210 ನಿಮಿಷ ಹೃದಯ ಕೆಲಸ ಮಾಡದೇ ನಿಂತರೂ ಬದುಕುಳಿದ ಮಹಿಳೆ | ವೈದ್ಯಕೀಯ ಲೋಕದಲ್ಲೇ ತಲ್ಲಣ ಮೂಡಿಸಿದ ಘಟನೆ
ಪ್ರಪಂಚ ಎಷ್ಟು ವಿಸ್ಮಯ ಅಂದ್ರೆ ಇಲ್ಲಿ ಅಸಾಧ್ಯ ಎನಿಸುವ ಅದೆಷ್ಟೋ ಘಟನೆಗಳು ಸಾಧ್ಯವಾಗುತ್ತದೆ. ಕೆಲವೊಂದು ಸಲ ಅರಗಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಇಂತಹ ಅನೇಕ ಉದಾಹರಣೆಗಳು ಮನುಷ್ಯನ ಸಾವು-ಬದುಕಿನ ಹಂತದಲ್ಲಿ ನೋಡಬಹುದಾಗಿದೆ. ಅವರು ಬದುಕುವುದೇ ಅಸಾಧ್ಯ ಅಂದುಕೊಂಡಾಗ ಆರೋಗ್ಯವಾಗಿ ಎದ್ದು ಕೂತಿರೋ ಘಟನೆಗಳು ನಡೆದರೆ, ಅವರಿಗೆ ಏನೂ ಆಗುವುದಿಲ್ಲ ಅಂದ ಮರುಕ್ಷಣಕ್ಕೆ ಕಣ್ಣು ಮುಚ್ಚಿದಂತಹ ಅದೆಷ್ಟೋ ಪ್ರಕರಣಗಳು ಮನುಷ್ಯ ಜೀವನದಲ್ಲಿ ನಾವು ಕಂಡ ಕೆಲವೊಂದು ವಿಸ್ಮಯಗಳು.
ಅದೇ ರೀತಿ ಇಲ್ಲೊಂದು ಕಡೆ ಯಾರೂ ಊಹಿಸದ ರೀತಿಯಲ್ಲಿ ಘಟನೆ ನಡೆದಿದೆ. ಹೌದು. 210 ನಿಮಿಷ ಹೃದಯ ಕೆಲಸ ಮಾಡದೇ ನಿಂತರೂ ಮಹಿಳೆಯೊಬ್ಬರು ಬದುಕಿರುವ ಘಟನೆ ಬೆಳಕಿಗೆ ಬಂದಿದೆ. ವಿಸ್ಮಯಕಾರಿ ಘಟನೆ ಉತ್ತರಪ್ರದೇಶ ಮೀರತ್‌ಲಾಲಾ ಲಜಪತ್ ರಾಯ್ ಮೆಮೊರಿಯಲ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದು, ಕಂಕರ್ ಖೇಡಾ ನಿವಾಸಿ 34 ವರ್ಷದ ಕವಿತಾ ರಾಜು ಅವರೇ ಅದೃಷ್ಟಶಾಲಿ ಮಹಿಳೆಯಾಗಿದ್ದು, ಪವಾಡ ಸದೃಶ್ಯವಾಗಿ ವೈದ್ಯರು ಕವಿತಾ ಅವರ ಪ್ರಾಣ ಉಳಿಸಿದ್ದದಾರೆ.
ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ಅವರ 210 ನಿಮಿಷ ಹೃದಯ ನಿಂತಿತ್ತು. ಆದರೂ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಒಂದು ವೇಳೆ ಶಸ್ತ್ರ ಚಿಕಿತ್ಸೆ ಮಾಡುವಾಗ 3 ನಿಮಿಷ ಕಾಲ ಮೆದುಳಿಗೆ ರಕ್ತ ಪೂರೈಕೆ ಆಗಿಲ್ಲವೆಂದ್ರೆ ಮೆದುಳು ನಿಷ್ಕ್ರೀಯಗೊಳ್ಳುವ ಸಾಧ್ಯತೆ ಇರುತ್ತದೆ. ಅಂತದರಲ್ಲಿ, ಇಷ್ಟು ಸುದೀಘ್ರ ಅವಧಿಯವರೆಗೆ ಸಹಜ ಹೃದಯ ಬಡಿತವನ್ನು ನಿಲ್ಲಿಸಿರುವುದು ವೈದ್ಯಕೀಯ ಲೋಕದಲ್ಲೇ ತಲ್ಲಣ ಮೂಡಿಸಿದೆ.
ಕವಿತಾ ಅವರು ಕಳೆದ ಎರಡು ವರ್ಷಗಳಿಂದ ಅಸಹಜ ಹೃದಯ ಬಡಿತ ಮತ್ತು ಎದೆ ನೋವಿನಿಂದ ಬಳಲುತ್ತಿದ್ದರು. ಹಲವು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಲೋಚನೆ ನಡೆಸಿದರೂ, ಚಿಕಿತ್ಸೆ ಮಾತ್ರ ಸಿಕ್ಕಿರಲಿಲ್ಲ. ಅವರು ಮೀರತ್ ವೈದ್ಯಕೀಯ ಕಾಲೇಜಿನ ಕಾರ್ಡಿಯೋ ಥೋರಾಸಿಕ್ ಸರ್ಜನ್ ಜತೆ ಸಮಾಲೋಚನೆ ನಡೆಸಿದರು.
ಅವರನ್ನು ಪರೀಕ್ಷೆ ಮಾಡಿದಾಗ ಮಿಟ್ರಲ್ ವಾಲ್ವ್ ಹಾನಿಗೊಳಗಾಗಿರುವುದು ಕಂಡುಬಂದಿತ್ತು. ಮಿಟ್ರಲ್ ಕವಾಟವನ್ನು ಬದಲಿಸಲು ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿ ಇದೀಗ ಯಶಸ್ವಿಯಾಗಿದ್ದೇವೆ ಎಂದು ವೈದ್ಯಕೀಯ ಕಾಲೇಜಿನ ಮಾಧ್ಯಮ ಪ್ರಭಾರಿ ಡಾ. ವಿ.ಡಿ. ಪಾಂಡೆ ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ಎಂಬುದು ರೋಗಿಯ ಸಾವು-ಬದುಕನ್ನು ನಿರ್ಧರಿಸುವ ಹಂತವೆಂದೇ ಹೇಳಬಹುದು. ಹೀಗಾಗಿ, ಪ್ರತಿಯೊಬ್ಬ ರೋಗಿಗಳು ಶಸ್ತ್ರ ಚಿಕಿತ್ಸೆಯ ವೇಳೆ 3 ನಿಮಿಷ ತುಂಬಾ ಅಮೂಲ್ಯವಾಗಿದೆ. ಆದರೆ ಈ ಪ್ರಕರಣದಲ್ಲಿ 210 ನಿಮಿಷ ಹೃದಯ ಬಡಿತವನ್ನೇ ನಿಲ್ಲಿಸಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದೀಗ ವೈದ್ಯರ ಈ ಕೆಲಸಕ್ಕೆ ಎಲ್ಲರಿಂದಲೂ ಭಾರೀ ಶ್ಲಾಘನೆ ವ್ಯಕ್ತವಾಗಿದೆ.