ಕರಾವಳಿಯಲ್ಲಿ ತರಕಾರಿಗಿಂತ ಮೀನಿನ ರೇಟ್ ಕಮ್ಮಿ | ನವರಾತ್ರಿಗೆ ಮತ್ತೆ ತರಕಾರಿ ದರ ಹೆಚ್ಚಳ ಸಾಧ್ಯತೆ?

ಹಬ್ಬಗಳು ಒಂದೊಂದಾಗಿ ಮನೆಗೆ ಕಾಲಿಡುತ್ತಿವೆ. ನಾಗರ ಪಂಚಮಿ, ಚೌತಿ, ಅಷ್ಟಮಿಯಂದು ಭಾರೀ ಕಡಿಮೆಯಾಗಿದ್ದ ತರಕಾರಿ ದರ ನವರಾತ್ರಿ ಹತ್ತಿರ ಸಮೀಪವಾಗುತ್ತಿದ್ದಂತೆ, ಈಗ ಮತ್ತೆ ಏರಿಕೆಯಾಗುವ ಸಂಭವ ಹತ್ತಿರವಿದೆ. ಆ ಎಲ್ಲಾ ಲಕ್ಷಣಗಳನ್ನು ಮಾರುಕಟ್ಟೆ ತೋರಿಸುತ್ತಿದೆ. ಆದರೆ ಈ ಎಲ್ಲಾ ತರಕಾರಿಗಿಂತ ಮೀನು ಅಗ್ಗವಾಗಿದೆ. ಬಂಗುಡೆ, ಬೂತಾಯಿ ಮೀನು ತೀರಾ ಅಗ್ಗವಾಗಿ ಕೂತಿದ್ದು ಮೀನು ಪ್ರಿಯರಿಗೆ ಖುಷಿಯೋ ಖುಷಿ.

 

ನವರಾತ್ರಿಗೆ ತರಕಾರಿ ಮತ್ತಷ್ಟು ತುಟ್ಟಿಯಾಗುವ ಆತಂಕವಿದೆ. ಹ ಆಚರಣೆಯ ನೆಲೆಯಲ್ಲಿ ಮೀನು, ಮಾಂಸಾಹಾರ ತ್ಯಜಿಸುವ ಹಿನ್ನೆಲೆಯಲ್ಲಿ ಮತ್ತೆ ಕೋಳಿ ಮತ್ತು ಮೀನಿನ ದರ ಇಳಿಕೆಯಾಗುವ ನಿರೀಕ್ಷೆಯಿದೆ. ಕ್ಯಾಬೇಜ್ 24 ರಿಂದ 30 ರೂ. ಅತಿ ಕಡಿಮೆ ದರದ ತರಕಾರಿಯಾಗಿದ್ದರೆ ರಿಂಗ್ ಬೀನ್ಸ್ ದರ ಶತಕ ಬಾರಿಸಿ ಈಗ 120 ರೂ. ದಾಟಿದೆ. ಮಂಗಳೂರು ಪಟ್ಟಣದಲ್ಲಿ ಊರಿನ ಬೆಂಡೆ ಕಾಯಿಗೆ ಕೆಜಿಗೆ 160 ರೂಪಾಯಿ ಇದ್ದರೆ, ಅದೇ 5 ಅಡಿಗಳ ದೂರದಲ್ಲಿರುವ ಸೆಂಟ್ರಲ್ ಮೀನು ಮಾರ್ಕೆಟ್ ನಲ್ಲಿ ಮೀನು ಗುಡ್ಡೆ ಹಾಕಿಕೊಂಡು ಕೊಳ್ಳುವಷ್ಟು ಅಗ್ಗ.

ಕೆ.ಜಿ.ಗೆ 180 ರಿಂದ 220 ರೂ. ಕೊಟ್ಟರೂ ಕೊತ್ತಂಬರಿ ಸೊಪ್ಪು ಒಳ್ಳೇದು ಸಿಗುತ್ತಿಲ್ಲ. ಉಳಿದ ಎಲ್ಲಾ ಸೊಪ್ಪುಗಳೂ ದೊಡ್ಡ ಬೆಲೆಯ ಟ್ಯಾಗ್ ಹಾಕಿಕೊಂಡು ಕುಳಿತಿವೆ. ಕರಾವಳಿಯ ಫೇವರಿಟ್ ಸದಾ ಹಸುರಿನ ಸೊಪ್ಪು ಬಸಳೆ ಈ ಹಿಂದೆ 30 ರೂಪಾಯಿಗೆ ಒಂದು ಕಟ್ಟು ಸಿಗ್ತಿತ್ತು. ಈ ಸಲ ಒಂದು ಕಟ್ಟು ಬಸಳೆಗೆ 80 ರೂಪಾಯಿ ಆಗಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಊರ ತರಕಾರಿಯಂತೂ ತೀರಾ ವಿರಳವಾಗಿದ್ದು, ಹುಡುಕಿದರೂ ಸಿಗುತ್ತಿಲ್ಲ.

ಅತ್ತ ಉತ್ತರ ಕರ್ನಾಟಕದಲ್ಲಿ ಕೂಡಾ ಪರಿಸ್ಥಿತಿ ತೀರ ಭಿನ್ನವಾಗಿಲ್ಲ. ಅಲ್ಲಿ ಭಾರೀ ಮಳೆಬಿದ್ದ ಕಾರಣ, ನೆರೆ ಉಂಟಾದ ಕಾರಣದಿಂದ ರೋಗ ಹೆಚ್ಚಾಗಿ ತರಕಾರಿ ತುಟ್ಟಿಯಾಗಿತ್ತು. ಈಗ ಮಳೆ ಮುಗಿದು ಬೆಳೆಯುವ ತರಕಾರಿ ಮಾರುಕಟ್ಟೆಗೆ ಪೂರೈಕೆಯಾಗಲು ಏನಿಲ್ಲವೆಂದರೂ 2 ರಿಂದ 3 ತಿಂಗಳೇ ಬೇಕಾಗಿದೆ. ಹಾಗಾಗಿ ತರಕಾರಿ ದರ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿರುವ ಈಗಿರುವ ತರಕಾರಿ ಧಾರಣೆ ಈ ರೀತಿ ಇದೆ :
ಕ್ಯಾರೆಟ್: 100 ರೂ. ಬಟಾಣಿ: 150 ರೂ. ಬೀಟ್‌ರೂಟ್: 50 ರಿಂದ 60 ರೂ., ಮೂಲಂಗಿ: 35 ರಿಂದ 40 ರೂ. ಬದನೆ: 60 ರಿಂದ 70 ರೂ. ಕ್ಯಾಪ್ಸಿಕಮ್: 60 ರಿಂದ 70 ರೂ. ನವಿಲು ಕೋಸು: 40 ರೂ. ಬೆಂಡೆ: 60 ರಿಂದ 70 ರೂ. ಹೀರೆ: 60 ರಿಂದ 80 ರೂ. ಪಡವಲ ಕಾಯಿ: 55 ರಿಂದ 60 ರೂ. ಟೊಮೆಟೊ: 40 ರಿಂದ 45 ರೂ. ಬಟಾಟೆ: 35 ರೂ. ಬೆಳ್ಳುಳ್ಳಿ: 50 ರಿಂದ 70 ರೂ. ಈರುಳ್ಳಿ: 22 ರಿಂದ 28 ರೂ. ಸೌತೆ: 45 ರಿಂದ 50 ರೂ. ಗೆಣಸು: 30 ರಿಂದ 45 ರೂ. ಸುವರ್ಣ: 35 ರಿಂದ 50 ರೂ. ಸೇಬು: 90 ರಿಂದ 120 ರೂ.ಕೊತ್ತಂಬರಿ ಸೊಪ್ಪು: 180 ರಿಂದ 220 ರೂ.

ಆದರೆ ಕೋಳಿ ಕೆ.ಜಿಗೆ : 150 ರಿಂದ 220 ರೂ, ಮೊಟ್ಟೆ: 5.50 ರೂ.ಬಂಗುಡೆ: 100 ರೂ, ಬೂತಾಯಿ: 100 ರೂ.,ಸಿಗಡಿ ಕೆ. ಜಿ.): 350 ರಿಂದ 500 ರೂ., ಅಂಜಾಲ್ (ಕೆ.ಜಿ.): 350 ರೂ.ಪಾಂಪ್ಲೆಟ್ (ಕೆ.ಜಿ.): 800 ರಿಂದ 1,000 ರೂ ಇದೆ. ಆದರೂ ಸಂಜೆಯ ಹೊತ್ತಿಗೆ ಗುಪ್ಪೆ ಹಾಕಿಟ್ಟ ಮೀನು ಮೇಲಿನ ದರದ 15% ಅಗ್ಗವಾಗಿ ದೊರೆಯುತ್ತದೆ.

Leave A Reply

Your email address will not be published.