ಟಾಯ್ಲೆಟ್ ನಲ್ಲಿ ಕಬಡ್ಡಿ ಆಟಗಾರ್ತಿಯರಿಗೆ ಊಟ ವಿತರಣೆ | ವೀಡಿಯೋ ವೈರಲ್
ಕ್ರೀಡೆಗೆ ಮಹತ್ತರ ಸ್ಥಾನವಿದ್ದು, ದೇಶದಲ್ಲಿ ನೂರಾರು ಪ್ರತಿಭೆ ಗಳು ಕಬ್ಬಡ್ಡಿ , ಕ್ರಿಕೆಟ್, ಖೋಖೋ, ಚೆಸ್ ನಾನಾ ಆಟಗಳ ಮೂಲಕ ದೇಶದ ಹಿರಿಮೆಯನ್ನು ಉತ್ತುಂಗಕ್ಕೆ ಏರಿಸುತ್ತಿದ್ದಾರೆ. ಅಥ್ಲೆಟಿಕ್ ಗಳಿಗೆ ಸರಿಯಾದ ಪ್ರೋತ್ಸಾಹ ಸಿಗದೆ ಕೆಲವರು ಮೂಲೆಯಲ್ಲಿ ಉಳಿದಿರುವುದು ವಿಪರ್ಯಾಸ. ದೇಶದಲ್ಲಿ ಹಾಕಿ, ಕಬಡ್ಡಿ ಸೇರಿದಂತೆ ಇತರೆ ಕ್ರೀಡೆಗಳಿಗೆ ಸಿಗಬೇಕಾದ ಗೌರವ ಕೂಡ ದೊರಕುತ್ತಿಲ್ಲ ಎಂಬ ಮಾತಿಗೆ ಇಂಬು ನೀಡುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದಲ್ಲಿ ಕಬಡ್ಡಿ ಆಟಗಾರರಿಗೆ ಆಹಾರವನ್ನು ಪುರುಷರ ಶೌಚಾಲಯದಲ್ಲಿ ನೀಡಿರುವ ವಿಡಿಯೋ ತುಣುಕುಗಳು ವೈರಲ್ ಆಗಿದ್ದು, ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ .
ಉತ್ತರಪ್ರದೇಶದ ಸಹರಾನ್ಪುರದಲ್ಲಿ ಅಂಡರ್ 17 ವಯೋಮಾನದ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಟೂರ್ನಮೆಂಟ್ ಆಯೋಜಿಸಿದ್ದ ಸಂದರ್ಭದಲ್ಲಿ ವೀಡಿಯ ಮಾಡಲಾಗಿದೆ. ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ 17 ವಯೋಮಾನದವರಿಗೆ ಕಬಡ್ಡಿ ಟೂರ್ನಿಯ ಸಂದರ್ಭದಲ್ಲಿ ಆಟಗಾರರಿಗೆ ಟಾಯ್ಲೆಟ್ ನಲ್ಲಿ ಇಟ್ಟಿದ್ದ ಆಹಾರವನ್ನು ಬಡಿಸಲಾಗಿದ್ದು, ಅಸಹ್ಯಕರ ಭಾವನೆ ಉಂಟು ಮಾಡುವ ಈ ವೀಡಯೋ ವ್ಯಾಪಕವಾಗಿ ಹರಿದಾಡುತ್ತಿದೆ.
ರಾಜ್ಯಮಟ್ಟದ ಅಂಡರ್-17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸುಮಾರು 200 ಕ್ರೀಡಾಪಟುಗಳಿಗೆ ಶೌಚಾಲಯದ ನೆಲದಲ್ಲಿ ಇರಿಸಿದ್ದ ಆಹಾರವನ್ನೇ ನೀಡಲಾಗಿದೆ ಜೊತೆಗೆ ಒಂದು ಕಾಗದದ ಮೇಲೆ ಪೂರಿಯನ್ನು ಇಡಲಾಗಿದ್ದು ಅದನ್ನೇ ಆಟಗಾರರಿಗೆ ಬಡಿಸಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ. ಮೂತ್ರ ಮಾಡುವ ಜಾಗದ ಸಮೀಪದಲ್ಲಿ ಬೇರೆ ಬೇರೆ ಪಾತ್ರೆಗಳಲ್ಲಿ ಅನ್ನ, ತರಕಾರಿ ಮುಂತಾದ ಪದಾರ್ಥಗಳನ್ನು ಇರಿಸಿದ್ದು, ಆಟಗಾರ್ತಿಯರು ಸ್ವತಃ ತಟ್ಟೆಗೆ ಅವುಗಳನ್ನು ಬಡಿಸಿಕೊಂಡಿರುವುದು ವೀಡಿಯೋದಲ್ಲಿ ಗಮನಿಸಬಹುದು.
ಶೌಚಾಲಯದ ನೆಲದ ಮೇಲೆ ಇರಿಸಿದ್ದ ಆಹಾರದ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದ ಭುಗಿಲೆದ್ದಿದೆ. ಆದರೆ ಸಹರಾನ್ಪುರ್ ಕ್ರೀಡಾ ಅಧಿಕಾರಿ ಈ ಆರೋಪವನ್ನು ತಳ್ಳಿ ಹಾಕಿರುವುದಲ್ಲದೆ, ಆಟಗಾರರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ ವಿತರಿಸಲಾಗಿದೆ , ಸ್ಥಳದ ಕೊರತೆಯಿದ್ದರಿಂದಾಗಿ ಕ್ರೀಡಾಂಗಣದ ಪೂಲ್ ಬಳಿಯೇ ಅಡುಗೆ ಮಾಡಲಾಗಿದೆ ಎಂದು ಅನಿಮೇಶ್ ಸಕ್ಸೇನಾ ಸಮರ್ಥಿಸಿಕೊಂಡಿದ್ದಾರೆ. ಆದರೆ ಆಟಗಾರರು ಈ ಹೇಳಿಕೆಯನ್ನು ವಿರೋಧಿಸಿದ್ದು, ನಮಗೆ ನೀಡಲಾಗಿದ್ದ ಆಹಾರ ಗುಣಮಟ್ಟದಲ್ಲಿರಲಿಲ್ಲ ಎಂದಿದ್ದಾರೆ.
ಈ ರೀತಿಯ ಕೆಟ್ಟ ವ್ಯವಸ್ಥೆಗಳ ಬಗ್ಗೆ ದೂರು ಸ್ವೀಕರಿಸಲಾಗಿದ್ದು,ಜಿಲ್ಲಾ ಕ್ರೀಡಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ಮೂರು ದಿನಗಳಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಸಹರಾನ್‌ಪುರದ ಜಿಲ್ಲಾಧಿಕಾರಿ ಅಖಿಲೇಶ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.