Color of Urine : ಮೂತ್ರದ ಬಣ್ಣದಲ್ಲಿದೆ ನಿಮ್ಮ ಆರೋಗ್ಯ ದ ರಹಸ್ಯ | ಹೇಗೆ ?
ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗವಾಗಿದ್ದು, ರಕ್ತದಲ್ಲಿರುವ ಕೊಳೆಯನ್ನು ಫಿಲ್ಟರ್ ಮಾಡುವ ಕೆಲಸ ಮಾಡಿ, ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ. ದೇಹವು ಯಾವುದೇ ಸಮಸ್ಯೆಯಿಲ್ಲದೆ ನಿರಂತರವಾಗಿ ಕಾರ್ಯಚಟುವಟಿಕೆಗಳಿಂದ ಇರಲು ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸುವುದು ಅತೀ ಅಗತ್ಯ.
ಕಿಡ್ನಿಯು ರಕ್ತದಲ್ಲಿರುವಂತಹ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರಗೆ ಹಾಕುವಂತಹ ಕೆಲಸ ಮಾಡುವುದು ಮೂತ್ರ ಎನ್ನುವುದು ನಮ್ಮ ದೇಹದಿಂದ ಹೊರಹೋಗುವ ದ್ರವರೂಪದ ತ್ಯಾಜ್ಯವಾಗಿದೆ. ಮೂತ್ರವು ನೀರು, ಯೂರಿಯಾ, ಉಪ್ಪಿನ ಮಿಶ್ರಣವಾಗಿದೆ. ಇದು ಕಿಡ್ನಿಯ ಮೂಲಕ ಮೂತ್ರಕೋಶಕ್ಕೆ ಬಂದು ನಂತರ ಮೂತ್ರ ವಿಸರ್ಜನೆಯ ಮೂಲಕ ದೇಹದಿಂದ ಹೊರಹಾಕಲ್ಪಡುತ್ತದೆ.
ಆರೋಗ್ಯವಾಗಿರುವ ವ್ಯಕ್ತಿಯು ಹೊರಹಾಕುವ ಮೂತ್ರವು ತಿಳಿ ಹಳದಿ ಬಣ್ಣದಲ್ಲಿರುತ್ತದೆ. ದೇಹಕ್ಕೆ ಬೇಕಾದಷ್ಟು ನೀರು ಕುಡಿದಿದ್ದರೆ, ಮೂತ್ರ ಬಣ್ಣರಹಿತವಾಗಿರುತ್ತದೆ. ಮೂತ್ರ ಹಳದಿ ಬಣ್ಣದಲ್ಲಿದ್ದರೆ ದೇಹಕ್ಕೆ ಇನ್ನೂ ನೀರಿನ ಅವಶ್ಯಕತೆಯಿದೆ ಎಂಬುದನ್ನು ತಿಳಿಯಬಹುದು. ದೇಹದ ಆರೋಗ್ಯಕ್ಕೆ ನೀರು ಅತಿಮುಖ್ಯವಾಗಿದ್ದು, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು.
ಮೂತ್ರದ ಪ್ರಮಾಣ ಮತ್ತು ನಿರಂತರತೆಯಲ್ಲಿ ಬದಲಾವಣೆಗಳು ಕಂಡುಬಂದರೆ ಆಗ ಇದು ಕಿಡ್ನಿಯು ಅಪಾಯದಲ್ಲಿದೆ ಎನ್ನುವುದರ ಸೂಚನೆ. ಆಗ ಜಾಗ್ರತೆ ವಹಿಸುವುದು ಅವಶ್ಯ. ಹೆಪಟೈಟಿಸ್, ಲಿವರ್ ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಈ ರೀತಿಯ ಆರೋಗ್ಯ ಸಮಸ್ಯೆಗಳಿದ್ದಾಗ ಮೂತ್ರ ಕಂದು ಬಣ್ಣಕ್ಕೆ ತಿರುಗುವುದು. ಮೂತ್ರದ ಬಣ್ಣದ ಜತೆಗೆ ನೋವು, ಜ್ವರ, ತಲೆಸುತ್ತು, ತೂಕ ಇಳಿಕೆ, ತ್ವಚೆ ಬಣ್ಣದಲ್ಲಿ ಬದಲಾವಣೆ ಕಂಡು ಬರುತ್ತದೆ. ಈ ರೀತಿಯ ಬದಲಾವಣೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಆರೋಗ್ಯದಲ್ಲಿ ಏರುಪೇರಾದಾಗ ಮಾತ್ರೆಗಳನ್ನು ಬಳಸುವುದು ಸಾಮಾನ್ಯ.ವಆದರೆ ಅತಿಯಾದ ಔಷಧಿ ಸೇವನೆಯಿಂದ ಜೊತೆಗೆ ಜೀವಸತ್ವಗಳು ಮತ್ತು ಕ್ಯಾನ್ಸರ್ ಮಾತ್ರೆಗಳ ಬಳಕೆಯು ಮೂತ್ರವು ನೀಲಿ ಅಥವಾ ಹಸಿರು ಬಣ್ಣಕ್ಕೆ ತಿರುಗಲು ಕಾರಣವಾಗಬಹುದು. ಕೆಲವೊಮ್ಮೆ ಆನುವಂಶಿಕ ಕಾಯಿಲೆ ಗಳಿಂದಲೂ ಕೂಡ ಮೂತ್ರದ ಬಣ್ಣ ಬದಲಾಗುತ್ತದೆ.
ಗುಲಾಬಿ ಅಥವಾ ಕೆಂಪು ಮೂತ್ರವು ಮೂತ್ರಪಿಂಡದ ಕಾಯಿಲೆಗಳು, ಗೆಡ್ಡೆಗಳು, ಪಿತ್ತಜನಕಾಂಗದ ಕಾಯಿಲೆಗಳು ಮತ್ತು ಪ್ರಾಸ್ಟೇಟ್ ಸಮಸ್ಯೆಗಳ ಅಪಾಯವನ್ನ ಹೆಚ್ಚಿಸುತ್ತದೆ. ಇದಲ್ಲದೇ, ಅತಿಯಾದ ಆಹಾರ ಸೇವನೆಯಿಂದಲೂ ಕೂಡ ಮೂತ್ರದ ಬಣ್ಣವನ್ನ ಬದಲಾಗುವ ಸಾಧ್ಯತೆಯಿದೆ.
ಮೂತ್ರವು ಜೇನುತುಪ್ಪದ ಬಣ್ಣದಲ್ಲಿದ್ದರೆ ನಿರ್ಜಲೀಕರಣದ ಲಕ್ಷಣವೆಂದು ತಿಳಿಯಬಹುದು.
ಅತಿಯಾದ ಮದ್ಯಪಾನ ಮಾಡುವ , ಅತಿಯಾದ ಉಪ್ಪಿನ ಪದಾರ್ಥಗಳ ಸೇವನೆಯ ಅಭ್ಯಾಸವಿದ್ದರೂ ಕೂಡ ಮೂತ್ರದ ಬಣ್ಣ ಬದಲಾವಣೆಯಾಗುತ್ತದೆ.
ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ರಕ್ಷಾ ಕವಚದಂತೆ ಮಹತ್ತರ ಪಾತ್ರ ವಹಿಸುತ್ತದೆ.