ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಿ ಪ್ರೇಯಸಿ ಮನೆ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡ ಆರೋಪಿ!

ಅತ್ಯಾಚಾರ ಆರೋಪಿಯೋರ್ವ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ತನ್ನ ಗೆಳತಿಯ ಮನೆ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

 

ಈ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ನಡೆದಿದ್ದು, ಬುಧವಾರ ಬೆಳಗ್ಗೆ ಆತನ ಶವ ಮರದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಮನರಾಜ್ ಮೀನಾ. ಈತ ಶ್ಯಾಮಪುರ ಗ್ರಾಮದ ನಿವಾಸಿಯಾಗಿದ್ದರು.

ಕಳೆದ ನಾಲ್ಕೈದು ವರ್ಷಗಳಿಂದ ಈತ ದೂರು ಕೊಟ್ಟ ಸಂತ್ರಸ್ತೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಒಂದು ವರ್ಷದ ಹಿಂದೆ ಅವನ ಗೆಳತಿಗೆ ಮದುವೆಯಾಗಿದ್ದು, ಆಕೆ ಗಂಡನ ಮನೆಗೆ ಹೋಗಿದ್ದಳು. ಆದರೆ ಮನರಾಜ್ ಆಕೆಯನ್ನು ಬಿಡಲಿಲ್ಲ. ಯುವಕ ಆಕೆಯ ಗಂಡನ ಮನೆಗೂ ಹೋಗಿ ಬರುತ್ತಿದ್ದ.

ಸುಮಾರು ಏಳು ದಿನಗಳ ಬಳಿಕ ಯುವತಿಯ ಅತ್ತೆಗೆ ಈ ವಿಷಯ ತಿಳಿದಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಆತನ ಪ್ರೇಯಸಿ ಪರವಾಗಿ ರಾವಂಜನ ಡುಂಗರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಒಂದು ದಿನದ ಹಿಂದೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದರು.

ಆದರೆ, ಆತ ಪೊಲೀಸ್ ಠಾಣೆಯ ವಶದಿಂದ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಬಳಿಕ ಮಂಗಳವಾರ ತಡರಾತ್ರಿ ತನ್ನ ಗೆಳತಿಯ ಅತ್ತೆ ಮನೆ ಎದುರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂದು ಯುವಕನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಆತನ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವೈದ್ಯಕೀಯ ಮಂಡಳಿ ಮಾಡಲಿದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಬಿಷ್ಣೋಯ್ ಅವರು ಎಎಸ್‌ಐ ಮತ್ತು ಕಾನ್‌ಸ್ಟೇಬಲ್‌ರನ್ನು ಅಮಾನತುಗೊಳಿಸಿದ್ದಾರೆ.

Leave A Reply

Your email address will not be published.