ಈ ಬಾರಿಯ ಸೈಮಾ ಅವಾರ್ಡ್ ಬೆಸ್ಟ್ ನಟ-ನಟಿ ಪ್ರಶಸ್ತಿ ಯಾರಿಗೆ?

ಈ ಬಾರಿಯ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ನಮ್ಮ ಬೆಂಗಳೂರಿನಲ್ಲೇ ನಡೆಯಿತು. ಇದೇ ಮೊದಲ ಬಾರಿಗೆ ಇತರೆ ಚಿತ್ರರಂಗದ ಕಲಾವಿದರು ತಾವು ಗೆದ್ದ ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ದಿನ ಕನ್ನಡ ಹಾಗೂ ತೆಲುಗು ಚಿತ್ರರಂಗದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು ಹಾಗೂ ಭಾನುವಾರ ತಮಿಳು ಮತ್ತು ಮಲಯಾಳಂ ಚಿತ್ರರಂಗದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.

 

ಇನ್ನು ಈ ಬಾರಿಯ ಸೈಮಾಗೆ ನಾಮಿನೇಷನ್ ಪ್ರಕಟಗೊಂಡಾಗ ದರ್ಶನ್ ಅಭಿಮಾನಿಗಳಲ್ಲಿ ಇದ್ದ ಖುಷಿ ಕಾರ್ಯಕ್ರಮ ಮುಕ್ತಾಯವಾದ ನಂತರ ಇಲ್ಲ ಎಂದೇ ಹೇಳಬಹುದು. ಏಕೆಂದರೆ ಹತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಗೆದ್ದದ್ದು ಮಾತ್ರ ಮೂರು ವಿಭಾಗಗಳಲ್ಲಿ. ರಾಬರ್ಟ್ ಪರ ನಿರ್ದೇಶಕ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಸುಧಾಕರ್ ರಾಜ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಹಾಗೂ ಅರ್ಜುನ್ ಜನ್ಯಾ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.ಅತ್ತ ಇದೇ ಮೊದಲ ಬಾರಿಗೆ ಸೈಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ದರ್ಶನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗುವುದು ಪಕ್ಕಾ ಎಂಬ ನಿರೀಕ್ಷೆಯಿತ್ತು. ಆದರೆ, ಈ ನಿರೀಕ್ಷೆ ನಿಜವಾಗಲೇ ಇಲ್ಲ.

ಈ ಬಾರಿ ಕನ್ನಡದ ಪೈಕಿ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು. ಪುನೀತ್ ಅವರ ನಟನೆಗೆ ಅವಾರ್ಡ್ ದೊರಕಿದ್ದು ಸರಿ, ಆದರೆ ಇತರೆ ಭಾಷೆಗಳಂತೆ ಕನ್ನಡದಲ್ಲಿ ಯಾಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಎರಡು ವಿಭಾಗಗಳಲ್ಲಿ ನೀಡಲಿಲ್ಲ ಎಂಬ ವಿಚಾರ ಈಗ ಗೊಂದಲ ಹಾಗೂ ಅನುಮಾನಗಳಿಗೆ ಕಾರಣವಾಗಿದೆ.


ಎಲ್ಲಾ ಭಾಷೆಗಳಲ್ಲೂ ಎರಡು ವಿಭಾಗಗಳಲ್ಲಿ ಬೆಸ್ಟ್ ನಟ ಪ್ರಶಸ್ತಿ ವಿತರಣೆ
ಈ ಬಾರಿಯ ಸೈಮಾದಲ್ಲಿ ತೆಲುಗಿನಲ್ಲಿ ಅತ್ಯುತ್ತಮ ನಟ ಅಲ್ಲು ಅರ್ಜುನ್‌ಗೆ ಸಿಕ್ಕಿತು ಹಾಗೂ ಕ್ರಿಟಿಕ್ಸ್ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ ನವೀನ್ ಪೊಲಿಶೆಟ್ಟಿಗೆ ಸಿಕ್ಕಿತು. ಅತ್ತ ತಮಿಳಿನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಶಿವಕಾರ್ತಿಕೇಯನ್‌ಗೆ ಹಾಗೂ ಕ್ರಿಟಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಆರ್ಯಗೆ ದೊರಕಿತು. ಇನ್ನು ಮಲಯಾಳಂನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಮಿನ್ನಲ್ ಮುರಳಿ ನಟ ಟೊವಿನೋ ಥಾಮಸ್‌ಗೆ ಹಾಗೂ ಕ್ರಿಟಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಬಿಜು ಮೆನನ್ ಅವರಿಗೆ ಸಂದಿದೆ.


ಕನ್ನಡದಲ್ಲಿ ನೀಡಲಿಲ್ಲ ಕ್ರಿಟಿಕ್ಸ್ ಅವಾರ್ಡ್!

ಇನ್ನು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಇಬ್ಬರು ನಟರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಆದರೆ, ಕನ್ನಡದಲ್ಲಿ ಮಾತ್ರ ಕ್ರಿಟಿಕ್ಸ್ ಅಡಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡದೇ ಇರುವುದು ಇದೀಗ ಗೊಂದಲಕ್ಕೆ ಕಾರಣವಾಗಿದೆ. ಇನ್ನು ಇದೇ ಮೊದಲ ಬಾರಿಗೆ ಸೈಮಾದಲ್ಲಿ ಕನ್ನಡ ಕ್ರಿಟಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ನೀಡದೇ ಕೈಬಿಡಲಾಗಿದೆ.


ನಟಿಗೂ ಕ್ರಿಟಿಕ್ಸ್ ಅವಾರ್ಡ್, ನಟನಿಗಿಲ್ಲ, ಇಲ್ಲೇ ಉಂಟಾಯ್ತಾ ದರ್ಶನ್‌ಗೆ ಹಿನ್ನಡೆ?
ಇನ್ನು ಈ ಬಾರಿಯ ಸೈಮಾದಲ್ಲಿ ಕನ್ನಡದ ನಟಿಯರಾದ ಆಶಿಕಾ ರಂಗನಾಥ್‌ಗೆ ಅತ್ಯುತ್ತಮ ನಟಿ ಹಾಗೂ ಬಡವ ರಾಸ್ಕಲ್ ಚಿತ್ರದ ನಟಿ ಅಮೃತ ಐಯ್ಯಂಗಾರ್‌ಗೆ ಕ್ರಿಟಿಕ್ಸ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಯಿತು. ಹೀಗೆ ನಟಿಗೆ ಕ್ರಿಟಿಕ್ಸ್ ಅಡಿಯಲ್ಲಿ ಪ್ರಶಸ್ತಿ ನೀಡಿರುವಾಗ ನಟನಿಗೇಕಿಲ್ಲ ಎಂಬ ಪ್ರಶ್ನೆ ಎದ್ದಿದೆ ಹಾಗೂ ಕ್ರಿಟಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಇದ್ದಿದ್ದರೆ ರಾಬರ್ಟ್ ಅಭಿನಯಕ್ಕೆ ದರ್ಶನ್ ಅವರಿಗೆ ಕ್ರಿಟಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಸಿಗುತ್ತಿತ್ತೇನೋ!



ಇನ್ನು ಬೇಸರದ ಸುದ್ದಿಯೇನೆಂದರೆ ಈ ಬಾರಿ ತಮಿಳಿನ ಅತ್ಯುತ್ತಮ ನಟ ಪ್ರಶಸ್ತಿ ಶಿವಕಾರ್ತಿಕೇಯನ್‌ಗೆ ಹಾಗೂ ಕ್ರಿಟಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಆರ್ಯಗೆ ಸಿಕ್ಕಿದೆ. ಈ ಎರಡು ಪ್ರಶಸ್ತಿ ಮಾತ್ರವಲ್ಲದೇ ಮಾನಾಡು ಚಿತ್ರದ ನಟನೆಗಾಗಿ ಸಿಲಂಬರಸನ್‌ಗೆ ಕೂಡ ಅತ್ಯುತ್ತಮ ಪ್ರಶಸ್ತಿ ನೀಡಲಾಗಿದೆ. ಹೀಗೆ ತಮಿಳಿನಲ್ಲಿ ಮೂವರು ನಟರಿಗೆ ಪ್ರಶಸ್ತಿ ನೀಡಿರುವ ಸೈಮಾ ಕನ್ನಡದಲ್ಲೇಕೆ ನೀಡಿಲಿಲ್ಲ ಎಂಬುದು ಸದ್ಯ ಪ್ರಶ್ನೆಯಾಗಿದೆ.

Leave A Reply

Your email address will not be published.