Basil Seeds : ಕಾಮಕಸ್ತೂರಿ ಬೀಜದ ಉಪಯೋಗ ಅನೇಕ | ಏನೆಲ್ಲಾ? ಇಲ್ಲಿದೆ ಮಾಹಿತಿ
ಕಾಮ ಕಸ್ತೂರಿ ಬೀಜಗಳನ್ನು ಔಷಧೀಯ ಗುಣಗಳ ಕಣಜ ಎಂದರೂ ತಪ್ಪಾಗದು. ಸಬ್ಜಾ ಅಥವಾ ಕಾಮ ಕಸ್ತೂರಿ ಬೀಜಗಳನ್ನು ಮಸಾಲೆ ರೀತಿಯಲ್ಲಿ ಬಳಸುವುದಲ್ಲದೆ ಆಹಾರಕ್ಕೆ ವಿಶಿಷ್ಟವಾದ ಪರಿಮಳವನ್ನು ನೀಡುತ್ತದೆ. ಇದರ ಎಲೆಗಳನ್ನು ಕೆಮ್ಮು ಮತ್ತು ಶೀತವನ್ನು ಗುಣಪಡಿಸಲು ಬಳಸಲಾಗುತ್ತದೆ. ಅವುಗಳಲ್ಲಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣವು ಹೇರಳವಾಗಿ ಕಂಡುಬರುತ್ತದೆ.
ಸಬ್ಜಾ ಬೀಜದ ಪಾನೀಯಗಳು ಬೇಸಿಗೆಯ ಸುಡುವ ಶಾಖದಿಂದ ಉತ್ತಮ ಪರಿಹಾರವನ್ನು ನೀಡುತ್ತವೆ. ಸಬ್ಜಾ ಬೀಜಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಸಬ್ಜಾ ಬೀಜಗಳನ್ನು ನಿಂಬೆ ಪಾನಕ, ತೆಂಗಿನ ನೀರು, ತೆಂಗಿನ ಹಾಲು,ಮೊಸರು ಮೊದಲಾದ ಪಾನೀಯಕ್ಕೆ ಸೇರಿಸಿ ಕುಡಿಯಬಹುದು. ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ.
ಸಬ್ಜಾ ಬೀಜದಿಂದ ಅರೋಗ್ಯ ಪ್ರಯೋಜನಗಳು:
ದೇಹದ ತೂಕ ಹೆಚ್ಚಿದ್ದು , ತುಂಬಾ ಬೆವರಿನ ದುರ್ಗಂಧ ಬರುತ್ತಿದ್ದರೆ ಪ್ರತಿನಿತ್ಯ ಕಾಮಕಸ್ತೂರಿ ಎಲೆಗಳ ರಸವನ್ನು ದೇಹಕ್ಕೆ ಹಚ್ಚಿಕೊಂಡರೆ ದುರ್ಗಂಧ ನಿವಾರಣೆಯಾಗುತ್ತದೆ. ಕಾಮ ಕಸ್ತೂರಿ ಬೀಜದ ಕಷಾಯ ಮಾಡಿ ಕುಡಿಯುವುದರಿಂದ ರೋಗ ರುಜಿನಗಳು ಹತ್ತಿರ ಸುಳಿಯದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಲಬದ್ಧತೆ, ಅಸಿಡಿಟಿ ಗ್ಯಾಸ್ ಸಮಸ್ಯೆ ಇದ್ದರೆ ಇದಕ್ಕಾಗಿ ಕಾಮ ಕಸ್ತೂರಿ ಬೀಜಗಳನ್ನು ನೀರಿನಲ್ಲಿ ಹಾಕಿ ಸ್ವಲ್ಪ ಸಮಯ ನೆನೆಸಿಟ್ಟು ಬೀಜ ಸಮೇತ ಈ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಕಾಮಕಸ್ತೂರಿ ಬೀಜ ಮತ್ತು ಎಲೆಗಳನ್ನು ರಾತ್ರಿ ನೀರಲ್ಲಿ ನೆನೆಸಿ, ಆ ನೀರನ್ನು ಬೆಳಗ್ಗೆ ಸಕ್ಕರೆ ಜೊತೆ ಸೇವಿಸಿದರೆ ಮೂಲವ್ಯಾಧಿಯಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ.
ಸಬ್ಜಾ ಬೀಜಗಳು ಮಧುಮೇಹ ವಿರೋಧಿ ಸಾಮರ್ಥ್ಯವನ್ನು ಹೊಂದಿದ್ದು, ಈ ಬೀಜಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಮಧುಮೇಹಿಗಳು ಊಟಕ್ಕೆ ಸ್ವಲ್ಪ ಮೊದಲು ಸಬ್ಜಾ ಬೀಜಗಳನ್ನು ನಿಯಮಿತವಾಗಿ ಸೇವಿಸಿದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿನ ಏರಿಕೆಯನ್ನು ತಡೆಯುತ್ತದೆ. ತೂಕ ಹೆಚ್ಚಾಗಿದೆ ಎಂದು ಚಿಂತಿಸುವವರಿಗೆ ಕಾಮ ಕಸ್ತೂರಿ ಬೀಜ ರಾಮಬಾಣದಂತೆ ಕೆಲಸ ನಿರ್ವಹಿಸುತ್ತದೆ. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಫೈಬರ್‌ಗಳಿಂದ ಸಮೃದ್ಧವಾಗಿದೆ. ಹಾಗಾಗಿ ಹಸಿವು ಕಡಿಮೆಯಾಗಿ ತೂಕ ಕೂಡ ಕಡಿಮೆಯಾಗುತ್ತದೆ. ಕಾಮ ಕಸ್ತೂರಿ ಬೀಜಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದು, ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕಾಮ ಕಸ್ತೂರಿ ಬೀಜಗಳನ್ನು ಸಹ ಬಳಸಬಹುದು. ತಣ್ಣೀರಿನಲ್ಲಿ ಕಾಮಕಸ್ತೂರಿ ಬೀಜಗಳನ್ನು 2-3 ಗಂಟೆ ನೆನೆಸಿ. ಅದನ್ನು 1 ಲೋಟ ಹಾಲು ಮತ್ತು 1 ಚಮಚ ಸಕ್ಕರೆ ಜೊತೆ ಸೇವಿಸಿದರೆ ಪಿತ್ತ ಶಮನವಾಗುತ್ತದೆ. ಸಬ್ಜಾ ಬೀಜಗಳಲ್ಲಿರುವ ಕರಗುವ ಒಂದು ರೀತಿಯ ಫೈಬರ್ ಪೆಕ್ಟಿನ್, ಇದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕರುಳಿನಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ಕೂಡ ತಡೆಯುತ್ತದೆ. ಬಹುಪಯೋಗಿ ಕಾಮಕಸ್ತೂರಿ ಬೀಜಗಳನ್ನು ದಿನನಿತ್ಯದಲ್ಲಿ ಬಳಸಿ ಉಪಯೋಗ ಪಡೆಯಬಹುದು.