ಅದೃಷ್ಟ ಕೈ ಹಿಡಿಯಿತು | ಆಟೋಚಾಲಕನಿಗೆ ಒಲಿದ 25 ಕೋಟಿಯ ಅದೃಷ್ಟ ಲಕ್ಷ್ಮೀ | ಆದರೆ ಇಲ್ಲೊಂದು ವಿಪರ್ಯಾಸವಿದೆ!!!
ಈ ಲಕ್ ( LUCK) ಎನ್ನುವುದು ಯಾರಿಗೆ ಯಾವಾಗ ಒಲಿಯುತ್ತೆ ಅನ್ನೋದು ನಿಜಕ್ಕೂ ಯಾರಿಗೂ ಗೊತ್ತಾಗಲ್ಲ. ದೇವರು ಕೊಟ್ಟರೆ ಯಾವ ರೀತಿ ಕೊಡ್ತಾನೆ ಅಂದರೆ ಎಲ್ಲಾ ಒಟ್ಟಿಗೆ ಕೊಡ್ತಾರೆ ಅಂತಾರಲ್ಲ ಆ ರೀತಿ.
ಕೇರಳದ ಓರ್ವ ಸಾಮಾನ್ಯ ವ್ಯಕ್ತಿ ಅನೂಪ್ ಎಂಬುವವರ ನಸೀಬು ಈಗ ಸಂಪೂರ್ಣ ಬದಲಾಗಿದೆ. ಅದೃಷ್ಟದ ಜೊತೆ ಸೆಣಸಾಡುವ ಆಸಕ್ತಿ ಇದ್ದ ಇವರು, ಲಾಟರಿ ಖರೀದಿಸುವ ಹವ್ಯಾಸ ಹೊಂದಿದ್ದರು. ಅದರ ಫಲ ಈಗ ದಿಢೀರ್ ಕೋಟ್ಯಾಧೀಶರಾಗಿದ್ದಾರೆ. ಅದು ಕೂಡಾ ಒಂದಾ ಎರಡಾ ಬರೋಬ್ಬರಿ ಒಂದೆರಡು ಕೋಟಿಯಲ್ಲ 25 ಕೋಟಿ ರೂಪಾಯಿ! ಕೇರಳ ಸರ್ಕಾರದ ಓಣಂ ಲಾಟರಿ ಈತನ ಬದುಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ಈ ಬಾರಿಯ ಓಣಂ ಇಷ್ಟೊಂದು ಸ್ಪೆಷಲ್ ಆಗಿರುತ್ತೆ ಅಂತ ಅನೂಪ್ ಕನಸಿನಲ್ಲೂ ಊಹಿಸಿರಲಿಲ್ಲ ಅನ್ಸುತ್ತೆ.
ಆದರೆ ವಿಪರ್ಯಾಸವೇನು ಗೊತ್ತೇ? ಅನೂಪ್ ಗೆದ್ದಿರುವುದು 25 ಕೋಟಿ ರೂ ಬಂಪರ್ ಲಾಟರಿ ಆದರೂ, ಇವರ ಕೈಗೆ ಸಿಗುವುದು ಮಾತ್ರ 15 ಕೋಟಿ ರೂಪಾಯಿ. ಹೌದು. ಇದಕ್ಕೆ ಕಾರಣ ತೆರಿಗೆ ಅನೂಪ್ ಗೆದ್ದಿರುವ ಅಷ್ಟೂ ಹಣಕ್ಕೆ ಶೇ 30 ಕ್ಕಿಂತಲೂ ಹೆಚ್ಚು ತೆರಿಗೆ ಕಟ್ಟಬೇಕು. ಹಾಗಾಗಿ, ಗೆದ್ದ 25 ಕೋಟಿ ರೂಪಾಯಿಗಳಲ್ಲಿ ಜೇಬು ಸೇರುವುದು 10 ಕೋಟಿ ರೂಪಾಯಿ ಮಾತ್ರ. ಹಾಗಂತ ಇದನ್ನು ಕೇವಲ ಹತ್ತು ಕೋಟಿ ರೂಪಾಯಿ ಎನ್ನಲು ಸಾಧ್ಯವಿಲ್ಲ.
ಅನೂಪ್ ಅವರು ಕೇರಳದ ರಾಜಧಾನಿ ತಿರುವನಂತಪುರಂನ ಶ್ರೀವರಹಂನಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ಹಾಗೂ ಇದಕ್ಕೂ ಮುನ್ನ ಹೊಟೇಲೊಂದರದಲ್ಲಿ ಅಡುಗೆ ಕೆಲಸ ಮಾಡಿದ ಅನುಭವ ಇತ್ತು. ಹಾಗೂ ಅದೇ ವೃತ್ತಿಯಲ್ಲಿದ್ದರು. ಹಾಗಾಗಿ ಮತ್ತೆ ಚಾಲಕ ವೃತ್ತಿ ಬಿಟ್ಟು ಅಡುಗೆ ಕೆಲಸಕ್ಕೆಂದು ಮಲೇಷಿಯಾ ದೇಶಕ್ಕೆ ಹೊರಡುವ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಇನ್ನು ಮುಂದೆ ಇವರು ಬದುಕು ಅರಸಿ ಹೊರ ದೇಶಕ್ಕೆ ಹೋಗುವ ಅವಶ್ಯಕತೆ ಇಲ್ಲ. ಇದಲ್ವಾ ಅದೃಷ್ಟವೆಂದರೆ!
ಕುತೂಹಲಕಾರಿ ಸಂಗತಿ ಏನೆಂದರೆ, ಟಿಕೆಟ್ ಖರೀದಿಸಲು 500 ರೂಪಾಯಿ ಹಣ ಹೊಂದಿಸಲು ಅನೂಪ್ ಸಾಕಷ್ಟು ಪರದಾಡಿದ್ದಾರೆ. ಹಾಗೂ ಹೀಗೂ 450 ರೂಪಾಯಿ ಹೇಗೋ ಹೊಂದಿಸಿದ್ದಾರೆ. ಇನ್ನೂ 50 ರೂಪಾಯಿ ಕಡಿಮೆಯಾಗಿತ್ತು. ಕೊನೆಗೆ ಭಾರವಾದ ಮನಸ್ಸಿನಿಂದ ಮಗನ ಪಿಗ್ಗಿ ಬ್ಯಾಂಕ್ನಲ್ಲಿದ್ದ ಹಣವನ್ನೂ ತೆಗೆದು ಟಿಕೆಟ್ ಖರೀದಿ ಮಾಡಿದ್ದಾಗಿ ಅನೂಪ್ ಹೇಳಿದ್ದಾರೆ.
ಒಂದು ವೇಳೆ ನಾನು ಲಾಟರಿ ಗೆಲ್ಲದೇ ಇರ್ತಿದ್ರೆ ನನ್ನ ಪತ್ನಿ ನನಗೆ ಬೈತಿದ್ಲು. ನಾನು ಲಾಟರಿ ಹೆಚ್ಚು ಖರೀದಿ ಮಾಡುವುದರಿಂದ, ಲಾಟರಿಗೆ ಹೆಚ್ಚು ಹಣ ಹಾಕದಂತೆ ಆಕೆ ನನಗೆ ಯಾವಾಗಲೂ ಬುದ್ಧಿವಾದ ಹೇಳುತ್ತಾ ಇರ್ತಾ ಇದ್ಳು ಎಂದು ಅನೂಪ್ ನಗುತ್ತಾ ಹೇಳುತ್ತಾರೆ. ಅನೂಪ್ ಅವರ ಪುಟ್ಟ ಕುಟುಂಬದಲ್ಲಿ ಪತ್ನಿ, ಮಗ ಹಾಗು ಅವರ ತಾಯಿ ಇದ್ದಾರೆ.