ಗ್ರಾಮೀಣ ಜನತೆಗೆ ಸಿಹಿ ಸುದ್ದಿ ; ಅಕ್ಟೋಬರ್ 2 ರಿಂದಲೇ ಜಾರಿಯಾಗಲಿದೆ ಯಶಸ್ವಿನಿ ಯೋಜನೆ

ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಾದ ಯಶಸ್ವಿನಿ ಯೋಜನೆ ಅಕ್ಟೋಬರ್ 2 ರಿಂದಲೇ ಜಾರಿಯಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಇಂದು ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಮಧು ಮಾದೇಗೌಡರು ಈ ಕುರಿತು ಪ್ರಶ್ನಿಸಿದ್ದು, ಈ ವೇಳೆ ಸೋಮಶೇಖರ್ ಉತ್ತರಿಸಿ, ಸಿಎಂ ಬಜೆಟ್ ಭಾಷಣದಲ್ಲಿ ತಿಳಿಸಿರುವಂಥೆ, ಯಶಸ್ವಿನಿ ಯೋಜನೆಯನ್ನು ಅಕ್ಟೋಬರ್ 2 ರಿಂದ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಯೋಜನೆಗಾಗಿ 300 ಕೋಟಿ ಹಣ ಒದಗಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಎಲ್ಲ ರೈತರಿಗೆ ಈ ಯೋಜನೆ ಲಭ್ಯವಾಗುವುದಿಲ್ಲ, ಬದಲಿಗೆ ಸಹಕಾರಿ ಸಂಸ್ಥೆಗಳ ಸದಸ್ಯರಿಗೆ ಮಾತ್ರ ಈ ಯೋಜನೆ ಅನ್ವಯ ಆಗಲಿದೆ ಎಂದು ತಿಳಿಸಿದರು.

ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗಧಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟಿನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದುರಹಿತವಾಗಿ ಪಡೆಯಬಹುದು .

ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು .

ಫಲಾನುಭವಿಯಾಗಬಯಸುವ ಪ್ರತಿಯೊಬ್ಬರೂ ವರ್ಷಕ್ಕೆ ನಿಗದಿತ ಪ್ರಮಾಣದ ವಂತಿಗೆ ಹಣ ನೀಡಬೇಕು. 2014-15ನೇ ಸಾಲಿಗೆ ವಾರ್ಷಿಕ ವಂತಿಗೆ ರೂ.250/- ಆಗಿರುತ್ತದೆ.ಒಂದೇ ಕುಟುಂಬದ 5 ಅಥವಾ 5 ಕ್ಕಿಂತ ಹೆಚ್ಚು ಸದಸ್ಯರು ನೊಂದಣಿಯಾದಲ್ಲಿ ವಂತಿಗೆಯಲ್ಲಿ ಶೇ.15 ರಿಯಾಯಿತಿ ಇರುತ್ತದೆ .

ಕುಟುಂಬದ ಯಾವುದೇ ಒಬ್ಬ ಸದಸ್ಯನು/ಸದಸ್ಯಳು ಮೇಲೆ ತಿಳಿಸಿರುವ ಅರ್ಹ ಸಹಕಾರ ಸಂಘದ ಸದಸ್ಯನಾಗಿ/ಳಾಗಿ ಯಶಸ್ವಿನಿ ವರ್ಷದ ಮೊದಲ ದಿನ ಅಂದರೆ 01.06.2014ಕ್ಕೆ ಮೂರು ತಿಂಗಳಾಗಿದ್ದಲ್ಲಿ, ಕುಟುಂಬದ ಪ್ರತಿಯೊಬ್ಬ ಸದಸ್ಯನೂ ನಿಗದಿತ ಅವಧಿಯಲ್ಲಿ ವಾರ್ಷಿಕ ವಂತಿಗೆ ಸಲ್ಲಿಸುವ ಮೂಲಕ ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯಬಹುದು .

ಯಶಸ್ವಿನಿ ನೋಂದಾವಣೆಯು ಪ್ರತಿ ವರ್ಷದಲ್ಲಿ ಜನವರಿ ಅಥವಾ ಫೆಬ್ರವರಿಯಲ್ಲಿ ಪ್ರಾರಂಭವಾಗಿ ಆಗಸ್ಟ್ ಮಾಹೆಯಲ್ಲಿ ಕೊನೆಗೊಳ್ಳುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ/ಸಹಕಾರಿ ಬ್ಯಾಂಕುಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ ಸದಸ್ಯರು ಕೂಡ ಯೋಜನೆಯ ಸೌಲಭ್ಯ ಪಡೆಯಬಹುದು.ನಗರ/ಪಟ್ಟಣ ಪ್ರದೇಶದಲ್ಲಿ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು ಮತ್ತು ಸಹಕಾರಿ ನೇಕಾರರು ಕೂಡ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಅಧಿಕೃತ ವೆಬ್ ಸೈಟ್ : www.yeshasvini.org

Leave A Reply

Your email address will not be published.