ್ತಮ.