ಗ್ರಾಮೀಣ ಜನತೆಗೆ ಸಿಹಿಸುದ್ದಿ | ಒತ್ತುವರಿ ವಿರುದ್ಧ ಇಲ್ಲ ಕ್ರಿಮಿನಲ್ ಕೇಸ್

ಬೆಂಗಳೂರು: ರೈತರು, ಗ್ರಾಮೀಣ ಜನತೆಗೆ ಸಿಹಿಸುದ್ದಿಯೊಂದಿದ್ದು, ಇನ್ನು ಮುಂದೆ ಒತ್ತುವರಿ ವಿರುದ್ಧ ಕ್ರಿಮಿನಲ್ ಕೇಸ್ ಇರುವುದಿಲ್ಲ. ಹಳ್ಳಿಗಳಲ್ಲಿ ಒತ್ತುವರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸದಿರಲು ಮಸೂದೆ ತರಲಾಗಿದೆ.

ರಾಜ್ಯ ಸರ್ಕಾರ ಹೊಸದಾಗಿ ರೂಪಿಸುತ್ತಿರುವ ಕಾನೂನಿನ ಪ್ರಕಾರ ಒತ್ತುವರಿ ಜಮೀನನ್ನು ಒತ್ತುವರಿದಾರರಿಗೆ ಗುತ್ತಿಗೆ ನೀಡಲು ಕೂಡ ಅವಕಾಶವಿದೆ. ಇದರಿಂದ ರೈತರು, ಒತ್ತುವರಿದಾರರಿಗೆ ಕಿರುಕುಳ ತಪ್ಪಲಿದೆ ಎಂದು ಹೇಳಲಾಗಿದೆ. ಮಹತ್ವದ ಮಸೂದೆ ಅಂಗೀಕಾರವಾದಲ್ಲಿ ರೈತರು, ಕಾಫಿ ಬೆಳೆಗಾರರ ಮೇಲೆ ಭೂಕಬಳಿಕೆ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ನಿಲ್ಲಲಿದೆ.

ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣಗಳನ್ನು ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ವ್ಯಾಪ್ತಿಯಿಂದ ಕೈ ಬಿಡಲು ರಾಜ್ಯ ಸರ್ಕಾರದಿಂದ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲಾಗಿದೆ.

ಮಹಾನಗರ ಪಾಲಿಕೆಗಳು, ಬಿಬಿಎಂಪಿ ವ್ಯಾಪ್ತಿಯಲ್ಲಿನ ಸರ್ಕಾರ, ಹಿಂದೂ ಧಾರ್ಮಿಕ ಸಂಸ್ಥೆಗಳು, ವಕ್ಫ್, ಸ್ಥಳೀಯ ಪ್ರಾಧಿಕಾರಗಳು, ಸರ್ಕಾರದ ಒಡೆತನ ನಿಯಂತ್ರಣ ವ್ಯವಸ್ಥೆಯಲ್ಲಿರುವ ಜಾಗದ ಒತ್ತುವರಿ ಹೊರತುಪಡಿಸಿ ಉಳಿದ ಪ್ರದೇಶದ ಒತ್ತುವರಿಗಳನ್ನು ಭೂಕಬಳಿಕೆ ನಿಷೇಧ ಕಾಯ್ದೆಯಿಂದ ಕೈ ಬಿಡಲಾಗಿದೆ. ಇದರಿಂದ, ಆರೋಪಿತರು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಅಲೆದಾಡುವುದು ಕೂಡ ತಪ್ಪಲಿದೆ.

ಈ ಮೂಲಕ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದ ರೈತರು, ಕಾಫಿ ಬೆಳೆಗಾರರಂತಹವರ ಮೇಲೆ ‘ಭೂ ಕಬಳಿಕೆ’ ಅಡಿ ಕ್ರಿಮಿನಲ್‌ ಪ್ರಕರಣಗಳು ದಾಖಲಿಸುವುದು ತಪ್ಪಲಿದೆ. ಅಲ್ಲದೆ, ಪ್ರತಿಯೊಬ್ಬ ಒತ್ತುವರಿ ಆರೋಪಿತ ರೈತನೂ ಬೆಂಗಳೂರಿನಲ್ಲಿರುವ ಭೂ ಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ಅಲೆದು ಕಿರುಕುಳ ಅನುಭವಿಸುವುದು ತಪ್ಪಲಿದೆ.

ಭೂ ಕಬಳಿಕೆ ತಡೆಯಲು ಭೂ ಕಬಳಿಕೆ ನಿಷೇಧ ಕಾಯಿದೆ ರೂಪಿಸಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಇದರಡಿ ಪ್ರಕರಣ ದಾಖಲಾದರೆ ಒಂದು ಗುಂಟೆ ಒತ್ತುವರಿ ಮಾಡಿದ್ದರೂ ದಂಡ ವಿಧಿಸಿ ವ್ಯಕ್ತಿಯನ್ನು ಬಂಧಿಸಲು ಅವಕಾಶವಿದೆ. ಒತ್ತುವರಿ ತೆರವು ಮಾಡಿದ್ದರೂ ‘ಕಬಳಿಕೆ’ ಪ್ರಕರಣ ಮುಂದುವರೆಯುತ್ತಿತ್ತು. ಜತೆಗೆ ಯಾವುದೇ ಜಿಲ್ಲೆಯಲ್ಲಿ ಪ್ರಕರಣ ದಾಖಲಾದರೂ ಬೆಂಗಳೂರಿನ ಭೂ ಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ಆಗಮಿಸಿ ಪ್ರಕರಣದ ಎದುರಿಸಬೇಕು. ಇದನ್ನೇ ನೆಪ ಮಾಡಿಕೊಂಡು ಕೃಷಿಕರಿಗೆ ಕಂದಾಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು. ಇದೀಗ ರೈತರಿಗೆ ಇದರಿಂದ ಮುಕ್ತಿ ದೊರಕಿದೆ.

Leave A Reply

Your email address will not be published.